ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಾರ ಚೆನ್ನಯ್ಯ ವಚನ ಚಳವಳಿಯ ಬೀಜರೂಪ: ಪ್ರಾಧ್ಯಾಪಕ ಪ್ರೊ.ಮಟ್ಟಿಹಾಳ ಅಭಿಮತ

Last Updated 14 ಅಕ್ಟೋಬರ್ 2018, 12:49 IST
ಅಕ್ಷರ ಗಾತ್ರ

ಕಲಬುರ್ಗಿ: ‘ಶರಣ ಮಾದಾರ ಚೆನ್ನಯ್ಯ 12ನೇ ಶತಮಾನದ ಶರಣ ಚಳವಳಿ ಬೀಜರೂಪವಾಗಿ ಕಾಣುತ್ತಾರೆ. ಆ ಕ್ರಾಂತಿಯಲ್ಲಿ ಚೆನ್ನಯ್ಯ ಪ್ರತಿಭೆ ದೈತ್ಯವಾದುದು ಎಂಬುದಕ್ಕೆ ಸಾಕಷ್ಟು ಪುರಾವೆ ಇವೆ’ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಎನ್‌.ವೈ.ಮಟ್ಟಿಹಾಳ ಅಭಿಪ್ರಾಯಪಟ್ಟರು.

‘ಕಾಲಘಟ್ಟದಲ್ಲಿ ಚೆನ್ನಯ್ಯ ಅವರನ್ನು ನಿರ್ಲಕ್ಷ್ಯ ಮಾಡಿದ ಸಾಧ್ಯತೆ ಇದೆ. ಈ ಬಗ್ಗೆ ನಾನು ಸಂಶೋಧನೆಯ ಬೆನ್ನುಹತ್ತಿದ್ದು, ಆರು ತಿಂಗಳಲ್ಲಿ ಗ್ರಂಥರೂಪ ನೀಡಲಿದ್ದೇನೆ’ ಎಂದರು.

ಇಲ್ಲಿನ ಆದರ್ಶ ಕಲ್ಯಾಣ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ಮಾದಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.

‘ಶರಣ ಚಳವಳಿಯಿಂದ ಹಿಡಿದು ಸ್ವಾತಂತ್ರ್ಯ ಚಳವಳಿಯರೆಗೆ ದೇಶವನ್ನು ಕಟ್ಟುವಲ್ಲಿ ಈ ಸಮಾಜದವರು ಸಕ್ರಿಯರಾಗಿದ್ದಾರೆ. ಆದರೆ, ಇಂದು ವಿಧಾನಸಭೆಯಲ್ಲಿ ಮಾದಿಗರ ಸಮಸ್ಯೆಗೆ ಧ್ವನಿ ಎತ್ತಲು ಒಬ್ಬ ಸದಸ್ಯನೂ ಇಲ್ಲ. ರಾಜಕೀಯ ಪ್ರಾತಿನಿಧ್ಯದ ಮೂಲಕ ಈ ತರತಮ ನಿವಾರಿಸಬೇಕು’ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಕೆ.ಬಿ.ಶಾಣಪ್ಪ ಮಾತನಾಡಿ, ‘ಅಸ್ಪೃಷ್ಯರಾದ 7 ಜಾತಿಗಳಿಗೆ ಇದ್ದ ಮೀಸಲಾತಿಯಲ್ಲಿ ನೂರೊಂದು ಜಾತಿ– ಉಪಜಾತಿ ಸೇರಿಸಲಾಗಿದೆ. ಇದರಿಂದ ಮಾದಿಗ ಸಮುದಾಯ ಇನ್ನೂ ಸುಧಾರಿಸಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಾರತ ಬಿಟ್ಟರೆ ಜಾತಿಯೊಳಗೆ ಒಳಜಾತಿ ಇರುವ ದೇಶ ಮತ್ತೊಂದಿಲ್ಲ. ತುಳಿತಕ್ಕೊಳಗಾದ ಸಮುದಾಯಗಳನ್ನೇ ಮತ್ತೆ ವಿಂಗಡಿಸಿ ಅವರ ಮಧ್ಯದಲ್ಲೇ ಹೋರಾಟ ಮೂಡುವಂತೆ ವ್ಯವಸ್ಥಿತ ಸಂಚು ಮಾಡಲಾಗಿದೆ. ಚಪ್ಪಲಿಯ ಚರ್ಮವನ್ನು ಮುಂದಿನಿಂದ ಕೊಯ್ದರೆ ಒಂದು ಜಾತಿ, ಹಿಂದಿನಿಂದ ಕೊಯ್ದರೆ ಮತ್ತೊಂದು ಜಾತಿ. ಇದ್ಯಾವ ಪದ್ಧತಿ? ಇಷ್ಟೊಂದು ಕನಿಷ್ಠವಾಗಿ ಮನುಷ್ಯರನ್ನು ವಿಭಜಿಸಬೇಕಿತ್ತೇ?’ ಎಂದು ಆಕ್ರೋಶ ಹೊರಚೆಲ್ಲಿದರು.

‘ಹಳ್ಳದ ನೀರನ್ನು ಮೇಲ್ಜಾತಿ ಎಂದು ಕರೆದುಕೊಳ್ಳುವವರು ಮೊದಲು ಬಳಸಬೇಕು, ಅಲ್ಲಿಂದ ಹರಿದು ಬಂದ ಮೇಲೆ ಮಾದಿಗರು ಬಳಸಬೇಕು ಎಂಬ ವ್ಯವಸ್ಥೆ ಇದ್ದ ದೇಶವಿದು. ಇಂಥದರಲ್ಲೂ ನಮ್ಮ ಯುವಕರು, ಸಾಧಕರು ಮೇಲೆ ಬಂದಿದ್ದಾರೆ ಎಂಬುದೇ ಹೆಮ್ಮೆ. ಆದರೆ, ಈ ಬೆಳವಣಿಗೆ ನನಗೆ ತೃಪ್ತಿ ತಂದಿಲ್ಲ’ ಎಂದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಭೀಮಪ್ಪ ಗೋನಾಳ, ಕೆ.ಬಿ.ಶಾಣಪ್ಪ, ಪ್ರೊಎನ್‌.ವೈ.ಮಟ್ಟಿಹಾಳ, ಎಂ.ಲಕ್ಷ್ಮಿನಾರಾಯಣ, ಡಾ.ಉಮೇಶ ಟಿ. ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಟ್ರಸ್ಟ್‌ ಅಧ್ಯಕ್ಷ ಶಾಂತಪ್ಪ ಬಂದರವಾಡ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತರಿಗೆ ಇಲಾಖೆ ನಿವೃತ್ತ ಆಯುಕ್ತ ಎಚ್‌.ಆರ್‌.ತೆಗನೂರ, ರೇಷ್ಮೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ವೆಂಕಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಆಯುಕ್ತ ಸುಭಾಷ ಜಿ. ವಾಲಿ, ಎಐಸಿಸಿ ಸದಸ್ಯೆ ಚಂದ್ರಿಕಾ ಪರಮೇಶ್ವರ, ಡಾ.ಬಿ.ಆರ್.ಅಂಬೇಡ್ಕರ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಣ್ಣ ಬಿಲ್ಲವ, ಕೃಷಿ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಡಾ.ಬಾಬುರಾವ ಮುಡಬಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಕೆ.ಗೋಖಲೆ, ‘ಕುಡಾ’ ಮಾಜಿ ಸದಸ್ಯ ಶಾಮ ನಾಟೀಕಾರ, ನಿವೃತ್ತ ಗ್ರಂಥಪಾಲಕ ಎಂ.ಟಿ.ಕಟ್ಟಿಮನಿ, ಎನ್‌ಇಕೆಎಸ್‌ಆರ್‌ಟಿಸಿ ನಿವೃತ್ತ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಚ್‌.ನಾಗೇಶ ವೇದಿಕೆ ಮೇಲಿದ್ದರು.

*ಪ್ರತಿಭೆ ಗುಡಿಸಲಿನಲ್ಲಿ ಅರಳುತ್ತದೆ, ಮಹಲಿನಲ್ಲಿ ಸಾಯುತ್ತದೆ. ಇನ್ನೂ ಹಿಂದುಳಿದ ಪಟ್ಟಿಯಲ್ಲೇ ಇರುವ ಮಾದಿಗ ಸಮುದಾಯ ಪ್ರತಿಭೆಗಳ ಗಣಿ. ಪ್ರೋತ್ಸಾಹಿಸುವ ಕೈಗಳು ಸಿಗಬೇಕಿದೆ
-ಪ್ರೊ.ಎನ್‌.ವೈ.ಮಟ್ಟಿಹಾಳ
ಪ್ರಾಧ್ಯಾಪಕ, ಕರ್ನಾಟಕ ವಿ.ವಿ

*ಮಾದಿಗರು ಯಾವುದೇ ಸಮಾಜದ ವಿರುದ್ಧ ಹೋರಾಡುತ್ತಿಲ್ಲ. ಸಮಪಾಲು– ಸಮಬಾಳಿಗೆ ಸಂಘಟಿತರಾಗಿದ್ದೇವೆ. ಸದಾಶಿವ ಆಯೋಗದ ವರದಿ ಜಾರಿಯಾಗುವವರೆಗೂ ವಿಶ್ರಮಿಸಕೂಡದು
-ಕೆ.ಬಿ.ಶಾಣಪ್ಪ
ಮಾಜಿ ಸಚಿವ

*ತಾರತಮ್ಯ ನಿವಾರಿಸಲು ಹಿರಿಯರು ಸಾಕಷ್ಟು ಹೋರಾಡಿದ್ದಾರೆ. ನಾವೀಗ ಮತ್ತದೇ ಹೋರಾಟ ಮಾಡುವ ಬದಲು ನೇರಾನೇರ ಸ್ಪರ್ಧೆ ಒಡ್ಡಿ ಮುಂದೆ ಬರಬೇಕು
-ಡಾ.ಉಮೇಶ ಟಿ.
ನರರೋಗ ತಜ್ಞ, ಹೈದರಾಬಾದ್‌

*ಸರ್ಕಾರಿ ಹುದ್ದೆಯಲ್ಲಿರುವವರಿಗೆ ಯಾವುದೇ ಜಾತಿ ಇಲ್ಲ. ಅವರು ಎಲ್ಲರನ್ನೂ ಸಮನಾಗೇ ಕಾಣಬೇಕಾಗುತ್ತದೆ. ಆದರೆ, ನಿವೃತ್ತರಾದ ಮೇಲೆ ಸಮಾಜದ ಬೆನ್ನಿಗೆ ನಿಲ್ಲಬೇಕು
-ಎಂ.ಲಕ್ಷ್ಮಿನಾರಾಯಣ
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,ಸಮಾಜ ಕಲ್ಯಾಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT