ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಕೊರತೆ, ಹಾಳಾಗುತ್ತಿದೆ ಉದ್ಯಾನ

ಲಾಕ್‌ಡೌನ್‌ ತೆರವಾಗಿದ್ದರೂ ಉದ್ಯಾನಕ್ಕೆ ಬೀಗ, ಸಾರ್ವಜನಿಕರಿಗೆ ನಿಷೇಧ
Last Updated 28 ಮಾರ್ಚ್ 2021, 5:05 IST
ಅಕ್ಷರ ಗಾತ್ರ

ಕಲಬುರ್ಗಿ: ಎಲ್ಲೆಂದರಲ್ಲಿ ಒಣ ಹುಲ್ಲಿನ ರಾಶಿ, ನೀರಿಲ್ಲದೆ ಒಣಗುತ್ತಿರುವ ಗಿಡಮರಗಳು, ಉದುರಿಬಿದ್ದ ಎಲೆಗಳು, ತುಕ್ಕು ಹಿಡಿಯುವ ದುಸ್ಥಿತಿಯಲ್ಲಿ ಮಕ್ಕಳ ಆಟಿಕೆಗಳು, ಇಂದೋ ನಾಳೆ ಬೀಳುವಂತಿರುವ ಜಿಂಕೆ, ಡೈನೋಸಾರ್‌ ಪ್ರತಿಮೆಗಳು..

ಕಲಬುರ್ಗಿ ನಗರದ ಹೊರವಲಯದಲ್ಲಿನ ಕೆಸರಟಗಿ ಉದ್ಯಾನದ ದುಸ್ಥಿತಿ ಇದು. ಮರತೂರ ಮುಖ್ಯರಸ್ತೆಯ ಬದಿಯಲ್ಲಿ 2007ರಲ್ಲಿ ತೋಟಗಾರಿಕೆ ಇಲಾಖೆಯಿಂದ ಉದ್ಘಾಟನೆಗೊಂಡ ಈ ಉದ್ಯಾನಕ್ಕೆ ಸದ್ಯ ಬೀಗ ಹಾಕಲಾಗಿದೆ. ಉದ್ಯಾನದ ನಿರ್ವಹಣೆಗಾಗಲೀ, ಭದ್ರತೆಗಾಗಲೀ ಯಾವೊಬ್ಬ ಸಿಬ್ಬಂದಿಯೂ ಇಲ್ಲಿಲ್ಲ. ಹಗಲಿನಲ್ಲೇ ಇದೊಂದು ಸ್ಮಶಾನದಂತೆ ಭಾಸವಾಗುತ್ತಿದೆ.

ಉದ್ಯಾನದಲ್ಲಿ ಮಕ್ಕಳು ಆಟವಾಡಲು ಜೋಕಾಲಿ, ಜಾರುಬಂಡೆಯಂತಹ ಆಟಿಕೆಗಳಿವೆ. ಸುಸ್ತಾದಾಗ ಕುಳಿತು ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಕಟ್ಟೆಗಳಿವೆ. ಮಕ್ಕಳು ಕುತೂಹಲದಿಂದ ನೋಡಲು ಜಿಂಕೆ, ಡೈನೋಸಾರ್, ಜಿರಾಫೆ ಪ್ರತಿಮೆಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಬಯಲು ರಂಗಮಂದಿರವೂ ಇದೆ. ಆದರೆ ಇವುಗಳಲ್ಲಿ ಯಾವೊಂದು ಕೂಡ ಸರಿಯಾಗಿಲ್ಲ.

ನಿರ್ವಹಣೆ ಕೊರತೆಯಿಂದಾಗಿ ಉದ್ಯಾನದಲ್ಲಿನ ಬಹುತೇಕ ಆಟಿಕೆಗಳು, ಸಾಮಗ್ರಿಗಳು ಹಾಳಾಗುತ್ತಿವೆ. ಗಿಡಗಳಂತೂ ನೀರಿಲ್ಲದೆ ಒಣಗುತ್ತಿವೆ. ಉದ್ಯಾನದಲ್ಲೇ ಒಂದು ಬಾವಿಯಿದೆ. ಆ ಬಾವಿಯಿಂದ ನೀರು ಹಾಕಲು ಕೂಡ ಇಲ್ಲಿ ಯಾರೊಬ್ಬರೂ ಇಲ್ಲ.

ಕೋವಿಡ್ ದಿನಗಳು ಆರಂಭಕ್ಕೂ ಮುನ್ನ ಕೆಸರಟಗಿ, ಕೆಸರಟಗಿ ತಾಂಡಾ, ಚಂದುನಾಯಕ ತಾಂಡಾ, ವಾಜಪೇಯಿ ಆಶ್ರಯ ಕಾಲೊನಿ ನಿವಾಸಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹಾಗೂ ಕಲಬುರ್ಗಿ ನಗರದ ಜನರು ಕೂಡ ಉದ್ಯಾನಕ್ಕೆ ಬರುತ್ತಿದ್ದರು. ಆದರೀಗ ನಿರ್ವಹಣೆ ಕೊರತೆಯಿಂದ ಉದ್ಯಾನದ ಬಾಗಿಲು ಮುಚ್ಚಿದ್ದು, ಸಾರ್ವಜನಿಕರ ಪ್ರವೇಶಕ್ಕೂ ನಿಷೇಧ ಹೇರಲಾಗಿದೆ ಎನ್ನುತ್ತಾರೆ ಕೆಸರಟಗಿ ತಾಂಡಾದ ನಿವಾಸಿಗಳು.

‘ಲಾಕ್‌ಡೌನ್‌ ತೆಗೆದು ಹಲವು ತಿಂಗಳು ಕಳೆದರೂ ಉದ್ಯಾನಕ್ಕೆ ಹಾಕಿದ ಬೀಗ ತೆಗೆದಿಲ್ಲ. ಅದನ್ನು ಸರಿಯಾಗಿ ನಿರ್ವಹಣೆ ಮಾಡುವವರೂ ಇಲ್ಲ’ ಎನ್ನುತ್ತಾರೆ ಚಂದುನಾಯಕ ತಾಂಡಾದ ವಿದ್ಯಾರ್ಥಿಗಳಾದ ನಿಹಾಲ್‌ ಹಾಗೂ ವಿನೀತ್.

‘ಶೀಘ್ರವೇ ಉದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡಬೇಕು. ಉದ್ಯಾನದ ನಿರ್ವಹಣೆಗಾಗಿ ಸಿಬ್ಭಂದಿಯನ್ನು ನೇಮಿಸಬೇಕು. ಮಾದರಿ ಉದ್ಯಾನವನ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕೆಸರಟಗಿ ಗ್ರಾಮದ ನಿವಾಸಿಗಳು
ಒತ್ತಾಯಿಸಿದರು.

ಅನಾಥವಾಯ್ತಾ ಉದ್ಯಾನ?

ಉದ್ಯಾನದ ಬಗ್ಗೆ ಮಾಹಿತಿ ಪಡೆಯಲು ಹಲವು ಇಲಾಖೆಗಳನ್ನು ಸಂಪರ್ಕಿಸಿದರೂ ಸಮರ್ಪಕ ಮಾಹಿತಿ ಲಭ್ಯವಾಗಲಿಲ್ಲ. ಉದ್ಯಾನದಲ್ಲಿ ‘ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಗಿದೆ’ ಎಂಬ ನಾಮಫಲಕ ಇದೆ. ಹೀಗಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್ ಅವರನ್ನು ಮಾಹಿತಿ ಕೇಳಿದಾಗ ‘ನಮ್ಮ ವ್ಯಾಪ್ತಿಗೆ ಉದ್ಯಾನ ಬರಲ್ಲ’ ಎಂದರು. ‘ಉದ್ಯಾನ ಆರಂಭವಾಗುವಾಗ ಪ್ರಾಧಿಕಾರದಿಂದ ₹50 ಲಕ್ಷ ದೇಣಿಗೆ ನೀಡಲಾಗಿತ್ತು. ಅದರ ನಿರ್ವಹಣೆ ಎಲ್ಲಾ ತೋಟಗಾರಿಕೆ ಇಲಾಖೆಗೆ ಬರುತ್ತೆ’ ಎಂದು ತಿಳಿಸಿದರು.

‘ಉದ್ಯಾನದ ಪಕ್ಕದಲ್ಲಿರುವ ನರ್ಸರಿ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ವಿವಿಧ ತಳಿಯ ಗಿಡಗಳನ್ನು ರೈತರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತೇವೆ. ಉದ್ಯಾನದ ನಿರ್ವಹಣೆ ನಮ್ಮ ಇಲಾಖೆಯದ್ದಲ್ಲ. ಜಿಲ್ಲಾಧಿಕಾರಿ ಕಚೇರಿಯೇ ಅದನ್ನು ನಿರ್ವಹಿಸುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರ ಪಟವಾರಿ ತಿಳಿಸಿದರು.

ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಮರುದಿನ ಕರೆ ಸ್ವೀಕರಿಸಲಿಲ್ಲ.

ಉದ್ಯಾನದ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT