ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯ ನಾಲ್ಕು ಕಡೆ ನೂತನ ಬಸ್ ನಿಲ್ದಾಣ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ
Last Updated 26 ಮಾರ್ಚ್ 2023, 16:22 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ವಾಹನಗಳ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ನಗರದ ನಾಲ್ಕು ಕಡೆಗಳಲ್ಲಿ ನೂತನ ಬಸ್ ನಿಲ್ದಾಣ ಹಾಗೂ ಡಿಪೊಗಳನ್ನು ನಿರ್ಮಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ಪ್ರಕಟಿಸಿದರು.

ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೇಡಂ ರಸ್ತೆಯ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನಾಲ್ಕು ಎಕರೆ ಜಾಗ ಕೇಳಲಾಗಿದೆ. ಆಳಂದ ರಸ್ತೆಯ ಕೃಷಿ ಕಾಲೇಜಿಗೆ ಸೇರಿದ ನಾಲ್ಕು ಎಕರೆ ಕೇಳಲಾಗಿದ್ದು, ಅಲ್ಲಿಯೂ ಬಸ್ ನಿಲ್ದಾಣ ಹಾಗೂ ಡಿಪೊ ನಿರ್ಮಿಸಲಾಗುವುದು. ರಾಮಮಂದಿರ ರಸ್ತೆಯಲ್ಲಿಯೂ ಬಸ್ ನಿಲ್ದಾಣಕ್ಕೆ ಜಾಗ ಗುರುತಿಸಲಾಗಿದೆ. ಮತ್ತೊಂದು ಕಡೆ ಬಸ್ ನಿಲ್ದಾಣಕ್ಕೆ ಜಾಗದ ಹುಡುಕಾಟ ನಡೆದಿದೆ’ ಎಂದರು.

‘ವಿವಿಧ ಗ್ರಾಮಗಳಿಂದ ಬರುವ ಜನರು ನಗರದ ಒಳಗೆ ಬರಲು ಸಿಟಿ ಬಸ್‌ಗಳಲ್ಲಿ ಹತ್ತಿದರೆ ಗ್ರಾಮದಿಂದ ಬರುವಾಗ ಪಡೆದ ಟಿಕೆಟ್ ಮಾನ್ಯ ಮಾಡಲಾಗುವುದು. ಬೇರೆ ಟಿಕೆಟ್ ತೆಗೆಸುವ ಅಗತ್ಯವಿಲ್ಲ’ ಎಂದು ಹೇಳಿದರು.

'ನೌಕರರು ನಿಧನರಾದ ಸಂದರ್ಭದಲ್ಲಿ ಆಂತರಿಕ ಗುಂಪು ವಿಮೆ ಯೋಜನೆಯಡಿ ನೀಡಲಾಗುತ್ತಿದ್ದ ₹ 3 ಲಕ್ಷ ಪರಿಹಾರವನ್ನು ₹ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಪಘಾತವಾಗಿ ಮರಣ ಸಂಭವಿಸಿದಲ್ಲಿ ನೌಕರರ ಅವಲಂಬಿತರಿಗೆ ₹ 50 ಲಕ್ಷ ವಿಮೆ ಪರಿಹಾರ ದೊರಕಿಸುವ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ನೌಕರರಲ್ಲಿ ಸಂಸ್ಥೆಯ ಬಗ್ಗೆ ಅಭಿಮಾನ ಮೂಡಿದ್ದು, ಮುಂದಿನ ದಿನದಲ್ಲಿ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿದೆ’ ಎಂದರು.

ಸಿಬ್ಬಂದಿ ನೇಮಕಾತಿ: 1850 ಸಿಬ್ಬಂದಿಯ ನೇಮಕ ಪ್ರಕ್ರಿಯೆ ನಡೆದಿದ್ದು, ಜೂನ್‌ ವೇಳೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು. ಹೆಚ್ಚು ಸಿಬ್ಬಂದಿ ಬಂದರೆ ಬಸ್ ಸಂಚಾರ ಹೆಚ್ಚಿಸಲು ಸಾಧ್ಯವಾಗಲಿದೆ. ನೇಮಕಾತಿಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಎಲ್ಲ ಪ್ರಕ್ರಿಯೆಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾರಿಗೆ ಸಂಸ್ಥೆಯ ಆಸ್ತಿ ನಗದೀಕರಣ: ಸಂಸ್ಥೆಯ ಮಾಲೀಕತ್ವದಲ್ಲಿರುವ ಆಸ್ತಿಗಳನ್ನು ನಗದೀಕರಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಸಂಸ್ಥೆಯ ವ್ಯಾಪ್ತಿಯಲ್ಲಿನ 20 ಖಾಲಿ ನಿವೇಶನಗಳಲ್ಲಿ ಪೆಟ್ರೋಲ್–ಡೀಸೆಲ್ ಪಂಪ್ ಅಳವಡಿಸಲು ಇ ಟೆಂಡರ್ ಆಹ್ವಾನಿಸಲಾಗಿದೆ. ಇವುಗಳ ಪೈಕಿ 11 ಖಾಲಿ ಇರುವ ನಿವೇಶನಗಳನ್ನು ಒಪ್ಪಂದದ ಮೇಲೆ ಎಚ್‌ಪಿಸಿಎಲ್‌ನವರಿಗೆ ನೀಡಿದ್ದು, ಇದರಿಂದ ವಾರ್ಷಿಕವಾಗಿ ₹ 2 ಕೋಟಿ ವರಮಾನ ಬರಲಿದೆ. ಸಂಸ್ಥೆಯ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆ, ಹೋಟೆಲ್‌ ನಿರ್ಮಿಸಲು ಅವಕಾಶ ನೀಡಲಾಗುವುದು. 30 ವರ್ಷಗಳ ಒಪ್ಪಂದದ ಬಳಿಕ ಆ ಆಸ್ತಿಗಳನ್ನು ಸಂಸ್ಥೆಗೆ ಮರಳಿಸುವ ಕರಾರು ಹಾಕಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಇದ್ದರು.

₹ 1 ಸಾವಿರ ಕೋಟಿ ವೆಚ್ಚದ ಕಾಮಗಾರಿಗೆ ನಾಳೆ ಚಾಲನೆ

ಕುಡಿಯುವ ನೀರು, ನೀರಾವರಿ, ಕೆರೆ ತುಂಬಿಸುವ ಯೋಜನೆ, ಶಾಲಾ ಕೊಠಡಿಗಳು, ನೂತನ ಬಸ್‌ಗಳ ಲೋಕಾರ್ಪಣೆ ಸೇರಿದಂತೆ ₹ 1 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಇದೇ 28ರಂದು ಸೇಡಂನಲ್ಲಿ ಚಾಲನೆ ನೀಡಲಾಗುವುದು ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

‘₹ 160 ಕೋಟಿ ವೆಚ್ಚದ ಮೊದಲನೇ ಹಂತದ ಕಾಗಿಣಾ ಏತ ನೀರಾವರಿ ಯೋಜನೆ, ₹ 6 ಕೋಟಿ ವೆಚ್ಚದ ಸೇಡಂ ನೂತನ ಬಸ್ ನಿಲ್ದಾಣ, ಸನ್ನತಿ ಬ್ಯಾರೇಜಿನಿಂದ 54 ಕೆರೆಗಳನ್ನು ತುಂಬಿಸುವ ₹ 592 ಕೋಟಿ ಮೊತ್ತದ ಡಿಪಿಆರ್ ಸರ್ಕಾರಕ್ಕೆ ಸಲ್ಲಿಸಲಾಗಿದೆ. ₹ 25 ಕೋಟಿ ವೆಚ್ಚದಲ್ಲಿ ಸೇಡಂ ತಾಲ್ಲೂಕಿನ ಪ್ರಾಚೀನ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸಲಾಗುತ್ತಿದೆ’ ಎಂದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಾರಿಗೆ ಸಚಿವ ಬಿ. ಶ್ರೀರಾಮುಲು ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಆರು ವೋಲ್ವೊ ಸೇರಿ 802 ಬಸ್ ಖರೀದಿ

₹ 330 ಕೋಟಿ ವೆಚ್ಚದಲ್ಲಿ ಆರು ವೋಲ್ವೊ ಮಲ್ಟಿ ಆಕ್ಸೆಲ್ ಬಸ್, ನಾಲ್ಕು ಎಸಿ ಸ್ಲೀಪರ್, 30 ನಾನ್ ಎಸಿ ರಹಿತ ಬಸ್ ಸೇರಿದಂತೆ 802 ನೂತನ ಬಸ್‌ಗಳನ್ನು ಖರೀದಿಸಲಾಗುತ್ತಿದೆ. ಸಾಂಕೇತಿಕವಾಗಿ ಮಾ 28ಕ್ಕೆ 20 ಬಸ್‍ಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.

ಬ್ಯಾಂಕ್ ಸಾಲ ಹಾಗೂ ಕೆಕೆಆರ್‌ಡಿಬಿ ನೀಡಿದ ₹ 40 ಕೋಟಿ ವಿಶೇಷ ಅನುದಾನದಲ್ಲಿ ಈ ಬಸ್‌ಗಳನ್ನು ಖರೀದಿಸಲಾಗುವುದು. ಇದರಿಂದ ಒಟ್ಟಾರೆ ಬಸ್‌ಗಳ ಪ್ರಮಾಣ ಆರು ಸಾವಿರಕ್ಕೆ ಏರಲಿದೆ. ಅಶೋಕ್ ಲೇಲ್ಯಾಂಡ್‌ ಕಂಪನಿಯ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದ್ದು, ಬಸ್ ಕವಚವನ್ನೂ ಕಂಪನಿಯೇ ಅಳವಡಿಸಿಕೊಡಲಿದೆ. ಮುಂಚೆ ಚಾಸಿ ಖರೀದಿಸಿ ಬೇರೆ ಕಡೆ ಕವಚ ನಿರ್ಮಿಸಿಕೊಳ್ಳುತ್ತಿದ್ದೆವು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೌಕರ್ಯ ಕಡಿಮೆ ಇದೆ ಎಂಬುದು ನಿಜ. ಆದರೆ, ಕಾಂಗ್ರೆಸ್‌ನವರು ರಾಜಕೀಯ ಕಾರಣಗಳಿಗಾಗಿ ಸೇಡಂನಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಪ್ರತಿಭಟನೆ ಮಾಡಿದರು. ಹಾಗೆಂದು ಬೇರೆ ತಾಲ್ಲೂಕಿನ ಬಸ್‌ಗಳನ್ನು ಸೇಡಂಗೆ ಓಡಿಸಲಾಗುವುದಿಲ್ಲ
ರಾಜಕುಮಾರ ಪಾಟೀಲ ತೇಲ್ಕೂರ
ಕೆಕೆಆರ್‌ಟಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT