ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ: ಮತದಾರ ಕರಡು ಪಟ್ಟಿಯಲ್ಲಿ ಹೆಸರುಗಳ ಪುನರಾವರ್ತನೆ!

ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 9 ಡಿಸೆಂಬರ್ 2023, 5:46 IST
Last Updated 9 ಡಿಸೆಂಬರ್ 2023, 5:46 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಪ್ರಕಟಗೊಂಡಿರುವ ಮತದಾರರ ಕರಡು ಪಟ್ಟಿಯಲ್ಲಿ ಹಲವು ಮತದಾರರ ಹೆಸರುಗಳು ಎರಡು–ಮೂರು ಬಾರಿ ಪುನರಾವರ್ತನೆಯಾಗಿವೆ!

ಈ ಕ್ಷೇತ್ರ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. 2023ರ ನವೆಂಬರ್ 1ಅನ್ನು ಅರ್ಹತಾ ದಿನಾಂಕವನ್ನಾಗಿಸಿ ಮತದಾರರ ಕರಡು ಪಟ್ಟಿಯನ್ನು ತಯಾರಿಸಲಾಗಿದೆ. 89,162 ಪುರುಷರು, 51,241 ಮಹಿಳೆಯರು ಹಾಗೂ ಇತರೆ 20 ಸೇರಿ ಒಟ್ಟು 1,40,423 ಮತದಾರರಿದ್ದಾರೆ.

ಕರಡು ಮತಪಟ್ಟಿಯನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ಮಾಡಿಲ್ಲ. ಇದರಿಂದ ಹೆಸರುಗಳ ಪುನರಾವರ್ತನೆ ಆಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದೆ. ಅಲ್ಲದೇ, ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈಶಾನ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 160 ಮತಗಟ್ಟೆಗಳಿವೆ. ಇದರಲ್ಲಿ ಕೆಲವು ಮತಗಟ್ಟೆಗಳ ಮತದಾರ ಪಟ್ಟಿಗಳನ್ನು ಪರಿಶೀಲಿಸಿದಾಗ ಹೆಸರುಗಳ ಪುನರಾವರ್ತನೆ ಕಂಡುಬಂದಿದೆ.

ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ನರೋಣಾ 8ನೇ ಮತಗಟ್ಟೆಯಲ್ಲಿ 81, 82, 83 ಕ್ರಮ ಸಂಖ್ಯೆಯ ಕಲ್ಯಾಣಿ ಹೆಸರು ಮೂರು ಬಾರಿ ಇದೆ. ಮನೆ ಸಂಖ್ಯೆ ಅಥವಾ ಎಪಿಕ್‌ ಸಂಖ್ಯೆ ಗಮನಿಸಿದ್ದರೆ ಪುನರಾವರ್ತನೆ ತಪ್ಪಿಸಬಹುದಿತ್ತು. ಚಿತ್ತಾಪುರ 13ನೇ ಮತಗಟ್ಟೆಯಲ್ಲಿ ಕ್ರ.ಸಂ 248, 249, 250ರ ಗುರುರಾಜ ಹೆಸರು ಕೂಡ ಮೂರು ಬಾರಿ ಪುನರಾವರ್ತನೆ ಆಗಿದೆ.

ಬೀದರ್‌ ಜಿಲ್ಲೆಯ ಔರಾದ್‌ (ಬಿ) 45ನೇ ಮತಗಟ್ಟೆಯಲ್ಲಿ ಕ್ರ.ಸಂ. 650, 651ರ ಶಿವಕಾಂತ ಮತ್ತು ಬೀದರ್‌ 64ನೇ ಮತಗಟ್ಟೆಯ ಕ್ರ.ಸಂ 1069, 1070ರ ಹನುಮಂತಪ್ಪ ಹೆಸರು ಎರಡು ಬಾರಿ ಇವೆ.

ಬಳ್ಳಾರಿಯ 73ನೇ ಮತಗಟ್ಟೆಯಲ್ಲಿ ಕ್ರ.ಸಂ 354, 355ರ ದೇವಿ ಎನ್‌., 369, 370ರ ದೊಡ್ಡ ಶಿವಪ್ಪ, 480, 484ರ ಗಣೇಶ, 602, 603ರ ಹನುಮಂತರೆಡ್ಡಿ ಹೆಸರು ಎರಡೆರಡು ಬಾರಿ ಪುನರಾವರ್ತನೆ ಆಗಿವೆ.

ರಾಯಚೂರು ಜಿಲ್ಲೆಯ ಮಸ್ಕಿ 107ನೇ ಮತಗಟ್ಟೆಯಲ್ಲಿ ಕ್ರ.ಸಂ 133, 134ರ ಭಾರತಿ, ಶಕ್ತಿನಗರದ 86ನೇ ಮತಗಟ್ಟೆಯಲ್ಲಿ 223, 224ರ ಶಶಿಧರ ಚೇಗುಂಟಿ ಹೆಸರು ಎರಡೆರಡು ಬಾರಿ ಇವೆ.

ಕೊಪ್ಪಳ ಜಿಲ್ಲೆಯ ಗಂಗಾವತಿಯ 120ನೇ ಮತಗಟ್ಟೆಯಲ್ಲಿ ಕ್ರ.ಸಂ 71, 72ರ ಅನಮೋಲ ಬಿ., ಯಾದಗಿರಿ 145ನೇ ಮತಗಟ್ಟೆಯಲ್ಲಿ 1239, 1240ರ ರಾಜಪ್ಪ, ವಿಜಯನಗರ ಜಿಲ್ಲೆ ಹೊಸಪೇಟೆ 154ನೇ ಮತಗಟ್ಟೆಯಲ್ಲಿ 548, 549ರ ಜಿ.ಸುಮಾ ಹೆಸರು ಎರಡೆರಡು ಬಾರಿ ಪುನರಾವರ್ತನೆ ಆಗಿವೆ.

ಪದವೀಧರ ಕ್ಷೇತ್ರದ ಪ್ರತಿ ಚುನಾವಣೆಯಲ್ಲಿ ಮತದಾರರ ನೋಂದಣಿ ಕಡ್ಡಾಯವಾಗಿದೆ. ಆದರೆ, ಅಧಿಕಾರಿಗಳು ಮತದಾರರ ಸಂಖ್ಯೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹಳೆಯ ಹೆಸರುಗಳನ್ನು ಹಾಗೆಯೇ ಉಳಿಸಿದ್ದಾರೆ. ಕೆಲ ಪಟ್ಟಿಗಳಲ್ಲಿ ಶೇ 70ರಷ್ಟು ಚುನಾವಣಾ ಗುರುತಿನ ಚೀಟಿ ಸಂಖ್ಯೆ ನಮೂದಿಸಿಲ್ಲ. ಇದರಲ್ಲಿ ಹೆಚ್ಚಿನ ಪುನರಾವರ್ತನೆ ಇರಬಹುದು. ಪರಿಶೀಲಿಸಿ ನಿಖರ ಮತಪಟ್ಟಿ ಸಿದ್ಧಪಡಿಸಬೇಕು ಎಂದು ಪದವೀಧರರು ಆಗ್ರಹಿಸಿದ್ದಾರೆ.

2018ರಲ್ಲಿ ಜರುಗಿದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 82,054 ಪದವೀಧರರು ಅಂತಿಮ ಮತದಾರರ ಪಟ್ಟಿಯಲ್ಲಿದ್ದರು. ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಡಾ.ಚಂದ್ರಶೇಖರ ಬಿ.ಪಾಟೀಲ ಅವರ ಅವಧಿ ಜೂನ್ 21ಕ್ಕೆ ಮುಕ್ತಾಯವಾಗಲಿದೆ.

ಕಲಬುರಗಿ ಜಿಲ್ಲೆ ಚಿತ್ತಾಪುರ 13ನೇ ಮತಗಟ್ಟೆ ಮತದಾರ ಪಟ್ಟಿಯಲ್ಲಿ ಗುರುರಾಜ ಹೆಸರು ಮೂರು ಬಾರಿ ಪುನರಾವರ್ತನೆ ಆಗಿರುವುದು
ಕಲಬುರಗಿ ಜಿಲ್ಲೆ ಚಿತ್ತಾಪುರ 13ನೇ ಮತಗಟ್ಟೆ ಮತದಾರ ಪಟ್ಟಿಯಲ್ಲಿ ಗುರುರಾಜ ಹೆಸರು ಮೂರು ಬಾರಿ ಪುನರಾವರ್ತನೆ ಆಗಿರುವುದು
ಡಿ.9ರವರೆಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ 9ರವರೆಗೆ ಸಲ್ಲಿಸಬಹುದು. ಡಿಸೆಂಬರ್ 30ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಮತದಾರರ ಕರಡು ಪಟ್ಟಿಯನ್ನು ceo.karnataka.gov.in ವೆಬ್‌ಸೈಟ್‌ನಲ್ಲಿ ನೋಡಬಹುದು. ಅರ್ಹ ಪದವೀಧರರು ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಡಿಸೆಂಬರ್ 12ರೊಳಗೆ ನಮೂನೆ 18ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಸರು ನೋಂದಣಿ ಮಾಡಿಕೊಳ್ಳುವ ಅಧಿಕಾರವನ್ನು ಗ್ರೇಡ್–2 ತಹಶೀಲ್ದಾರ್‌ಗಳಿಗೆ ವಹಿಸಲಾಗಿದೆ.
ಎಪಿಕ್‌ ಸಂಖ್ಯೆಯಿಂದ ಪತ್ತೆ ಸುಲಭ
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಸಂದರ್ಭದಲ್ಲಿ ಪದವಿ ಅಂಕಪಟ್ಟಿಗಳ ಜೊತೆಗೆ ಚುನಾವಣಾ ಗುರುತಿನ ಚೀಟಿ ಒದಗಿಸಲಾಗಿದೆ. ಮತದಾರರ ಹೆಸರು ತಂದೆಯ ಹೆಸರು ವಯಸ್ಸು ವಿದ್ಯಾರ್ಹತೆ ಮತ್ತು ಉದ್ಯೋಗ ಒಂದೇ ರೀತಿಯಾಗಿದ್ದರೂ ಮನೆಯ ಸಂಖ್ಯೆ ಬೇರೆ ಆಗಿರುತ್ತದೆ. ಚುನಾವಣಾ ಗುರುತಿನ ಚೀಟಿ(ಎಪಿಕ್‌) ಸಂಖ್ಯೆಯಿಂದ ಇನ್ನೂ ಸುಲಭವಾಗಿ ಮತದಾರರ ಹೆಸರು ಪುನರಾವರ್ತನೆಯನ್ನು ತಡೆಯಬಹುದು. ‘ಮತದಾರರ ಹೆಸರು ಪುನರಾವರ್ತನೆಯಿಂದ ಮತದಾನ ಸಮಯದಲ್ಲಿ ನಕಲು ಮತದಾನ ಆಗುವ ಸಾಧ್ಯತೆ ಇರುತ್ತದೆ. ತಾವೇ ನಿಜವಾದ ಮತದಾರರು ಎಂದು ಅದೇ ಹೆಸರಿನ ಅನರ್ಹರು ಮತಗಟ್ಟೆಗೆ ಬಂದು ಮತ ಹಾಕಲು ನಿಲ್ಲುತ್ತಾರೆ. ಅಲ್ಲದೇ ಮತಪಟ್ಟಿಯಲ್ಲಿ ಕ್ರಮ ಸಂಖ್ಯೆ ಬೇರೆ ಬೇರೆ ಆಗಿರುವುದರಿಂದ ನಕಲು ಮತದಾರರನ್ನು ಆ ಕ್ಷಣದಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ’ ಎಂದು ಅಹಿಂದ ಚಿಂತಕರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಬಣ್ಣಾ ಜಮಾದಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT