ಶನಿವಾರ, ಮೇ 21, 2022
27 °C
ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವೆ ನಿರಂಜನ ಜ್ಯೋತಿ

ಮಲ್ಲಣ್ಣಪ್ಪ ಮಹಾರಾಜರ ರಥೋತ್ಸವ 11ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಶಹಾಬಾದ್‌ ತಾಲ್ಲೂಕಿನ ತೊನಸನಹಳ್ಳಿಯ ಸದ್ಗುರು ಮಲ್ಲಣಪ್ಪ ಮಹಾರಾಜರು, ಅಲ್ಲಮಪ್ರಭು ಹಾಗೂ ಸುಲ್ತಾನ್ ಅಹ್ಮದ್ ಶಾಹವಲಿ ಅವರ ಜಾತ್ರಾ ಮಹೋತ್ಸವ ಇದೇ 10ರಿಂದ 13ರವರೆಗೆ ನೆರವೇರಲಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಆಗಮಿಸಲಿದ್ದಾರೆ ಎಂದು ಅಲ್ಲಮಪ್ರಭು ಸಂಸ್ಥಾನಮಠದ 10ನೇ ಪೀಠಾಧಿಪತಿ ಮಲ್ಲಣಪ್ಪ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ 10ರಂದು ರಾತ್ರಿ 10.30ಕ್ಕೆ ಗಂಧೋತ್ಸವ, 11ರಂದು ಸಂಜೆ 6.30ಕ್ಕೆ ರಥೋತ್ಸವ ನಡೆಯಲಿದೆ. ರಥೋತ್ಸವದಲ್ಲಿ ಕಿರುತೆರೆ ನಟಿ ಪಾರು ಭಾಗವಹಿಸಲಿದ್ದು, ಸಂಜೆ 7.30ಕ್ಕೆ ನಡೆಯುವ ಧರ್ಮ ಸಭೆಯಲ್ಲಿ ಸಾಧ್ವಿ ನಿರಂಜನ ಜ್ಯೋತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಹವಾ ಮಲ್ಲಿನಾಥ ಮಹಾರಾಜರು ಸಾನ್ನಿಧ್ಯ ವಹಿಸುವರು. ದೇವಂತಗಿಯ ರೇವಣಸಿದ್ದೇಶ್ವರ ಹಿರೇಮಠ ಸಂಸ್ಥಾನದ ರೇಣುಕಾ ಶಿವಾಚಾರ್ಯರು, ಮಹಾರಾಷ್ಟ್ರದ ಸುರಗೀಶ್ವರ ಸಂಸ್ಥಾನ ಮಠದ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸುವರು. ಸಂಸದ ಡಾ. ಉಮೇಶ ಜಾಧವ ಹಾಗೂ ಮಹಾರಾಷ್ಟ್ರದ ವಿಧಾನಪರಿಷತ್, ರಾಷ್ಟ್ರೀಯ ಕೋಲಿ ಮಹಾಸಂಘದ ಅಧ್ಯಕ್ಷ ರಮೇಶ ದಾದಾ ಪಾಟೀಲ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಕ್ಯಾಲೆಂಡರ್ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಚಿತ್ರನಟ ದಿಲೀಪ ಮಳಬಾ ನಟನೆಯ ‘ಪ್ರೀತಿಗೋಸ್ಕರ ಪ್ರಾಣ ಬಿಡಬೇಡಿ’ ಕಿರುಚಿತ್ರವನ್ನು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಬಿಡುಗಡೆಗೊಳಿಸುವರು. ಅಧ್ಯಕ್ಷತೆಯನ್ನು ಬಸವರಾಜ ಮತ್ತಿಮೂಡ ವಹಿಸುವರು. ಶಾಸಕರಾದ ಡಾ. ಅಜಯ್ ಸಿಂಗ್, ರಮೇಶ ಭೂಸನೂರ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಏ 12ರಂದು ಬೆಳಿಗ್ಗೆ 10 ಮತ್ತು ಸಂಜೆ 5ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ನಂತರ ವಿಜೇತರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಏ 13ರಂದು ದೇವರನ್ನು ಮಹಾಮನೆಗೆ ಬರಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಭೀಮರಾಯನಗುಡಿ ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿದರು.

ಮುಖಂಡರಾದ ಲಕ್ಷ್ಮಣ ಅವಂಟಿ, ಮಡಿವಾಳಪ್ಪ ನರಿಬೋಳಿ, ಮಹಾದೇವ ಬಂದಳ್ಳಿ, ವಸಂತ ನರಿಬೋಳಿ, ನಿಂಗಣ್ಣ ಕೋಬಾಳಕರ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.