ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ: ಖರ್ಗೆ ವಿಶ್ವಾಸ

Published 24 ಮೇ 2024, 14:14 IST
Last Updated 24 ಮೇ 2024, 14:14 IST
ಅಕ್ಷರ ಗಾತ್ರ

ಕಲಬುರಗಿ: ‘ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟವು ಅತ್ಯಧಿಕ ಸ್ಥಾನಗಳನ್ನು ಗೆಲ್ಲಲಿದೆ. ಈ ಕುರಿತ ಸೂಚನೆಗಳು ಈಗಾಗಲೇ ಕಾಣುತ್ತಿವೆ. ಈ ಬಾರಿ ನಮ್ಮ ಮೈತ್ರಿಕೂಟ ಸರ್ಕಾರ ರಚಿಸುವ ಸಾಧ್ಯತೆ ಇದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿಯವರೆಗೆ ‘ಇಂಡಿಯಾ’ ಮೈತ್ರಿಕೂಟಕ್ಕೆ ಒಳ್ಳೆಯ ಮತ ಬಂದಿದೆ. ಜನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ಚುನಾವಣೆ ನರೇಂದ್ರ ಮೋದಿ ಮತ್ತು ದೇಶದ ನಡುವಿನ ಚುನಾವಣೆಯಾಗಿದೆ. ಇಷ್ಟೇ ಸೀಟುಗಳು ನಮಗೆ ಬರುತ್ತವೆ ಎಂದು ನಾನು ಹೇಳುವುದಿಲ್ಲ. ರಾಜಕೀಯದಲ್ಲಿ ಅದು ಬಹಳ ವಿರಳ. ಆದರೆ, ಕರ್ನಾಟಕ, ತೆಲಂಗಾಣ, ತಮಿಳನಾಡು, ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದರು.

‘ರಾಜಸ್ಥಾನದಲ್ಲಿ ಈ ಬಾರಿ 7 ಸ್ಥಾನ ಬರಬಹುದು. ಮಧ್ಯಪ್ರದೇಶದಲ್ಲಿ ಕೂಡಾ ಒಳ್ಳೆ ವಾತಾವರಣವಿದೆ. ಇಲ್ಲೆಲ್ಲಾ ನಮಗೆ ಹೆಚ್ಚಿನ ಸ್ಥಾನಗಳು ಬರುತ್ತವೆ. ಆದರೂ ಬಿಜೆಪಿಯವರಿಗೆ ಎಲ್ಲಿಂದ ಹೆಚ್ಚಿನ ಸ್ಥಾನ ಬರುತ್ತದೆ. ಮೋದಿಯವರಿಗೆ 400 ಪಾರ್ ಹೇಗೆ ಗೊತ್ತಾಯಿತೋ ತಿಳಿಯುತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ನಾವು ಎಲ್ಲಾ ಧರ್ಮ, ಜಾತಿಯಲ್ಲಿ ನಂಬಿಕೆಯಿಟ್ಟಿದ್ದೇವೆ. ಮೋದಿಯವರೇ ಎಷ್ಟು ಬಾರಿ ರಾಮನ ಹೆಸರು ತರುತ್ತೀರಿ?’ ಎಂದು ಪ್ರಶ್ನಿಸಿದರು. 

ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಮಾತನಾಡಿದ ಖರ್ಗೆ, ‘ಕಾನೂನಿನ ಪ್ರಕಾರ ಕ್ರಮ ಆಗಬೇಕು. ಅದು ಪ್ರಜ್ವಲ್ ಇರಲಿ, ಕೇಜ್ರಿವಾಲ್ ಕಾರ್ಯದರ್ಶಿ ಇರಲಿ, ಕಾನೂನು ಎಲ್ಲರಿಗೂ ಒಂದೇ’ ಎಂದರು.

ಮೋದಿಯವರು ಚಿಲ್ಲರೆ ಮಾತನಾಡಿದರೆ ಅವರಿಗೂ ಗೌರವ ಬರೋದಿಲ್ಲ ನಮಗೂ ಗೌರವ ಬರಲ್ಲ. ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳ ಸೂತ್ರ ಇರಲ್ಲ ಮುಸ್ಲಿಮರಿಗೆ ಆಸ್ತಿ ಹಂಚುತ್ತಾರೆ ಎನ್ನುವುದನ್ನು ಬಿಡಬೇಕು
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT