ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

371 (ಜೆ) ತಿರಸ್ಕರಿಸಿದವರಿಗೆ ಮತ ಕೇಳುವ ಹಕ್ಕಿದೆಯೇ?: ಖರ್ಗೆ

ಗ್ಯಾರಂಟಿ ಸಮಾವೇಶ ಹಾಗೂ ₹ 1460 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ
Published 14 ಮಾರ್ಚ್ 2024, 5:27 IST
Last Updated 14 ಮಾರ್ಚ್ 2024, 5:27 IST
ಅಕ್ಷರ ಗಾತ್ರ

ಕಲಬುರಗಿ: ಅತ್ಯಂತ ಹಿಂದುಳಿದ ಹೈದರಾಬಾದ್–ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಾವೆಲ್ಲ ಒತ್ತಾಯಿಸಿದಾಗ ಆ ಪ್ರಸ್ತಾವವನ್ನು ಕಸದಬುಟ್ಟಿಗೆ ಎಸೆದ ಬಿಜೆಪಿಯವರಿಗೆ ಈ ಬಾರಿಯ ಚುನಾವಣೆಯಲ್ಲಿ ಮತ ಕೇಳುವ ಹಕ್ಕಿದೆಯೇ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಾಗೂ ₹ 1460 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ವಾಜಪೇಯಿ ನೇತೃತ್ವದ ಸರ್ಕಾರದ ಮನವೊಲಿಸಿ ಸಾಕಷ್ಟು ಹಿಂದುಳಿದಿದ್ದ ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ನಿಮಗೆ ಕೊಟ್ಟರೆ ಮತ್ತೆ ಬೇರೆಯವರು ಕೇಳುತ್ತಾರೆ. ಹೀಗೇ ಎಲ್ಲರೂ ಕೇಳಲು ಮುಂದಾದರೆ 30 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾಗುತ್ತದೆ ಎಂದರು. ನಂತರ ನಮ್ಮ ಸರ್ಕಾರದ ಅವಧಿಯಲ್ಲಿ ಪಕ್ಷಭೇದ ಮರೆತು ಪ್ರಯತ್ನ ಮಾಡಿದ್ದರಿಂದ ಈ ಭಾಗಕ್ಕೆ 371 (ಜೆ) ಕಲಂನಡಿ ವಿಶೇಷ ಸ್ಥಾನಮಾನ ಸಿಕ್ಕಿದೆ. ಇದರಿಂದಾಗಿಯೇ ಬ್ಯಾಕ್‌ಲಾಗ್‌ ಸೇರಿದಂತೆ 15 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮತ್ತೆ 15 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ’ ಎಂದರು.

ತಮ್ಮ 48 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಖರ್ಗೆ ಅವರು ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಏನೆಲ್ಲ ಅಭಿವೃದ್ಧಿ ಮಾಡಿದೆ ಎಂಬುದನ್ನು ವಿವರವಾಗಿ ಹೇಳಿದರು.

‘ನಾನು ರೈಲ್ವೆ ಸಚಿವನಾಗಿದ್ದ 11 ತಿಂಗಳ ಅವಧಿಯಲ್ಲಿ 27 ಹೊಸ ರೈಲುಗಳನ್ನು ಆರಂಭಿಸಿದ್ದೆ. ಕಲಬುರಗಿ–ಬೀದರ್ ರೈಲು ಮಾರ್ಗ, ವಾಡಿ–ಗದಗ ರೈಲು ಮಾರ್ಗಕ್ಕೆ ಅನುಮೋದನೆ ನೀಡಿದ್ದೆ. ಮೂರು ವರ್ಷಗಳಲ್ಲಿ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಿದ್ದೆವು. ಮೋದಿ ಸರ್ಕಾರ ಅಧಿಕಾರದಲ್ಲಿದ್ದು 10 ವರ್ಷವಾದರೂ ವಾಡಿ–ಗದಗ ರೈಲು ಮಾರ್ಗವನ್ನು ಪೂರ್ಣಗೊಳಿಸಲು ಆಗಿಲ್ಲ. ನಾವು ಹಾಕಿದ ರೈಲು ಹಳಿಗಳ ಮೇಲೆ ನೀವು ರೈಲ್ವೆ ಡಬ್ಬಿಗಳನ್ನು ಓಡಿಸುತ್ತಿದ್ದೀರಿ ಎಂಬುದು ನೆನಪಿಲ್ಲವೇ’ ಎಂದು ಕುಟುಕಿದರು.

‘ಮಾತೆತ್ತಿದರೆ 70 ವರ್ಷಗಳಲ್ಲಿ ಏನೂ ಆಗಿಲ್ಲ ಎನ್ನುತ್ತೀರಿ. ದೇಶದ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿದ್ದು ಯಾರು? ಕೆಆರ್‌ಎಸ್, ಆಲಮಟ್ಟಿ, ಕಾರಂಜಾ ಅಣೆಕಟ್ಟುಗಳನ್ನು ನೀವು ಕಟ್ಟಿದ್ದಾ’ ಎಂದು ಪ್ರಶ್ನಿಸಿದರು.

ವೈದ್ಯಕೀಯ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕಳೆದ 2022ರ ಡಿಸೆಂಬರ್‌ನಲ್ಲಿ ಇದೇ ಸ್ಥಳದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಅನುದಾನ ನಿಡುವುದಾಗಿ ಘೋಷಿಸಿದ್ದರು. ಅದರಂತೆ ₹ 5 ಸಾವಿರ ಕೋಟಿ ಹಣ ನೀಡಿದೆ. ಖರ್ಗೆ ಅವರ ಮಾರ್ಗದರ್ಶನದಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ, ತಾಯಿ–ಮಕ್ಕಳ ಆಸ್ಪತ್ರೆ, ಜಿಮ್ಸ್ ಆಸ್ಪತ್ರೆ, ಟ್ರಾಮಾ ಸೆಂಟರ್ ಆರಂಭಿಸಿದ್ದೇವೆ. ಸುಟ್ಟ ಗಾಯಗಳ ಘಟಕ, ಕ್ರಿಟಿಕಲ್ ಕೇರ್ ಯೂನಿಟ್, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಶಾಖೆ ಸಹ ಮಂಜೂರು ಮಾಡಿದ್ದು, ಒಟ್ಟಾರೆಯಾಗಿ ಕಲಬುರಗಿಯನ್ನು ವೈದ್ಯಕೀಯ ಹಬ್ ಆಗಿ ಪರಿವರ್ತಿಸುವ ಸಂಕಲ್ಪ ಹೊಂದಿದ್ದೇವೆ’ ಎಂದರು.

ಕರ್ನಾಟಕ ಸರ್ಕಾರವು ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಅವರನ್ನು ಬಸವ ಅಭಿಮಾನಿ ಬಳಗದವರು ಬಸವಣ್ಣನ ಭಾವಚಿತ್ರ ನೀಡಿ, ಹೂಮಳೆ ಸುರಿಸಿ ಸನ್ಮಾನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಸಲಹೆಗಾರ ಬಿ.ಆರ್.ಪಾಟೀಲ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷೆ ಕನೀಜ್ ಫಾತೀಮಾ, ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮನೂರ, ಅರವಿಂದ ಅರಳಿ, ಚಂದ್ರಶೇಖರ ಪಾಟೀಲ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂ ಖಾನ್, ಕರ್ನಾಟಕ ಉಣ್ಣೆ ಮತ್ತು ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೇಂದ್ರಪ್ಪ ಮರತೂರ, ಮಾಜಿ ಸಚಿವರಾದ ರೇವೂ ನಾಯಕ ಬೆಳಮಗಿ, ಬಾಬುರಾವ ಚಿಂಚನಸೂರು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್  ಬಿ, ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್, ಎಸ್ಪಿ ಅಕ್ಷಯ್ ಹಾಕೆ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ, ಸೇಡಂ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಮಟ್ಟದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಸಾವಿರಾರು ಫಲಾನುಭವಿಗಳು ಭಾಗವಹಿಸಿದ್ದರು.

ಎಡಿಸಿ ರಾಯಪ್ಪ ಹುಣಸಗಿ ವಂದಿಸಿದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಫಿಶ್ ಐ ಲೆನ್ಸ್‌ನ ಕ್ಯಾಮೆರಾದಲ್ಲಿ ಕಂಡ ಬಗೆ
ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಫಿಶ್ ಐ ಲೆನ್ಸ್‌ನ ಕ್ಯಾಮೆರಾದಲ್ಲಿ ಕಂಡ ಬಗೆ ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್

ಬಡವರಿಗೆ ಹಣ ನೀಡಿದ್ದಕ್ಕೆ ವಿರೋಧ ಪಕ್ಷಗಳಿಗೆ ಹೊಟ್ಟೆ ಕಿಚ್ಚು. ಇದಕ್ಕಾಗಿ ಗ್ಯಾರಂಟಿ ಯೋಜನೆಗಳ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರು ಕಿವಿಗೊಡಬಾರದು

-ಡಾ. ಶರಣಪ್ರಕಾಶ್ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಪ್ರಸಕ್ತ ವರ್ಷ ಕಲ್ಯಾಣ ಕರ್ನಾಟಕ ಭಾಗದ 19 ನೂತನ ತಾಲ್ಲೂಕುಗಳಲ್ಲಿ ತಲಾ ₹ 15 ಕೋಟಿ ವೆಚ್ಚದಲ್ಲಿ ಆಡಳಿತ ಸೌಧ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₹ 135 ಕೋಟಿ ಖರ್ಚು ಮಾಡಲಾಗುತ್ತಿದೆ

-ಡಾ. ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

ರಣ ಬಿಸಿಲಲ್ಲೂ ಹರಿದುಬಂದ ‘ನಾರಿ ಶಕ್ತಿ’

ಕಲಬುರಗಿ: ರಾಜ್ಯ ಸರ್ಕಾರದ ಐದು ‘ಗ್ಯಾರಂಟಿ’ ಯೋಜನೆಗಳ ಫಲಾನುಭವಿಗಳ ಸಮಾವೇಶಕ್ಕೆ ನಾರಿ ಪಡೆಯು ‘ಶಕ್ತಿ ಯೋಜನೆ’ಯನ್ನೇ ಬಳಸಿಕೊಂಡು ನಗರಕ್ಕೆ ದೌಡಾಯಿಸಿತು. ಬಸ್‌ನಿಂದ ಕೆಳಗಿಳಿಯುತ್ತಿದ್ದಂತೆ ರಣ ಬಿಸಿಲು ಸ್ವಾಗತಿಸಿತು. ಬಿಸಿಲಿ ಝಳದಿಂದ ತಪ್ಪಿಸಿಕೊಳ್ಳಲು ತಲೆಯ ಮೇಲೆ ಸೆರಗು ಹೊದ್ದುಕೊಂಡು ಎನ್‌.ವಿ. ಮೈದಾನದತ್ತ ‘ದೂಳಿ’ನೊಂದಿಗೆ ಹೆಜ್ಜೆ ಹಾಕಿದರು.

ಸಮಾವೇಶ ಆಯೋಜಿಸಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ನಿರೀಕ್ಷೆಗೂ ಮೀರಿ ಜನರು ಹರಿದು ಬಂದರು. ಬಂದವರೇ ನೇರವಾಗಿ ಹೋಗಿದ್ದು, ಕುಡಿಯುವ ನೀರಿನತ್ತ. ದೂರದ ಪ್ರಯಾಣದಿಂದ ದಣಿದು ಬಾಯಾರಿದ ಗಂಟಲಿಗೆ ಸಿಕ್ಕಿದ್ದು ಟ್ಯಾಂಕರ್‌ನ ‘ಬಿಸಿ’ಯಾದ ನೀರು. ಅಧಿಕಾರಿಗಳ ಲೆಕ್ಕಾಚಾರದಲ್ಲಿ ಇರಿಸಿದ್ದ ತಂಪಾದ ಕುಡಿಯುವ ನೀರಿನ ಕ್ಯಾನ್‌ಗಳು ಬಂದವರ ದಾಹ ತಣಿಸಲಿಲ್ಲ.

ಕೋಲ್ಡ್‌ ಕ್ಯಾನ್‌ಗಾಗಿ ಮುಗಿಬಿದ್ದವರಿಗೆ ಮುಂದಕ್ಕೆ, ಇನ್ನೊಂದು ಟೆಂಟ್‌ನತ್ತ ಹೋಗುವಂತೆ ನೀರಿನ ಮೇಲ್ವಿಚಾರಕರು ಏರು ದನಿಯಲ್ಲಿ ಗದರಿಸಿದರು. ಮೇಲ್ವಿಚಾರಕರ ಸಿಡುಕಿನ ವರ್ತನೆಗೆ ಬೇಸತ್ತ ಮಹಿಳೆಯರು, ಕೈತೊಳೆಯಲು ಇರಿಸಿದ್ದ ಟ್ಯಾಂಕರ್ ನೀರಿನ ನಲ್ಲಿಗೆ ಬೊಗಸೆ ಒಡ್ಡಿ ‘ಬಿಸಿ’ ನೀರನ್ನೇ ಕುಡಿದರು. ಮೈದಾನದಲ್ಲಿ ನೂರಾರು ಸರ್ಕಾರಿ ನೌಕರರು, ಅಧಿಕಾರಿಗಳು ಓಡಾಡುತ್ತಿದ್ದರೂ ‘ಇದು ಕುಡಿಯುವ ನೀರಲ್ಲ. ಕೈತೊಳೆಯುವ ನೀರು’ ಎಂದು ಒಬ್ಬರೂ ಹೇಳಲಿಲ್ಲ.

‘20 ಲೀಟರ್ ಸಾಮರ್ಥ್ಯದ 2,000 ತಂಪಾದ ಕ್ಯಾನ್‌ಗಳನ್ನು ತರಿಸಿಕೊಳ್ಳಲಾಗಿದೆ. ಊಟದ ಟೆಂಟ್‌ನ ಎಡಬದಿಯಲ್ಲಿ ಸಾಕಷ್ಟು ನೀರು ಇರಿಸಲಾಗಿದೆ. ವೇದಿಕೆಯ ಮುಂಭಾಗದ ಸಭಿಕರ ಮಧ್ಯದಲ್ಲಿ ನೀರಿನ ಪ್ಲಾಸ್ಟಿಕ್ ಪೌಚ್‌ಗಳನ್ನು ಇರಿಸಿಲಾಗಿದೆ. ಆದರೂ ಜನರು ಟ್ಯಾಂಕರ್ ನೀರಿನತ್ತ ಹೋಗುತ್ತಿದ್ದಾರೆ. ಆ ನೀರು ಕುಡಿಯದಂತೆ ತಿಳಿಸಲಾಗುವುದು’ ಎಂದು ಎಇಇ ಶಿವಕುಮಾರ ಪಾಟೀಲ ಹೇಳಿದರು.

ದೂರದ ಊರಿಂದ ಬೆಳಿಗ್ಗೆಯೇ ಮನೆ ಬಿಟ್ಟು ಬಂದಿದ್ದ ಮಹಿಳೆಯರು, ಯುವಕರು, ವಯಸ್ಕರು ಹಸಿದಿದ್ದರು. ಬಿಸಿಲಿನ ಧಗೆ ಅವರ ಹಸಿವಿಗೆ ಇನ್ನಷ್ಟು ಪುಷ್ಟಿ ಕೊಟ್ಟಿತ್ತು. ಮುಂಚಿತವಾಗಿ ಬಂದ ಒಂದಿಷ್ಟು ಮಂದಿ ಬೂಂದಿ, ಅನ್ನ– ಸಾಂಬಾರ್ ತಿಂದು ವೇದಿಕೆ ಮುಂಭಾಗದಲ್ಲಿ ಆಸೀನರಾದರು. ಕೆಲವರು ಮರದ ನೆರಳು ಆಶ್ರಯಿಸಿದರು. ತಡವಾಗಿ ಬಂದವರು ‘ಬಿಸಿ’ ನೀರು ಕುಡಿದು ಊಟದ ಟೆಂಟ್‌ನತ್ತ ತೆರಳಿದರು. ಸರತಿ ಸಾಲಿನಲ್ಲಿ ನಿಂತು ಪೇಪರ್ ತಟ್ಟೆಯಲ್ಲಿ ಅನ್ನ–ಸಾಂಬರ್, ಬೂಂದಿ ತಿನ್ನುತ್ತಿದ್ದರು. ನಾಯಕರು ವೇದಿಕೆಗೆ ಬಂದಿದ್ದಾರೆ ಊಟ ನಿಲ್ಲಿಸಿ, ವೇದಿಕೆಯ ಮುಂಭಾಗ ಬರುವಂತೆ ಮೈಕ್‌ನಲ್ಲಿ ಅನೌನ್ಸ್ ಆಗುತ್ತಿದ್ದಂತೆ ಊಟಕ್ಕೆ ಬ್ರೇಕ್ ಹಾಕಲಾಯಿತು.

ಹಸಿದವರು ಸಪ್ಪೆ ಮುಖದೊಂದಿಗೆ, ಕೆಲವರು ಚೀರಾಡುತ್ತಾ ಊಟ ಕೊಡುವಂತೆ ಊಟ ಬಡಿಸುವವರನ್ನು ದಬಾಯಿಸಿದರು. ನಮಗೆ ಸಂಬಂಧವೇ ಇಲ್ಲ ಎಂಬಂತೆ ಅವರೆಲ್ಲರೂ ನಿಂತಿದ್ದರು. ಜನರು ವೇದಿಕೆಯತ್ತ ಬಾರದೆ ಇದ್ದಾಗ ಪೊಲೀಸರನ್ನು ಕಳುಹಿಸಿ ವೇದಿಕೆಗೆ ಕಳುಹಿಸಲಾಯಿತು!

‘ಮುಂಜಾನೆ 9ಕ್ಕೆ ಮನೆ ಬಿಟ್ಟು ಬಂದೀವ್ರಿ. ಚುಕ್ಕಳಿಗೆ (ಮಕ್ಕಳು) ಹಸುವಾಗ್ಯಾದ್ ಸ್ವಲ್ಪ ಊಟ ಮಾಡಿ ಹೋಗ್ತಿವೆ’ ಎಂದು ಮಹಿಳೆಯೊಬ್ಬರು ಅಲವತ್ತುಕೊಂಡರು.

‘ಕಾರ್ಯಕ್ರಮ ಶುರುವಾಗಿದೆ ಯಾರಿಗೂ ಊಟ ಕೊಡಬೇಡಿ’ ಎಂದು ಪೊಲೀಸ್ ಸಿಬ್ಬಂದಿ ಊಟು ಕೊಡುವವರಿಗೆ ದಬಾಯಿಸಿದರು. ಪೇಲವ ಮುಖಹೊತ್ತು ತಮ್ಮನ್ನು ಕರೆತಂದ ಕಾರ್ಯಕರ್ತರತ್ತ ನೋಡಿದರು. ಅವರೂ ನಿಸ್ಸಹಾಯಕರಾಗಿ ನಿಂತಿದ್ದು ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT