ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ: ಡಾ. ಅವಿನಾಶ ಜಾಧವ

Last Updated 24 ಮೇ 2019, 15:28 IST
ಅಕ್ಷರ ಗಾತ್ರ

ಕಲಬುರ್ಗಿ: ‘ನನ್ನದು ‘ಅಭಿವೃದ್ಧಿ’ಗಾಗಿ ರಾಜಕೀಯವೇ ಹೊರತು,‘ಅಧಿಕಾರ’ಕ್ಕಾಗಿ ಅಲ್ಲ. ಹೀಗಾಗಿ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಚಿಂಚೋಳಿಯನ್ನು ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಏಕೈಕ ಗುರಿ..’

–ಇವು ಚಿಂಚೋಳಿ ಉಪ ಚುನಾವಣೆಯಲ್ಲಿ ವಿಜೇತರಾಗಿರುವ ಡಾ. ಅವಿನಾಶ ಜಾಧವ ಅವರ ಮಾತುಗಳು.

ಶಾಸಕರಾಗಿ ಆಯ್ಕೆಯಾಗಿರುವ ಇವರು ತಮ್ಮ ಮುಂದಿರುವ ಸವಾಲುಗಳು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹಾಕಿಕೊಂಡಿರುವ ಯೋಜನೆಗಳು, ತಂದೆ ಡಾ.ಉಮೇಶ ಜಾಧವ ಅವರ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿ ಹಲವು ವಿಷಯಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

*ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದವರು ದಿಢೀರ್‌ ಶಾಸಕರಾಗಿ ಆಯ್ಕೆಯಾಗಿದ್ದೀರಿ, ಗೆಲುವಿನ ನಿರೀಕ್ಷೆ ಇತ್ತೇ?

–ಖಂಡಿತ ಇತ್ತು. ಸೇವೆ ಮಾಡಬೇಕು ಎಂಬುದು ನನ್ನ ಧ್ಯೇಯ. ಅದಕ್ಕಾಗಿ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ರಾಜಕೀಯಕ್ಕೆ ಬಂದರೆ ಕೈಯಲ್ಲಿ ಅಧಿಕಾರವಿರುತ್ತದೆ. ಕ್ಷೇತ್ರದ ಜನರ ಬವಣೆಗಳಿಗೆ ತಕ್ಷಣ ಪರಿಹಾರ ಕಂಡುಕೊಳ್ಳಬಹುದು ಮತ್ತು ಹೆಚ್ಚಿನ ಅಭಿವೃದ್ಧಿ ಮಾಡಲು ಸಾಧ್ಯ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದಿದ್ದೇನೆ. ಚಿಂಚೋಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.

*ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿಯುತ್ತೀರೋ, ರಾಜಕೀಯದಲ್ಲೋ?

–ಎರಡೂ ಕ್ಷೇತ್ರಗಳಲ್ಲಿ ಸೇವೆ ಮಾಡಲು ಅವಕಾಶವಿದೆ. ಈಗ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾಲ್ಕು ವರ್ಷ ನನಗೆ ಅಧಿಕಾರವಿದೆ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಇತ್ತ ಎಂ.ಡಿ ಪರೀಕ್ಷೆಯನ್ನೂ ಬರೆಯುತ್ತೇನೆ. ಮುಂದಿನ ನಿರ್ಧಾರವನ್ನು ಈಗಲೇ ಹೇಳಲಾರೆ.

*ಚಿಂಚೋಳಿ ಅಭಿವೃದ್ಧಿಗೆ ಏನೆಲ್ಲ ಯೋಜನೆಗಳನ್ನು ಹಾಕಿಕೊಂಡಿದ್ದೀರಿ?

ಸಕ್ಕರೆ ಕಾರ್ಖಾನೆ ಆರಂಭಿಸುವ ಬಗ್ಗೆ ಚುನಾವಣೆಯಲ್ಲೇ ನಾವು ಹೇಳಿದ್ದೆವು. ಅದರಂತೆ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲಾಗುವುದು. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೇ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿವೆ. ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಮುಲ್ಲಾಮಾರಿಯಿಂದ ಹಳ್ಳಿ–ತಾಂಡಾಗಳ ಮನೆ ಮನೆಗೆ ನೀರು ಪೂರೈಕೆ ಮಾಡುವುದು, ಸೂರಿಲ್ಲದವರಿಗೆ ಸೂರು ಒದಗಿಸುವುದು ನನ್ನ ತಕ್ಷಣದ ಆದ್ಯತೆಗಳಾಗಿವೆ. ಕುಂಚಾವರಂ ಅರಣ್ಯ ಪ್ರದೇಶದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅರಣ್ಯ ಕಾಲೇಜು ಆರಂಭಿಸುವ ಬಗ್ಗೆ ಚಿಂತನೆ ಇದೆ. ವಸತಿ ಶಾಲೆ, ಐಟಿಐ, ಡಿಪ್ಲೊಮಾ ಕಾಲೇಜುಗಳನ್ನು ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

*ಕ್ಷೇತ್ರದ ಜನರು ಅಹವಾಲುಗಳನ್ನು ಹೇಳಿಕೊಳ್ಳಲು ಕಲಬುರ್ಗಿಗೆ ಬರಬೇಕೇ?

–ಇಲ್ಲ. ಚಂದಾಪುರದಲ್ಲಿ ನಮ್ಮ ಮನೆ ಇದೆ. ಅದೇ ರೀತಿ ಬೆಡಸೂರ ಗ್ರಾಮದಲ್ಲೂ ಮನೆ ಇದೆ. ಕ್ಷೇತ್ರದ ಜನರು ಯಾವುದೇ ಸಂದರ್ಭದಲ್ಲಿ ಅಲ್ಲಿ ನನ್ನನ್ನು ಭೇಟಿಯಾಗಬಹುದು. ನಾನು ಚಿಂಚೋಳಿ ಕ್ಷೇತ್ರದ ಜನರ ಸೇವಕನಾಗಿ ಕೆಲಸ ಮಾಡುತ್ತೇನೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸ್ಪಂದಿಸಿ, ಅವರ ಕೆಲಸಗಳನ್ನು ಮಾಡಿಕೊಡುತ್ತೇನೆ.

*ಚುನಾವಣೆ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತೀರಾ?

–ಖಂಡಿತ ಈಡೇರಿಸುತ್ತೇನೆ. ಚಿಂಚೋಳಿಯಲ್ಲಿ ಗೆದ್ದ ಶಾಸಕರ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ ಎಂಬ ಪ್ರತೀತಿ ಹಿಂದಿನಿಂದಲೂ ಇದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕೇಂದ್ರದಲ್ಲೂ ನಮ್ಮದೇ ಪಕ್ಷದ ಸರ್ಕಾರವಿರುತ್ತದೆ. ಎರಡೂ ಕಡೆಯಿಂದ ಅಗತ್ಯ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಮತದಾರರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT