ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಸೇವೆಗೆ ನಿಮ್ಮ ಸಮಯ ಮೀಸಲಿಡಿ: ಮೋಹನ್ ಭಾಗವತ್

ಸಂಕ್ರಾಂತಿ ಪ್ರಯುಕ್ತ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಸಂದೇಶ
Last Updated 13 ಜನವರಿ 2022, 16:28 IST
ಅಕ್ಷರ ಗಾತ್ರ

ಕಲಬುರಗಿ: ‘ದಿನದ 24 ಗಂಟೆಯಲ್ಲಿ ಕನಿಷ್ಠ ಎಂಟು ಗಂಟೆಗಳನ್ನು ದೇಶ ಸೇವೆಗೆ ಮೀಸಲಿಡಬೇಕು. ಓದು ಮುಗಿದ ಬಳಿಕ ಕೆಲ ಕಾಲವಾದರೂ ಯುವಕರು ಶಾಖೆಯನ್ನು ಸೇರಿ ಕೆಲಸ ಮಾಡಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಕರೆ ನೀಡಿದರು.

ನಗರದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ನಿಮಿತ್ತ ಸಂಘದ ಸ್ವಯಂ ಸೇವಕರೊಂದಿಗೆ ವರ್ಚುವಲ್ ವೇದಿಕೆ ಮೂಲಕ ಸಂದೇಶ ನೀಡಿದ ಅವರು, ‘ದೇಶದಲ್ಲಿ ಸುಮಾರು 135 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಅಂದಾಜು 100 ಕೋಟಿ ಹಿಂದೂ ಧರ್ಮೀಯರಿದ್ದಾರೆ. ಆ ಪೈಕಿ ಶೇ 1ರಷ್ಟು ಸಹ ಸಂಘದ ಕಾರ್ಯಕರ್ತರಿಲ್ಲ. ನಾವು ಮಾಡಬೇಕಾದ ಕಾರ್ಯ ಇನ್ನೂ ಬಹಳಷ್ಟಿದೆ. 2019ರಲ್ಲಿ ಕೋವಿಡ್ ಆರಂಭವಾದ ಬಳಿಕ ಸಂಘವು ಸಾಕಷ್ಟು ಕೆಲಸ ಮಾಡಿದೆ. ಇದನ್ನು ಮೆಚ್ಚಿ ಬರುವವರ ಸಂಖ್ಯೆ ಹೆಚ್ಚಾಗಿದೆ’ ಎಂದರು.

‘ಸಂಕ್ರಾಂತಿಯಂದು ಸೂರ್ಯನು ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ಅದೇ ರೀತಿ ಕರ್ನಾಟಕ ಉತ್ತರ ಪ್ರಾಂತದ ಆರ್‌ಎಸ್‌ಎಸ್‌ ಬೈಠಕ್‌ ನಡೆಯುತ್ತಿದೆ. ಸೂರ್ಯನು ಸದಾ ಪ್ರಖರವಾಗಿ ಪ್ರಕಾಶಿಸುತ್ತಾನೆ. ಒಮ್ಮೆ ಭೂಮಿಗೆ ಹತ್ತಿರ ಬರುತ್ತಾನೆ, ಮತ್ತೊಮ್ಮೆ ದೂರ ಹೋಗುತ್ತಾನೆ. ಆದರೆ, ತನ್ನ ಕಕ್ಷೆಯಲ್ಲೇ ಸುತ್ತುತ್ತಿರುತ್ತಾನೆ. ಅದೇ ರೀತಿ ಸಂಘದ ಸ್ವಯಂ ಸೇವಕರು ತನ್ನ ಸಾಧನೆಯನ್ನು ನಿಯಮಿತವಾಗಿ ಮಾಡುತ್ತಿರಬೇಕು. ಅದಕ್ಕೆ ಪೂರಕವಾಗಿ ಶಾಖೆಯು ಅಗತ್ಯ ಮಾರ್ಗದರ್ಶನವನ್ನು ಮಾಡುತ್ತದೆ. ಜಾತಿ, ಪಂಥಗಳ ಭೇದವನ್ನು ಮಾಡದೇ ಸಮಗ್ರ ಹಿಂದೂ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು’ ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದರು.

ದೇಶಭಕ್ತಿಯ ಟ್ರೇಡ್‌ಮಾರ್ಕ್: ದೇಶಭಕ್ತಿ ಎಂಬುದು ಸ್ವಯಂಸೇವಕನ ಟ್ರೇಡ್‌ ಮಾರ್ಕ್ ಆಗಬೇಕು. ಎಲ್ಲ ಹಿಂದೂಗಳು ಒಂದೇ ಎಂಬ ಭಾವನೆ ಬೆಳೆಯಬೇಕು. ಸ್ವದೇಶಿ ವಸ್ತುಗಳ ಬಳಕೆ, ಭ್ರಷ್ಟಾಚಾರ ಮಾಡದಿರುವುದು, ರಸ್ತೆ ನಿಯಮಗಳನ್ನು ಪಾಲಿಸುವುದು, ಸಮಾಜದ ಸಂಪತ್ತು ನಮ್ಮದೇ ಸಂಪತ್ತು ಎಂದುಕೊಂಡು ಕಾಯ್ದುಕೊಳ್ಳುವುದು, ಪರಿಸರವನ್ನು ಕಾಪಾಡುವುದು, ನೀರನ್ನು ಸಂರಕ್ಷಿಸುವುದು, ವಿದ್ಯುತ್‌ನ್ನು ಅಗತ್ಯವಾಗಿದ್ದಾಗಲಷ್ಟೇ ಬಳಕೆ ಮಾಡುವುದು ನಮ್ಮ ನಿತ್ಯದ ಪರಿಪಾಠವಾಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸಹ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಪ್ರಾಂತ ಪ್ರಚಾರಕ ನರೇಂದ್ರ, ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ಪ್ರಾಂತ ಬೌದ್ಧಿಕ ಪ್ರಮುಖ ಕೃಷ್ಣ ಜೋಶಿ, ವಿಭಾಗದ ಪ್ರಚಾರಕ ವಿಜಯ ಮಹಾಂತೇಶ ಇದ್ದರು.

ಮುಖ್ಯ ಕಾರ್ಯಕ್ರಮ ನಡೆದ ಹೊಸ ಜೇವರ್ಗಿ ರಸ್ತೆಯ ಖಮಿತಕರ್ ಸಭಾಂಗಣ ಸೇರಿದಂತೆ 11 ಕಡೆಗಳಲ್ಲಿ ಸ್ವಯಂ ಸೇವಕರು ಆನ್‌ಲೈನ್‌ ಮೂಲಕ ಮೋಹನ ಭಾಗವತ್ ಅವರ ಮಾತುಗಳನ್ನು ಆಲಿಸಿದರು. ಇದರೊಂದಿಗೆ ಮೂರು ದಿನಗಳ ಬೈಠಕ್‌ಗೆ ತೆರೆಬಿತ್ತು.

‘ಮಮ್ಮಿ, ಡ್ಯಾಡಿ ಸಂಸ್ಕೃತಿ ಬೇಡ’

ಮಮ್ಮಿ, ಡ್ಯಾಡಿ ಎನ್ನುವ ವಿದೇಶಿ ಸಂಸ್ಕೃತಿಯಿಂದ ಆದಷ್ಟೂ ಮಕ್ಕಳನ್ನು ದೂರವಿಡಬೇಕು. ಇದಕ್ಕೆ ಪರ್ಯಾಯವಾಗಿ ರಾಮಾಯಣ, ಮಹಾಭಾರತದ ಕಥೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ಇದು ಸಾಧ್ಯವಾಗಬೇಕಾದರೆ ದೇಶಭಕ್ತಿಯು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT