ಶುಕ್ರವಾರ, ಆಗಸ್ಟ್ 6, 2021
25 °C
ನಗರದಲ್ಲಿ ಎಲ್ಲೆಂದರಲ್ಲಿ ಜನವೋಜನ, ಹಳೆಯ ವೈಭವ ಮರಳಿ ‍ಪಡೆದ ಮಾರುಕಟ್ಟೆಗಳು

ಕಲಬುರ್ಗಿ: ಮೊದಲ ದಿನ ಭರ್ಜರಿ ವ್ಯಾಪಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮೂರು ತಿಂಗಳ ಬಳಿಕ ನಗರದಲ್ಲಿ ಸೋಮವಾರ ವ್ಯಾಪಾರ– ವಹಿವಾಟು ಮತ್ತೆ ಚೇತರಿಸಿಕೊಂಡಿತು. ಜಿಲ್ಲಾಡಳಿತ ಅನುಮತಿ ನೀಡಿದ ಮೊದಲ ದಿನವೇ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. 

ಸೂಪರ್‌ ಮಾರ್ಕೆಟ್‌, ಶಹಾಬಜಾರ್‌, ಕೋಟೆ ರಸ್ತೆ, ಎಂಎಸ್‌ಕೆ ಮಿಲ್‌ ಮಾರ್ಗ, ರೈಲು ನಿಲ್ದಾಣ ಮಾರ್ಗ, ಕೋರ್ಟ್‌ ರಸ್ತೆ, ಹಳೆ ಜೇವರ್ಗಿ ರೋಡ್‌ ಹಾಗೂ ಹೊಸ ಜೇವರ್ಗಿ ರಸ್ತೆಗಳು ತಮ್ಮ ಹಳೆಯ ವೈಭವ ಮರಳಿ ಪಡೆದವು. 

ಶಹಾಬಜಾರ್‌ ನಾಕಾ, ಆಳಂದ ನಾಕಾ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ರಾಷ್ಟ್ರಪತಿ ಚೌಕ್‌, ಜಗತ್‌ ವೃತ್ತ, ಮುಸ್ಲಿಂ ಚೌಕ್‌, ಎಪಿಎಂಸಿ ಸೇರಿದಂತೆ ಎಲ್ಲ ಕಡೆ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಹುಪಾಲು ಎಲ್ಲ ವೃತ್ತ– ಚೌಕಗಳಲ್ಲಿಯೂ ಸಿಗ್ನಲ್‌ ದೀಪಗಳು ಮತ್ತೆ ಕಣ್ಣು ತೆರೆದವು.

ಭರ್ಜರಿ ವ್ಯಾಪಾರ: ಬಟ್ಟೆ ಅಂಗಡಿ, ಪಾತ್ರ, ಪ್ಲಾಸ್ಟಿಕ್‌ ಸಾಮಗ್ರಿ, ಎಲೆಕ್ಟ್ರಾನಿಕ್‌ ಉಪಕರಣ, ಮೊಬೈಲ್‌ ಅಂಗಡಿ, ಗೃಹಬಳಕೆ ವಸ್ತುಗಳು, ಪುಸ್ತಕ ಮಳಿಗೆ, ಹಾರ್ಡ್‌ವೇರ್, ಪೇಂಟಿಂಗ್‌, ಅಟೊಮೊಬೈಲ್‌, ಕಂಪ್ಯೂಟರ್‌ ಮುಂತಾದ ಮಳಿಗೆಗಳ ಮುಂದೆ ಜನವೋ ಜನ. ಅದರಲ್ಲೂ ಬಟ್ಟೆ ಹಾಗೂ ಪಾತ್ರೆ ಅಂಗಡಿಗಳಲ್ಲಿ ಹಲವರು ಗುಂಪುಗುಂ‍ಪಾಗಿ ಮುಗಿಬಿದ್ದರು.

ಬಹಳಷ್ಟು ದಿನಗಳಿಂದ ಬಟ್ಟೆ, ಗೃಹೋಪಯೋಗಿ ಸಲಕರಣೆ, ಉಪಕರಣಗಳನ್ನು ಖರೀದಿಸಲು ಕಾದು ಕುಳಿತಿದ್ದವರೆಲ್ಲ ಒಮ್ಮೆಲೇ ಮಾರುಕಟ್ಟೆಗೆ ನುಗ್ಗಿ ಬಂದರು. ಇದರಿಂದ ಫುಟ್‌ಪಾತ್‌ಗಳಲ್ಲಿಯೂ ಜನಸಂದಣಿ ಹೆಚ್ಚಿತ್ತು. ಕೆಲವು ಹೋಟೆಲ್‌ ಹಾಗೂ ಬೇಕರಿಗಳು ಕೂಡ ಬಾಗಿಲು ತೆರೆದು, ಪಾರ್ಸೆಲ್‌ ಕೊಡಲು ಆರಂಭಿಸಿದ್ದು ಕಂಡುಬಂತು.

ಹಳ್ಳಿಜನರೇ ಹೆಚ್ಚು: ಜಿಲ್ಲೆಯ ವಾಣಿಜ್ಯ ಕೇಂದ್ರವಾದ ಸೂಪರ್‌ ಮಾರ್ಕೆಟ್‌ನಲ್ಲಂತೂ ಜನಜಾತ್ರೆಯೇ ಸೇರಿತು. ಅಂಗಡಿಗಳ ಮುಂದೆ, ಒಳಗೆ ಕನಿಷ್ಠ ಅಂತರವನ್ನೂ ಕಾಯ್ದುಕೊಳ್ಳಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಬೈಕ್‌, ಕಾರ್‌ಗಳನ್ನು ಒಂದಕ್ಕೊಂದು ಅಂಟಿದಂತೆ ಪಾರ್ಕಿಂಗ್‌ ಮಾಡಲಾಯಿತು. ಫುಟ್‌ಪಾತ್‌ಗಳ ಮೇಲೆಯೇ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡಲಾಯಿತು. ಬಹುದಿನಗಳ ನಂತರ ಮಾರುಕಟ್ಟೆ ಲಗ್ಗೆ ಇಟ್ಟ ಜನ ಪೊಲೀಸರ ಸೂಚನೆಗಳಿಗೂ ಬೆಲೆ ಕೊಡದಾದರು.‌

ನಗರವಾಸಿಗಳಿಗಿಂತ ಹೆಚ್ಚಾಗಿ ಹಳ್ಳಿಯ ಜನರೇ ಮಾರುಕಟ್ಟೆಯಲ್ಲಿ ಕಂಡುಬಂದರು.‌ ಈ ಹಿಂದೆ ಒಂದು ದಿನ ವ್ಯಾಪಾರಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತ ಒಂದೇ ದಿನದಲ್ಲಿ ಮತ್ತೆ ಬಂದ್‌ ಮಾಡಿತ್ತು. ಹೀಗಾಗಿ, ಈ ಬಾರಿ ಮೊದಲ ದಿನವೇ ತಮಗೆ ಬೇಕಾದ ಸಾಮಗ್ರಿ ಖರೀದಿಸಲು ಹೆಚ್ಚಿನ ಜನ ಧಾವಿಸಿದರು. ತಲೆ ಮೇಲೆ ದೊಡ್ಡ ದೊಡ್ಡ ಮೂಟೆಗಳನ್ನು ಹೊತ್ತುಕೊಂಡು ಹೊರಟ ಜನರೇ ಎಲ್ಲೆಂದರಲ್ಲಿ ಕಂಡರು.

ಅರ್ಥ ಕಳೆದುಕೊಂಡ ಅಂತರ: ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌, ಸ್ಯಾನಿಟೈಸರ್‌, ಹ್ಯಾಂಡ್‌ಗ್ಲೌಸ್‌ ಬಳಸುವುದು ವ್ಯಾಪಾರಿಗಳ ಜವಾಬ್ದಾರಿ ಎಂದು ಜಿಲ್ಲಾಡಳಿತ ನಿರ್ದೇಶ ನೀಡಿದೆ. ಆದರೆ, ಇದಾವುದೂ ಪಾಲನೆ ಆಗಲಿಲ್ಲ.

ಬಹುಪಾಲು ಜನ ತಮ್ಮ ಅಂಗಡಿಗಳ ಮುಂದೆ ಕಟ್ಟಿಗೆಯ ಬ್ಯಾರಿಕೇಡ್‌ ಕಟ್ಟಿದ್ದಾರೆ. ಆದರೆ, ಜನ ಅದರೊಳಗೂ ತೂರಿ ಹೋದರು. ವ್ಯಾಪಾರಿಗಳು ಮಾತ್ರ ಮಾಸ್ಕ್ ಧರಿಸಿದ್ದು, ಕಂಡುಬಂತು.

ಸೂಪರ್ ಮಾರ್ಕೆಟ್‌ನ ತರಕಾರಿ ಮಾರುಕಟ್ಟೆ, ಬಾಂಡೆ ಬಜಾರ್‌, ಚಪ್ಪಲ್‌ ಬಜಾರ್‌, ಮೊಬೈಲ್‌ ಮಳಿಗೆ, ಕಪಡಾ ಬಜಾರ್‌ಗಳಲ್ಲಿ ‘ಅಂತರ’ಕ್ಕೆ ಅರ್ಥವೇ ಇಲ್ಲದಂತೆ ವರ್ತಿಸಿದರು. ಒಬ್ಬರ ಹಿಂದೊಬ್ಬರು ಮುಗಿಬಿದ್ದು ವ್ಯಾಪಾರಿ ಮಾಡಿದರು.

ಇನ್ನೂ ಸ್ತಬ್ಧ: ಮುಂಚೆಯೇ ನಿಷೇಧ ಹೇರಿದ್ದ ಮಾಲ್‌ಗಳು, ಮಲ್ಟಿಪ್ಲೆಕ್ಸ್, ಚಲನಚಿತ್ರ ಮಂದಿರ, ಲಾಡ್ಜ್‌, ಹೇರ್‌ಕಟಿಂಗ್‌ ಸೆಲೂನ್, ಗುಟ್ಕಾ– ಸಿಗರೇಟ್ ಮಾರಾಟ, ಮಂದಿರ, ಮಸೀದಿ, ಗುರುದ್ವಾರ, ದರ್ಗಾ, ಜಿಮ್‌, ಈಜುಕೊಳ, ಉದ್ಯಾನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲೂ ಲಾಕ್‌ಡೌನ್‌ ಬಿಗಿಗೊಳಿಸಲು ನಿರ್ಧರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು