
ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷನಾಗಿರುವ ಖುಷಿ ಹೇಗಿದೆ?
ನಾನು ಸಮ್ಮಳನಾಧ್ಯಕ್ಷನಾಗುವೆ ಎಂದು ನಿಜಕ್ಕೂ ಊಹಿಸಿರಲಿಲ್ಲ. ನಾನೊಬ್ಬ ಕನ್ನಡದ ಸೇವಕ. ನನ್ನ ಕೆಲಸವನ್ನು ನಿರಂತರ ಮಾಡಿಕೊಂಡು ಬರುವುದರ ಜೊತೆಗೆ ಅನೇಕ ಕೃತಿಗಳನ್ನು ರಚಿಸಿದ್ದೇನೆ. ಸಾಹಿತ್ಯ ಪರಿಷತ್ತಿನ ತಾಲ್ಲೂಕು ಕಾರ್ಯದರ್ಶಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಕೆಲಸವನ್ನು ಸಾಹಿತ್ಯ ಕೃತಿ ಹಾಗೂ ಸೇವೆಗಳ ಅರ್ಹತೆಗೆ ಸಿಕ್ಕಿದೆ ಎಂದೇ ಭಾವಿಸಿದ್ದೇನೆ.
ರಾಷ್ಟ್ರಕೂಟರ ಉತ್ಸವ ಮಾಡಬೇಕೆಂಬ ನಿಮ್ಮ ಹಲವು ದಿನಗಳ ಹೋರಾಟ ಬಗ್ಗೆ ಅಭಿಪ್ರಾಯವೇನು?
ರಾಷ್ಟ್ರಕೂಟರ ಉತ್ಸವವನ್ನು ಸರ್ಕಾರ ಪ್ರತಿವರ್ಷ ಮಾಡಲೇಬೇಕು. ಇದು ನನ್ನ ಹಕ್ಕೊತ್ತಾಯವಿದೆ. ಹಂಪಿ ಉತ್ಸವದಂತೆ ರಾಷ್ಟ್ರಕೂಟರ ಉತ್ಸವ ನಡೆದರೆ ಸಾಹಿತಿ, ಕಲಾವಿದರಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುವುದರ ಜೊತೆಗೆ ಸಾಂಸ್ಕೃತಿಕ ವೇದಿಕೆಗಳು ನಿರ್ಮಾಣವಾಗುತ್ತವೆ.
ಗಡಿಭಾಗದಲ್ಲಿ ಕನ್ನಡದ ಮೇಲೆ ಅನ್ಯಭಾಷೆಯ ಪ್ರಭಾವ ಇದೆ ಎಂದೆನಿಸುತ್ತದೆಯಾ?
ಖಂಡಿತ. ಪ್ರಭಾವ ಎನ್ನುವುದಕ್ಕಿಂತ ಗಡಿಭಾಗದಲ್ಲಿ ಕನ್ನಡದ ಬಳಕೆ ಕಮ್ಮಿಯಿದೆ. ಹುಟ್ಟಿ ಬೆಳೆದ ಆಳಂದ ಮತ್ತು ಕಾರ್ಯಕ್ಷೇತ್ರದ ಸೇಡಂ ಗಡಿಭಾಗವೇ. ಗಡಿಭಾಗಗಳಲ್ಲಿ (ಆಳಂದ)ಮರಾಠಿ ಮತ್ತು (ಸೇಡಂ) ತೆಲುಗು ಹೆಚ್ಚಿನ ಬಳಕೆಯಲ್ಲಿದೆ. ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದರಿಂದ ಕಡಿಮೆಯಾಗುತ್ತಿದೆಯಾದರೂ ಪೂರ್ಣ ಕಮ್ಮಿಯಾಗಿಲ್ಲ.
ಯುವ ಜನತೆಗೆ ನಿಮ್ಮ ಸಂದೇಶವೇನು?
ಆಧುನಿಕ ದಿನಗಳಲ್ಲಿ ಯುವಕರು ತಂತ್ರಜ್ಞಾನದ ಹೊಸ ಗಾಳಿಗೆ ಮಾರು ಹೋಗಿದ್ದಾರೆ. ತಂತ್ರಜ್ಞಾನ ವಿರೋಧಿ ನಾನಲ್ಲ. ಆದರೆ, ಬಳಸುವ ತಂತ್ರಜ್ಞಾನದಲ್ಲಿ ಕನ್ನಡದ ಝೇಂಕಾರವಿರಲಿ. ಮಾಡುವ ರೀಲ್ಸ್, ಡೈಲಾಗ್ ಕನ್ನಡದ್ದೇ ಆಗಿರಲಿ. ಕನ್ನಡದ ಅನೇಕ ಮಾಹಿತಿಗಳನ್ನು ಕನ್ನಡದ ಆ್ಯಪ್ ಮೂಲಕ ಪಸರಿಸಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.