ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಬಿಜೆಪಿ ಸೋಲಿಸಲು ಸಂಘಟಿತ ಹೋರಾಟ: ಎಸ್.ವರಲಕ್ಷ್ಮಿ

ಕಾರ್ಮಿಕ ಪ್ರಣಾಳಿಕೆ ಬಿಡುಗಡೆ ಮಾಡಿದ ಎಸ್.ವರಲಕ್ಷ್ಮಿ
Published 7 ಏಪ್ರಿಲ್ 2024, 15:26 IST
Last Updated 7 ಏಪ್ರಿಲ್ 2024, 15:26 IST
ಅಕ್ಷರ ಗಾತ್ರ

ಕಲಬುರಗಿ: ‘ಕೇಂದ್ರದಲ್ಲಿ ಕಳೆದ ಹತ್ತು ವರ್ಷದಿಂದ ಬಂಡವಾಳ ಶಾಹಿಗಳನ್ನು ಬೆಂಬಲಿಸುವ ಬಿಜೆಪಿ ಆಡಳಿತದಲ್ಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕ ವಿರೋಧಿ, ಕಾರ್ಪೊರೇಟ್‌ ಬೆಂಬಲಿತ ಕೋಮುವಾದಿ ಶಕ್ತಿಗಳನ್ನು ಮತ್ತು ಅದರ ಮೈತ್ರಿಕೂಟದ ಪಕ್ಷಗಳನ್ನು ಸೋಲಿಸಲು ಸಂಘಟಿತ ಹೋರಾಟ ಮಾಡಲಾಗುವುದು. ಎಡ ಮತ್ತು ಪ್ರಜಾಪ್ರಭುತ್ವ ಹಾಗೂ ಧರ್ಮನಿರಪೇಕ್ಷ ಪಕ್ಷಗಳನ್ನು ಗೆಲ್ಲಿಸಲು ಪಣ ತೊಡಲಾಗಿದೆ’ ಎಂದು ಸೆಂಟರ್ ಆಫ್‌ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ರೈತ ವಿರೋಧಿ ಕೃಷಿ ಕಾನೂನು ವಾಪಸ್ ಪಡೆಯುವುದೂ ಸೇರಿದಂತೆ ಹಲವು ಹಕ್ಕೊತ್ತಾಯಗಳ ‘ಕಾರ್ಮಿಕ ಪ್ರಣಾಳಿಕೆ’ಯನ್ನು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಮಿತಿಯ ಎರಡೂವರೆ ಲಕ್ಷ ಸದಸ್ಯರಿದ್ದಾರೆ ಎಂದರು.

‘ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಕಲ್ಪಿಸುವ ನೀತಿಗಳನ್ನು ಜಾರಿಗೆ ತರಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಪಡಿಸಬೇಕು. ಎಪಿಎಂಸಿ ವ್ಯವಸ್ಥೆ ಬಲಗೊಳಿಸಬೇಕು. ರಸಗೊಬ್ಬರ ಒಳಗೊಂಡಂತೆ ಕೃಷಿ ಪರಿಕರಗಳಿಗೆ ಸಬ್ಸಿಡಿ ಕಡಿತಗೊಳಿಸುವ ನೀತಿಗಳನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ರೈಲ್ವೆ, ವಿದ್ಯುತ್ ಒಳಗೊಂಡಂತೆ ಸಾರ್ವಜನಿಕ ಕ್ಷೇತ್ರಗಳ ಎಲ್ಲ ಸ್ವರೂಪದ ಖಾಸಗೀಕರಣವನ್ನು ಕೈಬಿಡಬೇಕು. ಸಾರ್ವಜನಿಕ ರಂಗದ ಕೈಗಾರಿಕೆ ಹಾಗೂ ಸೇವೆಗಳನ್ನು ಬಲಪಡಿಸಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗೂ ಅವೈಜ್ಞಾನಿಕ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಬಾರದು’ ಎಂದರು.

‘ಅಕುಶಲ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ₹31 ಸಾವಿರಕ್ಕೆ ನಿಗದಿಪಡಿಸಬೇಕು. ಹೆಚ್ಚಿನ ಕೌಶಲಕ್ಕೆ ತಕ್ಕಂತೆ ವೇತನ ಹೆಚ್ಚಳ ಮಾಡಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಠ 36 ಗಂಟೆಗಳು ಹಾಗೂ ದಿನದ ಪಾಳಿಯನ್ನು 6 ಗಂಟೆಗೆ ಮಿತಿಗೊಳಿಸಬೇಕು. ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು. ಅಲ್ಲದೇ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಬೇಕು’ ಎಂದು ಆಗ್ರಹಿಸಿದರು.

‘ದೀರ್ಘಕಾಲಿಕ ಸ್ವರೂಪದಲ್ಲಿರುವ ಎಲ್ಲ ರೀತಿಯ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದು ಪಡಿಸಬೇಕು. ಗುತ್ತಿಗೆ, ತಾತ್ಕಾಲಿಕ ಕಾರ್ಮಿಕರ ಸೇವೆ ಕಾಯಂಗೊಳಿಸಲು ತಮಿಳುನಾಡು–ಅಸ್ಸಾಂ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

‘ಕಾರ್ಮಿಕ ಸಂಘಟನೆಗಳಿಗೆ ಕಡ್ಡಾಯ ಮಾನ್ಯತೆ ನೀಡುವ ಕಾನೂನು ಜಾರಿಗೆ ಬರಬೇಕು. ಇಎಸ್‌ಐ, ಇಪಿಎಫ್‌, ಗ್ರಾಚ್ಯುಟಿ, ಬೋನಸ್‌ ಕಾಯ್ದೆಯಲ್ಲಿ ವಿಧಿಸಲಾದ ಎಲ್ಲ ವೇತನ ಮಿತಿ ತೆರವುಗೊಳಿಸಬೇಕು. ಪ್ರತಿ ಜಿಲ್ಲಾಮಟ್ಟದಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪಿಸಬೇಕು. ಕೈಗಾರಿಕಾ ವಿವಾದಗಳನ್ನು ನಿರ್ದಿಷ್ಟವಾಗಿ ಕಾಲಮಿತಿ ಒಳಗೆ ಇತ್ಯರ್ಥಗೊಳ್ಳಲು ಸೂಕ್ತ ಕಾನೂನು ತಿದ್ದುಪಡಿಗಾಗಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಮುಖರಾದ ಗೌರಮ್ಮ ಪಾಟೀಲ, ಎಂ.ಬಿ.ಸಜ್ಜನ್, ಅಯ್ಯಪ್ಪ, ಜಿ.ಕಮಲಾ, ಶಾಂತಾಬಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT