ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈ–ಕ ಭಾಗಕ್ಕೆ ನಿರಾಸೆ: 6 ಜಿಲ್ಲೆಗಳ ಪೈಕಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ

Last Updated 20 ಆಗಸ್ಟ್ 2019, 11:09 IST
ಅಕ್ಷರ ಗಾತ್ರ

ಕಲಬುರ್ಗಿ: ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿ ಹೊತ್ತಿರುವ ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಿಗೆ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಕೇವಲ ಒಬ್ಬರಿಗೆ ಮಾತ್ರ ಸ್ಥಾನ ಸಿಕ್ಕಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಬಿಜೆಪಿ ಹೈಕಮಾಂಡ್‌ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬೀದರ್‌ ಜಿಲ್ಲೆಯ ಔರಾದ್‌ ಶಾಸಕ, ಬಂಜಾರ ಸಮುದಾಯದ ಪ್ರಭು ಚವ್ಹಾಣ ಅವರನ್ನು ಹೊರತುಪಡಿಸಿ ಹೈ–ಕ ಜಿಲ್ಲೆಗಳಾದ ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಯಾರೊಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಬಳ್ಳಾರಿಯವರೇ ಆದ ಬಿ.ಶ್ರೀರಾಮುಲು ಸಚಿವರಾಗಿದ್ದರೂ ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕರು. ಹೀಗಾಗಿ, ಅಧಿಕೃತವಾಗಿ ಚಿತ್ರದುರ್ಗ ಜಿಲ್ಲೆಗೇ ಸಚಿವ ಸ್ಥಾನ ಸಿಕ್ಕಂತಾಗಿದೆ.

ಕಲಬುರ್ಗಿ ಜಿಲ್ಲೆಗೆ ಸಂಪುಟದಲ್ಲಿ ಹಿಂದೆಂದೂ ಇಷ್ಟೊಂದು ಶೂನ್ಯಭಾವ ಆವರಿಸಿರಲಿಲ್ಲ ಎನ್ನುತ್ತಾರೆ ರಾಜಕೀಯ ಮುಖಂಡರು.

ವೀರೇಂದ್ರ ಪಾಟೀಲ, ಎನ್‌.ಧರ್ಮಸಿಂಗ್‌ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಭವ್ಯ ಇತಿಹಾಸ ಜಿಲ್ಲೆಗೆ ಇದೆ. ಸಾಲದೆಂಬಂತೆ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿದ್ದರಲ್ಲದೇ, ಕಳೆದ ಲೋಕಸಭಾ ಅವಧಿಯಲ್ಲಿ ಕಾಂಗ್ರೆಸ್‌ನ ನಾಯಕರಾಗಿ ಎನ್‌ಡಿಎ ನೇತೃತ್ವದ ಸರ್ಕಾರವನ್ನು ಹಲವು ಬಾರಿ ಪೇಚಿಗೆ ಸಿಲುಕಿಸಿದ್ದರು.

ಖರ್ಗೆಯವರು ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯಿಲಿ, ಎಸ್‌.ಎಂ.ಕೃಷ್ಣ ಹಾಗೂ ಎನ್‌.ಧರ್ಮಸಿಂಗ್‌ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌, ಸಹಕಾರ, ಜಲಸಂಪನ್ಮೂಲ, ಸಾರಿಗೆ, ಸಣ್ಣ. ಮಧ್ಯಮ ಮತ್ತು ಬೃಹತ್‌ ಕೈಗಾರಿಕೆ, ಕಂದಾಯ ಹಾಗೂ ಗೃಹ ಖಾತೆಯನ್ನು ನಿರ್ವಹಿಸಿದ್ದರು.

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇದ್ದಾಗಲೂ ಬೀದರ್‌ ಜಿಲ್ಲೆಯ ಮೂವರು, ಕಲಬುರ್ಗಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ತಲಾ ಒಬ್ಬರು ಸಚಿವರು ಸೇರಿದಂತೆ ಆರು ಸಚಿವರು ಇದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಆರು ಜಿಲ್ಲೆ ಸೇರಿ ಒಬ್ಬರೇ ಸಚಿವರನ್ನು ನೇಮಿಸಲಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ನಾಲ್ಕು ಬಾರಿ ಶಾಸಕರಾಗಿರುವ (ಬಿಜೆಪಿ ಟಿಕೆಟ್‌ನಿಂದ ಮೊದಲ ಬಾರಿ ಶಾಸಕ) ಸುಭಾಷ್‌ ಗುತ್ತೇದಾರ, ಎರಡು ಬಾರಿ ಶಾಸಕರಾಗಿರುವ ದತ್ತಾತ್ರೇಯ ಪಾಟೀಲ ರೇವೂರ, ಮೂರು ಬಾರಿ ಸೋತು, ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸೇಡಂ ಶಾಸಕ, ಸಂಘ ಪರಿವಾರ ಮೂಲದ ರಾಜಕುಮಾರ ಪಾಟೀಲ ತೇಲ್ಕೂರ ಅವರಲ್ಲಿ ಒಬ್ಬರನ್ನು ಶಾಸಕರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು. ಅಲ್ಲದೇ, ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ವಿಧಾನಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಜಿ.ಪಾಟೀಲ ಅವರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಎಲ್ಲ ನಿರೀಕ್ಷೆಗಳು ಹುಸಿಯಾಗಿವೆ.

ನಿಗಮ ಮಂಡಳಿ ಭರವಸೆ: ಸಚಿವ ಸ್ಥಾನದಿಂದ ವಂಚಿತರಾಗಿರುವ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ರಾಜಕುಮಾರ್ ಪಾಟೀಲ ತೇಲ್ಕೂರ ಅವರಿಗೆ ಪ್ರಮುಖ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂಬ ಭರವಸೆ ಯಡಿಯೂರಪ್ಪ ಅವರಿಂದ ಸಿಕ್ಕಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

***

ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಯಡಿಯೂರಪ್ಪ ಅವರಿಗೆ ಹೇಳಿದ್ದೆ. ಆದರೆ, ಸಂಪುಟದಲ್ಲಿ ಅರ್ಧ ಯಡಿಯೂರಪ್ಪ ಹಾಗೂ ಅರ್ಧ ಹೈಕಮಾಂಡ್‌ನವರು ಹೇಳಿದವರು ಸಚಿವರಾಗಿದ್ದಾರೆ. ಮುಂದೆ ಏನಾಗುತ್ತದೋ ಕಾದು ನೋಡೋಣ

ಬಿ.ಜಿ.ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ, ಕಲಬುರ್ಗಿ

***

ಮತದಾರರು ಕುಣಿದಾಡುತ್ತಾ ಬಿಜೆಪಿಗೆ ಮತ ಹಾಕಿದ್ದರು. ಈಗ ನೋಡಿದರೆ ಒಂದೇ ಒಂದು ಮಂತ್ರಿ ಸ್ಥಾನವೂ ಕಲಬುರ್ಗಿಗೆ ಸಿಕ್ಕಿಲ್ಲ. ಮತ್ತೊಮ್ಮೆ ಹೈದರಾಬಾದ್‌–ಕರ್ನಾಟಕ ಪ್ರದೇಶವನ್ನು ನಿರ್ಲಕ್ಷೆ ಮಾಡುವ ಮೂಲಕ ಬಿಜೆಪಿ ಎಂದಿಗೂ ಹೈ–ಕ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ

ಅಲ್ಲಮಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT