ಬುಧವಾರ, ನವೆಂಬರ್ 13, 2019
22 °C

ಮುಲ್ಲಾಮಾರಿ ಸಂತ್ರಸ್ತರ ನೀಗದ ಬವಣೆ | ಕಳಪೆ ಕಾಮಗಾರಿ; ₹19 ಕೋಟಿ ಪೋಲು

Published:
Updated:
Prajavani

ಚಿಂಚೋಳಿ: ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯದಲ್ಲಿ ಮುಳುಗಡೆಯಾದ ಗ್ರಾಮಗಳ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ₹19 ಕೋಟಿ ಮೊತ್ತದಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಹಾಳಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಜಲಾಶಯದಲ್ಲಿ ಮುಳುಗಡೆಯಾದ 4 ಗ್ರಾಮಗಳನ್ನು ಯಲ್ಮಾಮಡಿ (2), ಗಡಿಲಿಂಗದಳ್ಳಿ (3), ಮತ್ತು ಚನ್ನೂರು (1) ಮತ್ತು ನಾಗರಾಳ (1)– ಹೀಗೆ 7 ಪುನರ್ವಸತಿ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ.

ನಾಗರಾಳ ಪುನರ್ವಸತಿ ಕೇಂದ್ರದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಉಳಿದ 6 ಕೇಂದ್ರಗಳ ಜನರು ದಶಕಗಳಿಂದ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದರು.

ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಾ.ಶರಣಪ್ರಕಾಶ ಪಾಟೀಲ, ಶಾಸಕರಾಗಿದ್ದ ಡಾ.ಉಮೇಶ ಜಾಧವ ಮತ್ತು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಪುನರ್ವಸತಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಆಲಿಸಿದ್ದರು.

ಮುಖ್ಯ ರಸ್ತೆಯಿಂದ ಪುನರ್ವಸತಿ ಕೇಂದ್ರಗಳಿಗೆ ತೆರಳಲು ಕೂಡು ರಸ್ತೆಗಳು, ಒಳ ರಸ್ತೆಗಳು, ಒಳಚರಂಡಿ, ವಿದ್ಯುತ್‌ ಮಾರ್ಗ ಹಾಗೂ ಕುಡಿವ ನೀರು, ಹಳೆಯ ಕಟ್ಟಡಗಳ ನವೀಕರಣ ಮತ್ತು ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿಗಳಿಗಾಗಿ ₹19 ಕೋಟಿ ಮಂಜೂರು ಮಾಡಿಸಿದ್ದರು.

ಅನುದಾನ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಆರಂಭವಾಗುವ ವೇಳೆಗೆ ಶಾಸಕರಾಗಿದ್ದ ಡಾ.ಉಮೇಶ ಜಾಧವ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರ್ಪಡೆಯಾದರು. ಇದರಿಂದ ಕಾಮಗಾರಿಗಳ ಅನುಷ್ಠಾನದ ಹೊಣೆ ಹೊತ್ತ ಎಂಜಿನಿಯರ್‌ಗಳಿಗೆ ಲಗಾಮು ಇಲ್ಲದಂತಾಯಿತು.

‘ನಮ್ಮ ಊರಿನಲ್ಲಿ ಡಾಂಬರ್‌ ರಸ್ತೆ ಹಾಗೂ ಚರಂಡಿಗಳ ಕಾಮಗಾರಿ ತೃಪ್ತಿಕರವಾಗಿಲ್ಲ. ಅಲ್ಲಲ್ಲಿ ಹಾಳಾಗಿವೆ. ಕುಡಿಯುವ ನೀರಿನ ಕಾಮಗಾರಿಗೆ ಶಕ್ತಿ ಗೋಲ್ಡ್‌ ಕೊಳವೆಗಳನ್ನು ಹಾಕುತ್ತಿದ್ದರು. ಇದಕ್ಕೆ ವಿರೋಧಿಸಿ ಕಾಮಗಾರಿ ತಡೆದಿದ್ದೇವೆ. ಫಿನೋಲೆಕ್ಸ್‌ ಕೊಳವೆ ಹಾಕುವವರೆಗೆ ಕಾಮಗಾರಿ ನಡೆಸಲು ಬಿಡುವುದಿಲ್ಲ’ ಎಂದು ಯಲ್ಮಾಮಡಿ ಪುನರ್ವಸತಿ ಕೇಂದ್ರ–2 ಮುಖಂಡ ಲಿಂಗಾನಂದ ತಿಳಿಸಿದರು.

‘ಕೇಳುವವರು ಹೇಳುವವರು ಇಲ್ಲದ ವೇಳೆಯಲ್ಲಿ ನಡೆಸಿದ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡದಿರುವುದು 2 ತಿಂಗಳಲ್ಲೇ ಹಾಳಾಗಲು ಕಾರಣ’ ಎಂದು ಗಡಿಲಿಂಗದಳ್ಳಿಯ ಮುಖಂಡ ಸಂಗಪ್ಪ ದಂಡಿನ ಆರೋಪಿಸಿದ್ದಾರೆ.

‘ನಮ್ಮ ಊರಿನಲ್ಲಿ ಚರಂಡಿ ನಿರ್ಮಿಸದೆ ಡಾಂಬರ್‌ ರಸ್ತೆ ನಿರ್ಮಿಸಲು ಗುತ್ತಿಗೆದಾರರು ಮುಂದಾದಾಗ ಪ್ರತಿಭಟಿಸಿ ಕಾಮಗಾರಿ ತಡೆದಿದ್ದೇವೆ. ಈಗ ಚರಂಡಿ ನಿರ್ಮಿಸಿದ್ದಾರೆ. ಇನ್ನೂ ರಸ್ತೆ ನಿರ್ಮಿಸಬೇಕಿದೆ’ ಎನ್ನುತ್ತಾರೆ ಗ್ರಾ.ಪಂ ಸದಸ್ಯ ಚನ್ನೂರಿನ ಭೀಮಾಶಂಕರ ಹತ್ತಿ.

‘ಡಾಂಬರ್‌ ರಸ್ತೆ ಹಾಳಾಗಲು ಭಾರಿ ವಾಹನಗಳು ಸಂಚರಿಸಿರುವುದು ಮತ್ತು ಅಲ್ಲಲ್ಲಿ ಕುಡಿವ ನೀರಿನ ಕೊಳವೆ ಕಾಮಗಾರಿ ಕೈಗೊಳ್ಳುತ್ತಿರುವುದು ಕಾರಣ. ಕಾಮಗಾರಿಯನ್ನು ಗುಣಮಟ್ಟದಿಂದ ನಡೆಸಲಾಗಿದೆ. ಈಗಾಗಲೇ ಜಂಟಿ ತನಿಖೆ ನಡೆಸಲಾಗಿದೆ’ ಎಂದು ಸಹಾಯಕ ಎಂಜಿನಿಯರ್‌ ಹಣಮಂತ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)