‘ಕಲಿಕೆ ನಂತರ ಭವಿಷ್ಯದ ಪ್ರಶ್ನೆ ಕಾಡದಿರಲಿ’

7
ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮಿನಿ ಘಟಿಕೋತ್ಸವ

‘ಕಲಿಕೆ ನಂತರ ಭವಿಷ್ಯದ ಪ್ರಶ್ನೆ ಕಾಡದಿರಲಿ’

Published:
Updated:
Deccan Herald

ಕಲಬುರ್ಗಿ: ‘ಕಲಿಯುವ ಹಂತದಲ್ಲೇ ವಿದ್ಯಾರ್ಥಿಗಳು ಪರಿಪೂರ್ಣವಾಗಬೇಕು. ಶಿಕ್ಷಣ ಮುಗಿದಾಕ್ಷಣ ನಿಮ್ಮ ವೃತ್ತಿ ಸಾಮರ್ಥ್ಯ, ಕೌಶಲವನ್ನು ಒರೆಗೆ ಹಚ್ಚಬೇಕು’ ಎಂದು ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸಲಹೆ ನೀಡಿದರು.

ಇಲ್ಲಿನ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜು ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಮಿನಿ ಘಟಿಕೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಿಕಾ ಹಂತ ಮುಗಿದ ಮೇಲೆ ನಮ್ಮಲ್ಲಿ ಮುಂದೇನು ಎಂಬ ಪ್ರಶ್ನೆ ಉಳಿಯಬಾರದು. ಪರೀಕ್ಷೆ ದೃಷ್ಟಿಯಿಂದ ಮಾತ್ರ ಯಾರು ಓದುತ್ತಾರೋ ಅವರಿಗೆ ಈ ಪ್ರಶ್ನೆಗಳು ಜೀವನಪೂರ್ತಿ ಕಾಡುತ್ತವೆ. ಜ್ಞಾನ ಹಾಗೂ ಕೌಶಲ ವೃದ್ಧಿಯೇ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುತ್ತವೆ’ ಎಂದು ಹೇಳಿದರು.

‘ಕಲಿಯುವ ವಿಷಯದ ಮೇಲಿನ ಪ್ರೀತಿ ಹಾಗೂ ಕಲಿಸುವ ಗುರುವಿನ ಮೇಲೆ ಭಕ್ತಿ ಇದ್ದರೆ ಮಾತ್ರ ಯಾವುದೇ ವಿಷಯ ಪೂರ್ಣವಾಗಿ ಮನನವಾಗುತ್ತದೆ. ಪಾಲಕರು ಕಷ್ಟಪಟ್ಟು ನಿಮ್ಮನ್ನು ಉನ್ನತ ಹಂತದಲ್ಲಿ ನೋಡುವ ಕನಸು ಕಾಣುತ್ತಾರೆ. ಅವರ ಆಸೆಗೆ ನೀರೆರೆಚಬೇಡಿ. ಒಮ್ಮೆ ಹಿಂದೆಬಿದ್ದರೆ ಜೀವನವೇ ಮುಗಿಯಿತು ಎನ್ನುವ ಮಟ್ಟಿಗೆ ಕುಸಿಯುವುದ ಬೇಡ. ಸಾಧಕರನ್ನು ನೋಡಿ ಮತ್ತೆ ಚೈತನ್ಯ ಪಡೆದು ಮುಂದೆ ಬನ್ನಿ’ ಎಂದು ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ರಾಮಕೃಷ್ಣ ರೆಡ್ಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಎನ್‌.ಎಸ್‌.ದೇವರಕಲ್‌ ಅಧ್ಯಕ್ಷತೆ ವಹಿಸಿದ್ದರು.

ರ್‍ಯಾಂಕ್ ವಿಜೇತರಿಗೆ ನಗದು ಪುರಸ್ಕಾರ:

‘ನೀಟ್‌’ನಲ್ಲಿ ಸಹನಾ ಎಚ್‌. (ರಾಜ್ಯಕ್ಕೆ 41ನೇ ರ್‍ಯಾಂಕ್‌– ₹1 ಲಕ್ಷ ನಗದು ಬಹುಮಾನ), ಆಕಾಶ್‌ ರಾಗಾ (ರಾಜ್ಯಕ್ಕೆ 57ನೇ ರ್‍ಯಾಂಕ್‌– ₹51 ಸಾವಿರ ನಗದು ಬಹುಮಾನ), ಭಾಗ್ಯಶ್ರೀ ರೆಡ್ಡಿ (ರಾಜ್ಯಕ್ಕೆ 89ನೇ ರ್‍ಯಾಂಕ್‌– ₹21 ಸಾವಿರ ನಗದು ಬಹುಮಾನ) ಅವರನ್ನು ಸನ್ಮಾನಿಸಲಾಯಿತು.

ಜೆಐಪಿಎಂಇಆರ್‌ ಪರೀಕ್ಷೆಯಲ್ಲಿ ಅಶುತೋಷ್‌ ಕಟ್ಟಿಮನಿ, ಜೆಇಇ ಪರೀಕ್ಷೆಯಲ್ಲಿ ವಿಶಾಲಕುಮಾರ ಮುಗಳಿ, ಎನ್‌ಐಟಿಯಲ್ಲಿ ಮಣಿಕಂಠ ಜೆ., ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನಾಗರಾಜ ಯು.ಬಿ. (588), ಅನುಷಾ ಆರ್‌.ಪಾಟೀಲ, ಭುವನೇಶ್ವರಿ ಜಿ. (586), ಲುಬನಾ ಮಲಿಹಾ, ಸಹನಾ ಎಚ್‌. ಹಾಗೂ ಭಾಗ್ಯಶ್ರೀ ಶರಣಪ್ಪ (585) ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !