ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ | ಹೋರಿ ಮೇಲೆ ಚಿರತೆ ದಾಳಿ

Published 23 ಜೂನ್ 2024, 16:13 IST
Last Updated 23 ಜೂನ್ 2024, 16:13 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ಯಾಗಾಪುರ ಮತ್ತು ಬೆಳಗೇರಾ ಗ್ರಾಮಗಳ ನಡುವೆ ಅಡವಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಮಲ್ಲಪ್ಪ ಮಪಟ್ನಳ್ಳಿ ಎಂಬುವರ ಹೋರಿ ಗಾಯಗೊಂಡ ಘಟನೆ ಶನಿವಾರ ಜರುಗಿದೆ.

ಮೇಯಿಸಲು ಗುಡ್ಡದ ಸಮೀಪ ದನಕರು ಹೊಡೆದುಕೊಂಡು ಹೋದಾಗ ಚಿರತೆ ದಾಳಿ ಮಾಡಿದೆ. ಅದನ್ನು ಗಮನಿಸಿ ದನಗಾಹಿಗಳು ಜೋರಾಗಿ ಚೀರಾಡಿದಾಗ ಭಯಗೊಂಡ ಚಿರತೆ ಹೋರಿಯನ್ನು ಬಿಟ್ಟು ಓಡಿ ಹೋಗಿದೆ. ಹೋರಿಯ ಕತ್ತಿಗೆ ರಕ್ತಗಾಯವಾಗಿದೆ. ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕಳೆದ ಒಂದು ವಾರದಿಂದ ಅನೇಕ ರೈತರ, ಜನರ ಕುರಿ, ಆಡು, ದನಕರು ಮೇಲೆ ದಾಳಿ ಮಾಡಿ ಕೊಂದು ತಿಂದಿದೆ. ಚಿರತೆ ದಾಳಿಯಿಂದ ಜನರು ಕುರಿ, ಆಡುಗಳನ್ನು ಮಾರಾಟ ಮಾಡುತ್ತಿದ್ದಾರೆ. ಗುಡ್ಡದಲ್ಲಿ ಗಿಡಮರಗಳು ಸೊಂಪಾಗಿ ಬೆಳೆದಿದ್ದರಿಂದ ಚಿರತೆ ಓಡಾಡುವುದು ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ. ರೈತರಿಗೆ, ದನಕರು ಮೇಯಿಸುವವರಿಗೆ ಆತಂಕ, ಭಯ ಕಾಡುತ್ತಿದೆ ಎಂದು ಯಾಗಾಪುರ ಗ್ರಾಮಸ್ಥ ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಚಿರತೆಯು ಯಾಗಾಪುರ, ಬೆಳಗೇರಾ ಗ್ರಾಮಗಳ ಸಮೀಪದ ಗುಡ್ಡದಲ್ಲಿ ಓಡಾಡುತ್ತಿದೆ. ಆಹಾರ ಅರಸಿಕೊಂಡು ಗುಡ್ಡದಿಂದ ಹೊರಗೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಂದು ಎಳೆದುಕೊಂಡು ಹೋಗುತ್ತಿರುವ ಘಟನೆಗಳು ಅಗಾಗ ನಡೆಯುತ್ತಲೇ ಇವೆ. ಅರಣ್ಯ ಇಲಾಖೆಯವರು ಚಿರತೆಯನ್ನು ಸೆರೆ ಹಿಡಿದು ಜನರಿಗೆ, ರೈತರಿಗೆ, ದನಗಾಹಿಗಳಿಗೆ ಕಾಡುತ್ತಿರುವ ಭಯ, ಆತಂಕ ನಿವಾರಿಸಬೇಕು. ಜಾನುವಾರು ಹಾನಿಯಿಂದ ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ ಎಂದು ಜನರು ಕಳವಳ ವ್ಯಕ್ತ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT