ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯ ಪದವೀಧರ ಮತ ಕ್ಷೇತ್ರ: ಒಂದೇ ದಿನ 10 ನಾಮಪತ್ರ ಸಲ್ಲಿಕೆ

ಈಶಾನ್ಯ ಪದವೀಧರ ಮತ ಕ್ಷೇತ್ರದ ಚುನಾವಣೆ
Published 15 ಮೇ 2024, 5:08 IST
Last Updated 15 ಮೇ 2024, 5:08 IST
ಅಕ್ಷರ ಗಾತ್ರ

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ನಾಮಪತ್ರ ಸಲ್ಲಿಕೆಯ 6ನೇ ದಿನವಾದ ಮಂಗಳವಾರ 8 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾದವು.

ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಬ. ಪಾಟೀಲ ಮೂರು ನಾಮಪತ್ರಗಳು ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಗಳಾದ ನಾರಾ ಪ್ರತಾಪ್ ರೆಡ್ಡಿ, ಮಲ್ಲಿಕಾರ್ಜುನ ವೀರಣ್ಣ ಧುತ್ತರಗಾಂವ, ಎನ್‌. ಶೈಲಜಾ ರೆಡ್ಡಿ, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್, ಅನಿಮೇಶ ಮಹಾರುದ್ರಪ್ಪ, ಮೊಹಮ್ಮದ್ ಅಮನ್ ಹಾಗೂ ಶರಣಬಸಪ್ಪ ಪೀರಪ್ಪ ಅವರು ತಲಾ ಒಂದೊಂದು ನಾಮಪತ್ರವನ್ನು ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರಿಗೆ ಸಲ್ಲಿಕೆ ಮಾಡಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ನಾರಾ ಪ್ರತಾಪ್ ರೆಡ್ಡಿ ಅವರು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೋಡ್ ಶೋ ನಡೆಸಿದರು. ಮಾರ್ಗ ಮಧ್ಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ರೋಡ್‌ ಶೋ ಉದ್ದಕ್ಕೂ ನೆರೆದಿದ್ದ ನೂರಾರು ಬೆಂಬಲಿಗರು ಪಕ್ಷದ ಭಾವುಟ ಹಿಡಿದು, ಜೈಕಾರ ಹಾಕಿದರು.

ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು ಶಾಸಕ ಅಲ್ಲಮಪ್ರಭು ಪಾಟೀಲ, ಮುಖಂಡರಾದ ರೇವುನಾಯಕ ಬೆಳಮಗಿ, ಜಗದೇವ ಗುತ್ತೇದಾರ ಅವರೊಂದಿಗೆ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಡಿಸಿ ಕಚೇರಿ ಆವರಣ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹಾಕಿಲ್ಲ. ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಗೆ ಬರುವಂತಿಲ್ಲ. ಸಾರ್ವಜನಿಕರಿಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚಿಸಲಾಗುವುದು.
ಕೃಷ್ಣ ಬಾಜಪೇಯಿ, ಪ್ರಾದೇಶಿಕ ಆಯುಕ್ತ ಚುನಾವಣಾಧಿಕಾರಿ

ಬಳಿಕ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಈಗಾಗಲೇ ಎರಡ್ಮೂರು ಬಾರಿ ಸುತ್ತಿದ್ದೇನೆ. ಮತ್ತೊಂದು ಬಾರಿ ಎಲ್ಲರನ್ನು ಭೇಟಿಯಾಗಿ ಮತ ಯಾಚಿಸುತ್ತೇನೆ. ಈ ಮುಂಚೆ ಗೆದ್ದಾಗ ಬಿಜೆಪಿ ಆಡಳಿತದಲ್ಲಿತ್ತು. ಆದರೂ ನಾನು ಗೆದ್ದಿದ್ದೆ. ಈ ಬಾರಿಯೂ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 34 ಸಾವಿರ ಶಿಕ್ಷರನ್ನು ವರ್ಗಾವಣೆ ಮಾಡಿದ್ದರಿಂದ ಸಂತಸವಾಗಿದ್ದಾರೆ. ಹಳೆ ಪಿಂಚಣಿ ಜಾರಿಯು ನಮ್ಮ ಚುನಾವಣೆಯ ಪ್ರಣಾಳಿಕೆಯಲ್ಲಿ ಇರುವುದರಿಂದ ಮತದಾರರು ಕೈಹಿಡಿಯುವರು’ ಎಂದರು.

ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆಯ ದಿನವಾಗಿದೆ.

ಜನರನ್ನು ವಿಚಾರಣೆ ಮಾಡಿ ಒಳ ಬಿಟ್ಟ ಪೊಲೀಸರು

ಮಿನಿ ವಿಧಾನಸೌಧದಲ್ಲಿನ ವಿವಿಧ ಇಲಾಖೆಗಳ ಕಚೇರಿಗಳಿಗೆ ಸರ್ಕಾರದ ಕೆಲಸಗಳಿಗಾಗಿ ತೆರಳುತ್ತಿದ್ದ ಸಾರ್ವಜನಿಕರನ್ನು ಪ್ರವೇಶ ದ್ವಾರದಲ್ಲಿ ತಡೆದ ಪೊಲೀಸರು ಅವರನ್ನು ವಿಚಾರಣೆ ಮಾಡಿ ಒಳಗೆ ಬಿಟ್ಟಿದ್ದು ಕಂಡುಬಂತು.

ಮುಖ್ಯ ಪ್ರವೇಶ ದ್ವಾರದಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿ ಹಾಗೂ ಅವರ ಸೂಚಕರನ್ನು ಮಾತ್ರವೇ ಬಿಟ್ಟರು. ಆಸ್ತಿ ನೋಂದಣಿ ಆಧಾರ್ ತಿದ್ದುಪಡಿ ಮತ್ತು ಹೆಸರು ಸೇರ್ಪಡೆ ಬರ ಪರಿಹಾರದ ಡಿಬಿಟಿ ವಿಳಂಬ ಪಿಂಚಣಿ ಸೇರಿ ಇತರೆ ಕಾರ್ಯಗಳ ನಿಮಿತ್ತ ಕುಟುಂಬದೊಂದಿಗೆ ಸಾರ್ವಜನಿಕರು ಮುಖ್ಯ ದ್ವಾರಕ್ಕೆ ಬಂದರು. ದ್ವಾರದಲ್ಲಿ ತಡೆದ ಪೊಲೀಸರು ಅವರನ್ನು ಇನ್ನೊಂದು ಗೇಟಿನಿಂದ ಹೋಗುವಂತೆ ಸೂಚಿಸಿದರು. ಮತ್ತೆ ಕೆಲವರಿಗೆ ಏನೂ ಹೇಳದೆ ಗದರಿಸಿ ವಾಪಸ್ ಕಳಿಸಿದರು.

‘ಕುಡಾ’ ಸಮೀಪದ ದ್ವಾರದಲ್ಲಿ ನಿಯೋಜನೆಗೊಂಡ ಪೊಲೀಸರು ಸಾರ್ವಜನಿಕರನ್ನು ತಡೆದು ಎಲ್ಲಿಗೆ ಹೋಗಬೇಕು? ಯಾರನ್ನು ಭೇಟಿಯಾಗಬೇಕು? ಏನು ಕೆಲಸ... ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ವಿಚಾರಿಸಿದರು. ಒಳಗೆ ಬೈಕ್ ಹೋದರೆ ವಾಪಸ್ ಬರುವುದಿಲ್ಲ ಎಂದು ಸಹ ಹೆದರಿಸಿದರು. ಕೆಲವರನ್ನು ತಡೆದು ವಾಪಸ್ ಸಹ ಕಳುಹಿಸಿದರು.

‘ನನ್ನ ತಂದೆ ಅಂಗವಿಕಲನಾಗಿದ್ದು ನಡೆಯಲು ಬರುವುದಿಲ್ಲ. ಉಪನೋಂದಣಾಧಿಕಾರಿ ಕಚೇರಿಯಲ್ಲಿರುವ ಅವರನ್ನು ಕರೆ ತರಬೇಕಿದೆ. ಅನುಮಾನ ಇದ್ದರೆ ನನ್ನೊಂದಿಗೆ ಬನ್ನಿ’ ಎಂದು ವ್ಯಕ್ತಿಗೆ ಕಾನ್‌ಸ್ಟೆಬಲ್‌ ಒಳ ಬಿಡಲಿಲ್ಲ. ಮೇಲಾಧಿಕಾರಿಯೊಬ್ಬರು ಬಂದು ಅಳಲು ಆಲಿಸಿ ಆತನನ್ನು ಒಳಬಿಟ್ಟರು. 

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಬೆಂಬಲಿಗರೊಂದಿಗೆ ಗೆಲುವಿನ ಚಿಹ್ನೆ ತೋರಿಸಿದರು. ಶರಣಪ್ಪ ಮಟ್ಟೂರ ಇತರರು ಭಾಗವಹಿಸಿದ್ದರು
–ಪ್ರಜಾವಾಣಿ ಚಿತ್ರ
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಬೆಂಬಲಿಗರೊಂದಿಗೆ ಗೆಲುವಿನ ಚಿಹ್ನೆ ತೋರಿಸಿದರು. ಶರಣಪ್ಪ ಮಟ್ಟೂರ ಇತರರು ಭಾಗವಹಿಸಿದ್ದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT