ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಶಿಕ್ಷಣ ನೀತಿ, ಗೋಹತ್ಯೆ ನಿಷೇಧದ ವಿರುದ್ಧ ಹೋರಾಡಲು ನಿರ್ಣಯ

ಅಖಿಲ ಭಾರತೀಯ ಮಿಲ್ಲಿ ಕೌನ್ಸಿಲ್‌ ಸಭೆಯಲ್ಲಿ ಮುಖಂಡರ ನಿರ್ಣಯ
Last Updated 4 ಜನವರಿ 2021, 11:35 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ವಿರುದ್ಧ ಕಾನೂನು ಜಾರಿಗೆ ತರುತ್ತಿದ್ದಾರೆ. ಕೇಂದ್ರದ ಹೊಸ ಶಿಕ್ಷಣ ನೀತಿ ಹಾಗೂ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಗಳು ಸರ್ಕಾರದ ಧೋರಣೆಗೆ ಸಾಕ್ಷಿ’ ಎಂದು ಅಖಿಲ ಭಾರತೀಯ ಮಿಲ್ಲಿ ಕೌನ್ಸಿಲ್‌ನ ಉತ್ತರ ಕರ್ನಾಟಕದ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಅಜಗರ್ ಚುಲಬುಲ್ ಕಿಡಿ ಕಾರಿದರು.‌

ಮಿಲ್ಲಿ ಕೌನ್ಸಿಲ್‌ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಣಿ ಸಭೆ
ಯಲ್ಲಿ ಅವರು ಮಾತನಾಡಿದರು.

‘ಹೊಸ ಶಿಕ್ಷಣ ನೀತಿಯಲ್ಲಿ ಮದರಸಾ, ಉರ್ದು ಭಾಷೆ, 12ನೇ ಶತಮಾನದ ಇತಿಹಾಸ ಮತ್ತು ಅಲಿಘಡದ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರ ಹತ್ತಿರ ನಿಯೋಗದೊಂದಿಗೆ ಭೇಟಿ ನೀಡಿ, ಸಮಸ್ಯೆಯ ಮನವರಿಕೆ ಮಾಡಲಾಗುವುದು’ ಎಂದರು.

‘ರಾಜ್ಯದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕೋಮುವಾದಿ ಶಕ್ತಿಗಳು ಪ್ರತಿ ದಿನ ಸಂಚು ರೂಪಿಸುತ್ತಿವೆ. ಲವ್ ಜಿಹಾದ್‌ ನಿಷೇಧದಂಥ ಅವೈಜ್ಞಾನಿಕ ಕಾಯ್ದೆಗಳನ್ನು ಜಾರಿಗೆ ತಂದು, ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ. ಇದರ ವಿರುದ್ಧ ಸಮುದಾಯದಲ್ಲಿ ಜಾಗೃತಿ ಮೂಡಿಸಿ, ಗಟ್ಟಿ ಹೋರಾಟ ಮಾಡುವ ಅಗತ್ಯವಿದೆ’ ಎಂದರು.

ಕೌನ್ಸಿಲ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅಬ್ದುಲ್ ಮುಫ್ತಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ.ಮಂಜುರ್ ಆಲಂ, ಸಹಾಯಕ ಪ್ರಧಾನ ಕಾರ್ಯದರ್ಶಿ ಮುಸ್ತಫರಿ ಫಾಯಿ, ಉಪಾಧ್ಯಕ್ಷ ಖಾಲಿದ ರಹಮಾನಿ, ಅನೀಸ್ ಖಾಜಿ, ಅಬ್ದುಲ್ ಅಲೀಮ್, ವಕೀಲ ಜಫರಯಾಬ್ ಜಿಲಾನಿ, ಸುಲೇಮಾನ್ ಖಾನ್ ಸೇರಿದಂತೆ ವಿವಿಧ ರಾಜ್ಯದ ಕೌನ್ಸಿಲ್ ಸದಸ್ಯರು ಹಾಗೂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಗೋ ಹತ್ಯೆ ನಿಷೇಧ ಮಾಡಿ: ‘ಗೋವು ಹತ್ಯೆ ನಿಷೇಧ ಕಾಯ್ದೆಯನ್ನು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ವಿರೋಧಿಸಬೇಕು‘ ಎಂದು ಮಹಮ್ಮದ್ ಅಜಗರ್ ಚುಲಬುಲ್ ಆಗ್ರಹಿಸಿದರು.

ನಗರದ ಖುರೇಷಿ ಬ್ರದರ್ಸ್ ತಂಡದ ವತಿಯಿಂದ ಈಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ವಿಧಾನ ಪರಿಷತ್‌ನಲ್ಲಿ ಕಾಯ್ದೆ ಜಾರುವಷ್ಟು ಬಹುಮತ ಇಲ್ಲ. ಆದರೆ, ಇತರೆ ರಾಜಕೀಯ ಪಕ್ಷದ ಪರಿಷತ್ ಸದಸ್ಯರನ್ನು ಖರೀದಿಸುವ ಸಂಚು ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಈಗಾಗಲೇ ರಾಜ್ಯದಲ್ಲಿ ಗೋವು ರಕ್ಷಣೆಗೆಗಾಗಿ 150ಕ್ಕೂ ಹೆಚ್ಚು ಗೋವುಶಾಲೆಗಳಿವೆ. 75 ಸರ್ಕಾರದ ಅನುದಾನ ಪಡೆಯುತ್ತಿವೆ. ಅಲ್ಪಸಂಖ್ಯಾತರ ಆಹಾರ ಕಿತ್ತುಕೊಳ್ಳುವ ಉದ್ದೇಶದಿಂದ ಕಾಯ್ದೆ ಮಾಡಲಾಗಿದೆ’ ಎಂದೂ ದೂರಿದರು.

ವಕೀಲ ಮಜಹರ್ ಹುಸೇನ್ ಮಾತನಾಡಿ, ಜಜೆಡಿಎಸ್ ಮುಖಂಡರಾದ ನಾಸೀರ್ ಹುಸೇನ್ ಉಸ್ತಾದ್‌, ಕಾಂಗ್ರೆಸ್ ಮುಖಂಡ ಬಾಬಾ ಖಾನ್, ಬಾಬಾ ನಜರ್ ಮೊಹಮ್ಮದ್ ಖಾನ್ ಹನೀಫ್ ಖುರೇಶಿ, ನಶೀರ್ ಖುರೇಶಿ, ರಶೀದ್ ಪಲ್ಲಂ, ಅಸ್ಲಂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT