ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಕಡಿತ ಮಾಡದ ಕೇಂದ್ರದ ಕ್ರಮಕ್ಕೆ ಖರ್ಗೆ ಆಕ್ರೋಶ

ಇಂಧನ ಬೆಲೆ ಏರಿಕೆಯಿಂದ ಉತ್ಪಾದನಾ ವಲಯಕ್ಕೆ ಹೊಡೆತ: ಮಲ್ಲಿಕಾರ್ಜುನ ಖರ್ಗೆ
Last Updated 17 ಅಕ್ಟೋಬರ್ 2021, 14:09 IST
ಅಕ್ಷರ ಗಾತ್ರ

ಕಲಬುರಗಿ: ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ಇಂಧನ ದರ ಕಡಿಮೆಯಾಗುತ್ತಿಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ತೆರಿಗೆಯಲ್ಲಿ ಕಡಿತ ಮಾಡಿದರೆ, ದರ ಏರಿಕೆ ನಿಯಂತ್ರಿಸಬಹುದು. ಆದರೆ ಎರಡೂ ಕಡೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳು ತೆರಿಗೆ ಕಡಿತ ಮಾಡಲು ತಯಾರಿಲ್ಲ’ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ದರ ಏರಿಕೆ ನಿಯಂತ್ರಣಕ್ಕೆ ಬಾರದ ಕಾರಣ ಉತ್ಪಾದನಾ ವಲಯ ಹಾಗೂ ಕೃಷಿ ಚಟುವಟಿಕೆಗೆ ದೊಡ್ಡ ಹೊಡೆತ ಬಿದ್ದಿದೆ‘ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವರ ಒಡೆದು ಆಳುವ ನೀತಿಗೆ ದೇಶದ ಜನ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಭಾರಿ ಪರಿಣಾಮ ಎದುರಿಸಬೇಕಿದೆ. ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಸೆಳೆಯುವುದು. ಬರದಿದ್ದರೆ ಐಟಿ, ಇ.ಡಿ. ದಾಳಿ ಮಾಡಿಸುವ ಮೂಲಕ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಈ ಬೆದರಿಕೆಗೆ ಬಗ್ಗುವುದಿಲ್ಲ’ ಎಂದು ಅವರು ತಿಳಿಸಿದರು.

ದೆಹಲಿಯಲ್ಲಿ ಈಚೆಗೆ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಇಂಧನ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಜಮ್ಮು–ಕಾಶ್ಮೀರ ಸಮಸ್ಯೆ, ರೈತರ ಸಮಸ್ಯೆ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ಕಾನೂನು ಸುವ್ಯವಸ್ಥೆ ಹೀಗೆ ಹಲವು ಹತ್ತು ವಿಷಯಗಳು ಚರ್ಚೆಗೆ ಬಂದಿವೆ. ಪಕ್ಷದ ನಿಲುವು ಕುರಿತು ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

‘ಪಕ್ಷದಲ್ಲಿ ಕ್ರಿಯಾಶೀಲ ಯುವಕರಿಗೆ ಆದ್ಯತೆ ನೀಡಬೇಕು. ಕೆಳ ಮಟ್ಟದಿಂದಲೂ ಪಕ್ಷ ಕಟ್ಟುವ ಕೆಲಸ ಆಗಬೇಕು. ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಅಣಿಗೊಳಿಸಬೇಕು. ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಮುಂಚಿತವಾಗಿ ಘೋಷಣೆ ಮಾಡಬೇಕು. ಈ ಹಿಂದಿನ ಚುನಾವಣೆಗಳಲ್ಲಿ ಸೋತಿರುವ ಕ್ಷೇತ್ರಗಳಲ್ಲಿ ಕೈಗೊಳ್ಳಬಹುದಾದ ಕ್ರಮ ಕುರಿತು ಚರ್ಚಿಸಲಾಗಿದೆ’ ಎಂದು ಖರ್ಗೆ ವಿವರಿಸಿದರು.

‘ರಾಹುಲ್‌ ಗಾಂಧಿಯವರು ಪಕ್ಷದ ನಾಯಕತ್ವ ವಹಿಸಿಕೊಳ್ಳುವಂತೆ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ. ಪಕ್ಷ ಕಟ್ಟಲು ತಮ್ಮದೇ ಕೆಲ ಸಿದ್ಧಾಂತ, ಗುರಿ ಇದೆ. ಎಲ್ಲರೂ ಒಪ್ಪಿ ಅದರಂತೆ ನಡೆದುಕೊಳ್ಳುವುದಾದರೆ ಪರಿಶೀಲನೆ ನಡೆಸುವುದಾಗಿ ರಾಹುಲ್‌ ಅವರು ಹೇಳಿದ್ದಾರೆ’ ಎಂದರು.

ಪ್ರಧಾನಿ ಮೋದಿಯವರು ಪ್ರಚಾರ ಪಡೆಯುವುದರಲ್ಲಿ ನಿಸ್ಸೀಮರು. ಭದ್ರತೆಯ ವಿಚಾರದಲ್ಲೂ ಅವರು ಪ್ರಚಾರ ಗಿಟ್ಟಿಸುತ್ತಾರೆ. ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಆದರೆ ಪ್ರಚಾರದ ಗೊಡವೆಗೆ ಹೋಗಿಲ್ಲ. ಆದರೆ ಮೋದಿಯವರು ರಾಜಕೀಯವಾಗಿ ಈ ವಿಚಾರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲಸ ಕಡಿಮೆ, ಪ್ರಚಾರ ಜಾಸ್ತಿ ಎಂಬುದು ಬಿಜೆಪಿ ತಂತ್ರ. ಆದರೆ ಕೆಲಸ ಜಾಸ್ತಿ, ಪ್ರಚಾರ ಕಡಿಮೆ ಪಡೆಯಲು ಕಾಂಗ್ರೆಸ್ ಬಯಸುತ್ತದೆ. ಕೆಲಸಕ್ಕಿಂತ ಬಿಜೆಪಿಗೆ ಪ್ರಚಾರದ ಗೀಳು ಅಂಟಿದೆ ಎಂದು ಟೀಕಿಸಿದರು.

ಕೆಪಿಸಿಸಿ ವಕ್ತಾರ ಸಚಿವ ಡಾ.ಶರಣಪ್ರಕಾಶ ಪಾಟೀಲ, ಶಾಸಕ ಎಂ.ವೈ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಚೇತನಕುಮಾರ್ ಗೋನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT