ಸೋಮವಾರ, ಜೂನ್ 21, 2021
20 °C

ಕೋವಿಡ್‌ ನಿರ್ವಹಣೆಯೇ ಮೊದಲ ಸವಾಲು: ನೂತನ ಕಮಿಷನರ್‌ ಡಾ.ವೈ.ಎಸ್. ರವಿಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ದೈನಂದಿನ ಭದ್ರತೆಯ ಜೊತೆಗೆ ಕೊರೊನಾ ಲಾಕ್‌ಡೌನ್‌ ನಿರ್ವಹಣೆಯೇ ಮೊದಲ ಸವಾಲಾಗಿದೆ. ಇದನ್ನು ಜನರ ಸಹಕಾರದಿಂದ ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದು ನೂತನ ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಗತ್ಯ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೊರೊನಾ ಲಾಕ್‌ಡೌನ್‌ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ. ಅಲ್ಲಿಯವರೆಗೂ ಜನರು ಇಲಾಖೆಗೆ ಸಹಕಾರ ನೀಡಬೇಕು. ನಾನೂ ಜಿಲ್ಲಾಡಳಿತದ ಭಾಗವಾಗಿದ್ದೇನೆ. ವೈದ್ಯಕೀಯ ಶಿಕ್ಷಣವನ್ನೂ ಮುಗಿಸಿದ್ದರಿಂದ ಅಗತ್ಯಬಿದ್ದರೆ ಸಲಹೆಯನ್ನೂ ನೀಡುತ್ತೇನೆ. ಮುಂಚೆಯೇ ಬೀದರ್‌ ಜಿಲ್ಲೆಯ ಹೆಚ್ಚುವರಿ ಎಸ್ಪಿಯಾಗಿ ಕೆಲಸ ಮಾಡಿದ್ದರಿಂದ ಈ ಭಾಗ ನನಗೆ ಹೊಸದೇನೂ ಅಲ್ಲ. ಮೂರು ವರ್ಷಗಳ ಹಿಂದೆಯಷ್ಟೇ ಕಮಿಷನರೇಟ್ ಆರಂಭವಾಗಿದ್ದರಿಂದ ಹೆಚ್ಚಾಗಿ ಐಜಿಪಿಗಳೇ ಇಲ್ಲಿ ಕಮಿಷನರೇಟ್‌ಗಳಾಗಿ ಕೆಲಸ ನಿರ್ವಹಿಸಿದ್ದಾರೆ. ಆರಂಭದಲ್ಲಿ ಸಿಬ್ಬಂದಿ ಕೊರತೆ ಇರುವುದು ಸಹಜ’ ಎಂದರು.

ಸಿಬ್ಬಂದಿ ನೇಮಕ: ‘ಕಮಿಷನರ್ ಹುದ್ದೆ ವಹಿಸಿಕೊಳ್ಳುವುದಕ್ಕಿಂತ ಮುಂಚೆ ನಾನು ನೇಮಕಾತಿ ವಿಭಾಗದಲ್ಲಿದ್ದೆ. ರಾಜ್ಯ ಸರ್ಕಾರ ಇತ್ತೀಚೆಗೆ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನೇಮಕಾತಿ ಮಾಡಿದೆ. ಅವರಲ್ಲಿ ಕೆಲವರನ್ನು ಕಲಬುರ್ಗಿಗೆ ನಿಯೋಜನೆ ಮಾಡಲಾಗುತ್ತದೆ. ಹಂತ ಹಂತವಾಗಿ ಖಾಲಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು’ ರವಿಕುಮಾರ್‌ ತಿಳಿಸಿದರು.

‘ಜನ ನೇರವಾಗಿ ಭೇಟಿಯಾಗಬಹುದು’

‘ಏನಾದರೂ ಸಮಸ್ಯೆಗಳಿದ್ದಲ್ಲಿ ಜನರು ನನ್ನನ್ನು ನೇರವಾಗಿ ಭೇಟಿ ಮಾಡಬಹುದು, ಫೋನ್ ಕರೆ ಮಾಡಿ ಮಾಹಿತಿ ನೀಡಬಹುದು. ಜನರಿಗೆ ಸದಾಕಾಲ ಲಭ್ಯ ಇರುತ್ತೇನೆ. ಎಲ್ಲರೂ ಒಟ್ಟಾಗಿ ಕಲಬುರ್ಗಿಯ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸೋಣ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಜನರೂ ಸಾಧ್ಯವಾದ ಎಲ್ಲಾ ಸಹಕಾರವನ್ನು ನೀಡಬೇಕು’ ಎಂದು ಡಾ.ವೈ.ಎಸ್. ರವಿಕುಮಾರ್ ಮನವಿ ಮಾಡಿದರು.

ಮೂಲತಃ ಶಿವಮೊಗ್ಗ ಜಿಲ್ಲೆ ಭದ್ರಾವತಿಯವರಾದ ರವಿಕುಮಾರ್ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ, ಉಡುಪಿಯ ಪೂರ್ಣಪ್ರಜ್ಞ ಸಂಸ್ಥೆಯಲ್ಲಿ ಕಾಲೇಜು ಶಿಕ್ಷಣ ಪೂರೈಸಿದರು. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ ಪೂರೈಸಿದರು. 2007ರಲ್ಲಿ ಐಪಿಎಸ್ ಸೇವೆಗೆ ಆಯ್ಕೆಯಾದರು.

ವಿಜಯಪುರ, ಬೀದರ್‌ ಜಿಲ್ಲೆಗಳ ಹೆಚ್ಚುವರಿ ಎಸ್ಪಿಯಾಗಿ, ಉಡುಪಿ, ಧಾರವಾಡ ಜಿಲ್ಲೆಗಳ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.