ಅಹಿಂಸಾ ನೌಕರರ ಹಿತ ಕಾಪಾಡಲು ಒತ್ತಾಯ: ಬೃಹತ್ ಪ್ರತಿಭಟನಾ ಪ್ರದರ್ಶನ ಅ.11ರಂದು

7

ಅಹಿಂಸಾ ನೌಕರರ ಹಿತ ಕಾಪಾಡಲು ಒತ್ತಾಯ: ಬೃಹತ್ ಪ್ರತಿಭಟನಾ ಪ್ರದರ್ಶನ ಅ.11ರಂದು

Published:
Updated:

ಕಲಬುರ್ಗಿ: ಶೇ 82ರಷ್ಟು ವರ್ಗದ ಸಿಬ್ಬಂದಿಗೆ ಮುಂಬಡ್ತಿ ನೀಡುವುದು ಹಾಗೂ ಅಹಿಂಸಾ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗ) ನೌಕರರ ಹಿತ ಕಾಪಾಡುವಂತೆ ಒತ್ತಾಯಿಸಿ ಅಹಿಂಸಾ ನೌಕರರ ಒಕ್ಕೂಟದ ಜಿಲ್ಲಾ ಸಮಿತಿಯು ಅ.11ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಂಡಿದೆ.

ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕದಮ್ ಹಾಗೂ ಕಾರ್ಯದರ್ಶಿ ರವೀಂದ್ರ ಶಾಬಾದಿ, ‘ಮೀಸಲಾತಿಗೆ ಸಂಬಂಧಿಸಿದಂತೆ ಎಂ. ನಾಗರಾಜ ಮತ್ತು ಬಿ.ಕೆ.ಪವಿತ್ರ ಹಾಗೂ ಇತರೆ ಪ್ರಕರಣಗಳಲ್ಲಿ ಸರ್ಕಾರಿ ಸೇವೆಯಲ್ಲಿರುವ ಸಾಮಾನ್ಯ ವರ್ಗದ ನೌಕರರ ಜೇಷ್ಠತೆನ್ನು ಆಧರಿಸಿ ಶೇ 82ರಷ್ಟು ವರ್ಗದ ಸಿಬ್ಬಂದಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಮುಂಬಡ್ತಿ ನೀಡಬೇಕು ಎಂದು ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಬೇಕಾದ ರಾಜ್ಯ ಸರ್ಕಾರ ಶೇ 18ರಷ್ಟು ವರ್ಗದವರನ್ನು ರಕ್ಷಿಸಲು ಮುಂದಾಗಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿಭಟನಾ ಪ್ರದರ್ಶನದಲ್ಲಿ ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ನಿಗಮ– ಮಂಡಳಿಗಳಾದ ಕೆಎಸ್‌ಆರ್‌ಟಿಸಿ, ಜೆಸ್ಕಾಂ, ಕೆಪಿಟಿಸಿಎಲ್ ಹಾಗೂ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಇಲಾಖೆಗಳ ಸೇವಾನಿರತ ಹಾಗೂ ನಿವೃತ್ತ ನೌಕರರು ಪಾಳ್ಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಮನವಿಪತ್ರ ಸಲ್ಲಿಸಲಾಗುವುದು’ ಎಂದರು.

ಹೇಳಿಕೆ ಹಿಂಪಡೆಯಲು ಒತ್ತಾಯ: ‘ಕೆಡಿಪಿ ಸಭೆಯಲ್ಲಿ ಪಾಲಿಕೆ ಕಾರ್ಯ ನಿರ್ವಾಹಕ ಎಂಜಿನಿಯರ್‌ಗೆ ಒದಿತೀನಿ ಎಂಬ ಪದ ಪ್ರಯೋಗಿಸಿರುವ ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ಕೈಗೊಳ್ಳಲಾಗುವುದು’ ಎಂದು ಸೂರ್ಯಕಾಂತ ಕದಮ್ ಎಚ್ಚರಿಕೆ ನೀಡಿದರು.

‘ಸಚಿವರಾದವರು ಸರ್ಕಾರಿ ನೌಕರರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಆದರೆ ಒದಿತೀನಿ ಎಂಬ ಪದ ಬಳಕೆ ಮೂಲಕ ನೌಕರ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ’ ಎಂದು ದೂರಿದರು.

ಒಕ್ಕೂಟದ ಗೌರವ ಅಧ್ಯಕ್ಷ ಜಿ.ಆರ್.ಮುತಗಿ, ಮುಖಂಡ ಆರ್.ಜಿ.ಶೆಟಗಾರ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಚಿಂಚೋಳಿ, ಕೋಲಿ ಸಮಾಜದ ಮುಖಂಡ ನೀಲಕಂಠ ಜಮಾದಾರ, ನಿವೃತ್ತ ಎಂಜಿನಿಯರ್ ಚಂದ್ರಶೇಖರ ಕಕ್ಕೇರಿ ಇದ್ದರು.

ಪ್ರಿಯಾಂಕ್, ಮಹೇಶ್ ವಿರುದ್ಧ ಆಕ್ರೋಶ

‘ಸಚಿವ ಸಂಪುಟದ ಕೆಲ ಸದಸ್ಯರ ಒತ್ತಡಕ್ಕೆ ಒಳಗಾಗಿರುವ ಸರ್ಕಾರ, ಅ.12ರಂದು ಸುಪ್ರೀಂಕೋರ್ಟ್ ತೀರ್ಪನ್ನು ಅವಲೋಕಿಸಿ ಅದೇ ದಿನ 2017ರ ಬಡ್ತಿ ಮೀಸಲಾತಿ ವಿಧೇಯಕವನ್ನು ಜಾರಿ ಮಾಡಲು ಮುಂದಾಗಿರುವುದು ಖಂಡನೀಯ’ ಎಂದು ಸೂರ್ಯಕಾಂತ್ ಕದಮ್ ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ರಾಜೀನಾಮೆ ಬೆದರಿಕೆ ಒಡ್ಡಿದ್ದಾರೆ. ಶೇ 18ರಷ್ಟು ನೌಕರರಿಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸುತ್ತ, ಶೇ 82ರಷ್ಟು ವರ್ಗದ ನೌಕರರನ್ನು ಕಡೆಗಣಿಸುತ್ತಿದ್ದಾರೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !