ಸೋಮವಾರ, ಮಾರ್ಚ್ 20, 2023
30 °C
ಭೈರಾಮಡಗಿ ಗ್ರಾಮದಲ್ಲಿ ರೈತರಿಗೆ ಬೆಳೆಸಾಲ ವಿತರಣೆ

ಸಾಲ ಮನ್ನಾದ ರೈತರಿಗೂ ಶೀಘ್ರ ಸಾಲ: ತೆಲ್ಕೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಈವರೆಗೆ ಸಾಲ ಪಡೆಯದ ರೈತರಿಗೆ ಮೊದಲ ಆದ್ಯತೆ ನೀಡಿ ಈಗ ಬೆಳೆ ಸಾಲ ವಿತರಿಸಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸಾಲ ಮನ್ನಾದ ರೈತರಿಗೂ ಹೊಸದಾಗಿ ಬೆಳೆಸಾಲ ನೀಡಲಾಗುವುದು ಎಂದು ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ ಹೇಳಿದರು.

ಅಫಜಲಪುರ ತಾಲ್ಲೂಕಿನ ಭೈರಾಮಡಗಿಯಲ್ಲಿ ಸೋಮವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಸಕ್ತ 2021–22ನೇ ಸಾಲಿನ ಬೆಳೆಸಾಲದ ಚೆಕ್‍ನ್ನು ರೈತರಿಗೆ ವಿತರಿಸಿ ಮಾತನಾಡಿದರು.

ಸಾಲ ಪಡೆಯದ ರೈತರಿಗೆ ಸಾಲ ವಿತರಿಸಲು ಅಪೆಕ್ಸ್ ಬ್ಯಾಂಕ್‍ನಿಂದ ₹ 200 ಕೋಟಿ ಬಿಡುಗಡೆಯಾಗಿದ್ದು, ಇದನ್ನು ಈಗ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಈಗಾಗಲೇ ಸಾಲ ವಿತರಣೆ ಆರಂಭವಾಗಿದೆ ಎಂದು ತೆಲ್ಕೂರ ವಿವರಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ಆರ್ಥಿಕವಾಗಿ ಆಧೋಗತಿಗೆ ಇಳಿದಿದ್ದ ಡಿಸಿಸಿ ಬ್ಯಾಂಕ್‍ಗೆ ರಾಜಕುಮಾರ ಪಾಟೀಲ ಅಧ್ಯಕ್ಷರಾದ ನಂತರ ಹೆಚ್ಚಿನ ಮುತುವರ್ಜಿ ವಹಿಸಿ ಪುನಶ್ಚೇತನಗೊಳಿಸಿರುವ ಕ್ರಮ ಮಾದರಿಯಾಗಿದೆ. ರೈತರು ಸಹಕಾರಿ ಸಂಘಗಳನ್ನು ತಮ್ಮದೆಂದು ಭಾವಿಸಬೇಕು. ಸಾಲ ಸಕಾಲಕ್ಕೆ ಮರುಪಾವತಿಸಬೇಕು’ ಎಂದರು.

ಭೈರಾಮಡಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಣಮಂತರಾವ ಹಿರೇಗೌಡ ಮಾತನಾಡಿ, ‘376 ಹೊಸ ರೈತರಿಗೆ ಸಾಲ ವಿತರಿಸಲಾಗಿದೆಯಲ್ಲದೇ ಎಲ್ಲರಿಗೂ ಸಮನಾಗಿ ಸಾಲ ಹಂಚಿಕೆ ಮಾಡಿರುವುದು ಜಿಲ್ಲೆಯಲ್ಲೇ ಮಾದರಿಯಾಗಿದೆ’ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ನಿರ್ದೇಶಕರಾದ ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ ಅಷ್ಠಗಿ, ಮಹಾಂತಗೌಡ ಎಸ್.ವೈ. ಪಾಟೀಲ, ಅಶೋಕ ಸಾವಳೇಶ್ವರ, ಬಾಪುಗೌಡ ಪಾಟೀಲ, ಚಂದ್ರಶೇಖರ ತಳ್ಳಳ್ಳಿ, ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ನಿಂಬಾಳ, ಗ್ರಾಮದ ಮುಖಂಡರಾದ ಕಲ್ಯಾಣರಾವ ನಾಗೋಜಿ ವೇದಿಕೆಯಲ್ಲಿದ್ದರು.

ಬ್ಯಾಂಕ್ ಅಧಿಕಾರಿಗಳಾದ ಬಿ.ಜಿ.ಕಲ್ಲೂರ, ಜಯಪ್ರಕಾಶ, ಶರಣು ಭಾಸಗಿ, ಯಲ್ಲಪ್ಪ ಮುರಡಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ವಿ. ಧುತ್ತರಗಾಂವ ಮತ್ತು ಸಹಕಾರ ಸಂಘದ ಕಾರ್ಯದರ್ಶಿ ಶರಣಗೌಡ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.