ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನೀರಸ ಮತದಾನ; ಯಾವ ಪಕ್ಷಕ್ಕೆ ಹೊಡೆತ?

ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ ಪುರುಷ ಮತದಾರರು
Last Updated 5 ಸೆಪ್ಟೆಂಬರ್ 2021, 6:53 IST
ಅಕ್ಷರ ಗಾತ್ರ

ಕಲಬುರ್ಗಿ: ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಮತದಾನ ಶೇ 49.92ರಷ್ಟಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.ಕಳೆದ ಬಾರಿಯ ಚುನಾವಣೆಗಿಂತಲೂ ಕಡಿಮೆ ಮತದಾನವಾಗಿದ್ದು, ಇದು ಯಾವ ಪಕ್ಷಕ್ಕೆ ಲಾಭ, ಯಾರಿಗೆ ನಷ್ಟ ಎಂಬ ಬಗ್ಗೆ ಚಿಂತನ ಮಂಥನ ಶುರುವಾಗಿದೆ.

ಒಂದು ಹಂತದಲ್ಲಿ ಅತಿ ಕಡಿಮೆ ಮತದಾನವಾಗಿದ್ದರಿಂದ ವಿಚಲಿತರಾದ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಮಧ್ಯಾಹ್ನದ ಬಳಿಕ ಕಡಿಮೆ ಮತದಾನವಾದ ಕಡೆ ತೆರಳಿ ಪರಿಶೀಲಿಸಿದರು. ಆದಾಗ್ಯೂ, ಶೇ 50ರಷ್ಟು ಮತದಾನವೂ ಸಾಧ್ಯವಾಗಿಲ್ಲ.

ಕಳೆದ ಬಾರಿ ಪಾಲಿಕೆಯ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್, ಈ ಬಾರಿ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಹಾಗೂ ಒಂದು ಕಾಲಕ್ಕೆ ಕಲಬುರ್ಗಿ ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಬಲವಾಗಿದ್ದ ಜೆಡಿಎಸ್‌ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು. ಇವುಗಳ ಜೊತೆಗೆ ಹೊಸದಾಗಿ ಆಮ್ ಆದ್ಮಿ ಪಕ್ಷ 27 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ತಾನೂ ಪೈಪೋಟಿ ನೀಡಲಿದ್ದೇನೆ ಎಂಬುದನ್ನು ಸಾರಿ ಹೇಳಿತ್ತು. ಎಐಎಂಐಎಂ ಪಕ್ಷವು ಉತ್ತರದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬುಟ್ಟಿಗೆ ಕೈಹಾಕುವ ಮುನ್ಸೂಚನೆ ನೀಡಿತ್ತು.

ಚುನಾವಣಾ ಆಯೋಗವು ನೀಡಿದ ವಾರ್ಡ್‌ವಾರು ಮತದಾನದ ವಿವರವನ್ನು ಗಮನಿಸಿದಾಗ ಕಲಬುರ್ಗಿ ದಕ್ಷಿಣದಲ್ಲಿ ಸರಾಸರಿ ಕಡಿಮೆಯಾಗಿದೆ. ಕಲಬುರ್ಗಿ ಉತ್ತರ ಕ್ಷೇತ್ರದ ಹಲವು ವಾರ್ಡ್‌ಗಳಲ್ಲಿ ಗಲಾಟೆ, ವಾಗ್ವಾದಗಳ ಮಧ್ಯೆಯೂ ಉತ್ತಮ ಮತದಾನ ದಾಖಲಾಗಿದೆ. ಬಿಜೆಪಿ ದಕ್ಷಿಣದಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ನಿರೀಕ್ಷೆ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 1ರಿಂದ 32ನೇ ವಾರ್ಡ್‌ವರೆಗೆ 24 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿತ್ತು. ಹೀಗಾಗಿ, ಇಲ್ಲಿ ಹೆಚ್ಚಿನ ನಿರೀಕ್ಷೆಯನ್ನ ಇಟ್ಟುಕೊಂಡಿಲ್ಲ. ಅಲ್ಲದೇ, ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ಅವರು ಪಟ್ಟು ಹಿಡಿದು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ, ಕಾಂಗ್ರೆಸ್ ಉತ್ತರದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಎಐಎಂಐಎಂ ಹೆಚ್ಚು ಸೀಟು ಗೆದ್ದಷ್ಟೂ ಕಾಂಗ್ರೆಸ್‌ಗೆ ನಷ್ಟವಾಗಲಿದೆ.

ಶಾಸಕಿ ಅಳಿಯ, ಕಾಂಗ್ರೆಸ್ ಮುಖಂಡ ಆದಿಲ್‌ ಸುಲೇಮಾನ್ ಶೇಠ್ ಅವರಿಗೆ ಪೊಲೀಸರಿಗೆ ಥಳಿಸಿರುವುದರಿಂದ ಉತ್ತರ ಕ್ಷೇತ್ರದ ಹಲವು ವಾರ್ಡ್‌ಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ಕಾಂಗ್ರೆಸ್‌ಗೆ ಅನುಕೂಲವಾಗಿದೆ ಎಂದು ಆ ಪಕ್ಷದ ಮುಖಂಡರು ಹೇಳುತ್ತಿದ್ದಾರೆ. ಆದರೆ, ಮುಂದಿನ ಬಾರಿ ಬಿಜೆಪಿ ಟಿಕೆಟ್‌ ಪಡೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ತಮ್ಮ ಕ್ಷೇತ್ರದ ವಾರ್ಡ್‌ಗಳ ಮೇಲೆ ಹಿಡಿತವನ್ನು ಬಿಗಿಗೊಳಿಸಿದ್ದು, ಪಾಲಿಕೆ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ಸಚಿವರನ್ನು ಕಲಬುರ್ಗಿ ಉತ್ತರದ ವಾರ್ಡ್‌ಗಳಿಗೆ ಕರೆದೊಯ್ದು ಪ್ರಚಾರ ನಡೆಸಿದ್ದರು.

‘ಕಲಬುರ್ಗಿ ದಕ್ಷಿಣ ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಕೈ ಮೇಲಾಗಿದ್ದು, ತಮಗೆ ಆತ್ಮೀಯರಾದ ಹಾಗೂ ತಮ್ಮ ಕುಟುಂಬಕ್ಕೆ ನಿಷ್ಠರಾದ ಕಾರ್ಯಕರ್ತರಿಗೆ ಟಿಕೆಟ್ ಕೊಡಿಸಿದ್ದಾರೆ’ ಎನ್ನುವುದು ಅವರ ಬೆಂಬಲಿಗರ ಹೇಳಿಕೆ.

ಕಡಿಮೆ ಮತದಾನವಾಗಿರುವುದರ ಪರಿಣಾಮ ಬಿಜೆಪಿ ಅಭ್ಯರ್ಥಿಗಳ ಮೇಲೆ ಆಗಲಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಇದಕ್ಕೆ ಸ್ಪಷ್ಟ ಉತ್ತರ ಸೋಮವಾರ ಮಧ್ಯಾಹ್ನದ ವೇಳೆಗೆ ದೊರೆಯಲಿದೆ. ಆದರೆ, ಅಲ್ಲಿಯವರೆಗೆ ಅಭ್ಯರ್ಥಿಗಳ ಎದೆಬಡಿತದ ಸದ್ದು ಜೋರಾಗಿಯೇ ಇರಲಿದೆ.

**

ಶೇ 49.91:ಒಟ್ಟು ಮತದಾನ ಪ್ರಮಾಣ
55:ಒಟ್ಟು ವಾರ್ಡ್‌ಗಳು
1,35,911‌:ಮತ ಚಲಾಯಿಸಿದ ಪುರುಷರು
1,24,440:ಹಕ್ಕು ಚಲಾಯಿಸಿದ ಮಹಿಳೆಯರು
1:ಮತ ಹಾಕಿದ ಇತರೆ ಮತದಾರ
2,60,352:ಮತ ಚಲಾಯಿಸಿದವರ ಒಟ್ಟು ಸಂಖ್ಯೆ

ಮತದಾರರಿಗಿಂತ ಹೆಚ್ಚು ಜನರಿಂದ ಮತದಾನ!
ಚುನಾವಣಾ ಆಯೋಗವು ಪ್ರಕಟಿಸಿರುವ ಮತಗಟ್ಟೆವಾರು ಮತದಾನದ ಪಟ್ಟಿಯಲ್ಲಿ 18ನೇ ವಾರ್ಡ್‌ನ 144/1ನೇ ಮತಗಟ್ಟೆಯಲ್ಲಿ 343 ಮತದಾರರು ತಮ್ಮ ಹಕ್ಕು ಚಲಾಯಿಸಬೇಕಿತ್ತು. ಆದರೆ, 360 ಜನರು ಮತದಾನ ಮಾಡಿದ್ದಾರೆ ಎಂದು ದಾಖಲಾಗಿದೆ. ಇದರಿಂದಾಗಿ ಈ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮತಗಟ್ಟೆ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಸಿಪಿಎಂ ಪಕ್ಷದ ಅಭ್ಯರ್ಥಿ ಶಾಲಂ ಖುರೇಷಿ ಅವರು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾಅವರಿಗೆ ಶನಿವಾರ ಲಿಖಿತ ದೂರು ನೀಡಿದ್ದಾರೆ.

1ನೇ ವಾರ್ಡ್‌ ಗರಿಷ್ಠ, 50 ಕನಿಷ್ಠ
1ನೇ ವಾರ್ಡ್‌ನಲ್ಲಿ ಶೇ 62.14ರಷ್ಟು ಗರಿಷ್ಠ ಮತದಾನವಾಗಿದ್ದರೆ, 50ನೇ ವಾರ್ಡ್‌ ಶೇ 38.18ರಷ್ಟು ಮತದಾನವಾಗುವ ಮೂಲಕ ಅತಿ ಕಡಿಮೆ ಮತದಾನವಾದ ವಾರ್ಡ್‌ ಎಂದು ಗುರುತಿಸಿಕೊಂಡಿದೆ. ಸರಾಸರಿ ಶೇ 45ರಿಂದ 50ರಷ್ಟು ಮತದಾನ ವಿವಿಧ ವಾರ್ಡ್‌ಗಳಲ್ಲಿ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT