ಸಮ್ಮೇಳನದ ಆಚೆ ಕೆಲಸ ಮಾಡಿ: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

7

ಸಮ್ಮೇಳನದ ಆಚೆ ಕೆಲಸ ಮಾಡಿ: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ

Published:
Updated:
Prajavani

ಕಲಬುರ್ಗಿ: ‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಸಮ್ಮೇಳನಗಳ ಆಚೆ ಕೆಲಸ ಮಾಡಬೇಕು. ಕನ್ನಡಕ್ಕೆ ಕುತ್ತು ಬಂದಾಗ ಮೊದಲು ದನಿ ಎತ್ತಬೇಕು’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ಡಾ.ಸೂರ್ಯಕಾಂತ ಪಾಟೀಲ ಸಂಪಾದಕತ್ವದ ‘ಒಡಲ ಧ್ವನಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1905ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ರಾಜನೊಬ್ಬ ಸ್ವಾಯತ್ತ ಸಂಸ್ಥೆ ಇರಬೇಕು ಎಂದು ಯೋಚಿಸಿದ್ದೆ ದೊಡ್ಡ ವಿಚಾರ. ಪರಿಷತ್ತು ಬರೀ ಸಮ್ಮೇಳನಗಳಿಗೆ ಸೀಮಿತವಾಗಬೇಕೆ ಅಥವಾ ಬೇರೆ ಏನನ್ನಾದರೂ ಮಾಡಬೇಕೆ ಎಂದು ಪ್ರಶ್ನಿಸಿಕೊಳ್ಳಬೇಕು’ ಎಂದರು.

‘ವಿಮರ್ಶಕರಿಗಿಂತ ಕವಿ, ಕಾದಂಬರಿಕಾರ ಭಿನ್ನ. ಈ ಭಾಗದ ಕವಿಗಳಲ್ಲಿ ರಾಜ್ಯ ಮತ್ತು ದೇಶದ ಸಮಸ್ಯೆಗಳು, ನೈತಿಕತೆ ಮತ್ತು ಮಾನವೀಯತೆಯ ತುಡಿತವಿದೆ. ಕವಿ ಅಥವಾ ಲೇಖಕ ತಾನು ಬರೆದದ್ದಲ್ಲೆವೂ ಉತ್ತಮ ಎಂದು ಭಾವಿಸಬಾರದು. ಎಲ್ಲಾ ರೀತಿಯ ಸಾಹಿತ್ಯವನ್ನು ಓದಬೇಕು, ನಿರಂತರ ಅಧ್ಯಯನಶೀಲರಾಗಬೇಕು. ಸ್ಥಳೀಯ ಸಂಸ್ಕೃತಿ ಮತ್ತು ಚರಿತ್ರೆಯನ್ನು ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಸುತ್ತಲಿನ ಪರಿಸರದ ಬಗ್ಗೆ ಆಡು ಭಾಷೆಯಲ್ಲೇ ಸಾಹಿತ್ಯ ರಚಿಸಬೇಕು. ಕೋಗಿಲೆಯ ಮೊಟ್ಟೆಯನ್ನು ಕಾಗೆ ಮರಿ ಮಾಡುತ್ತದೆ. ಆ ಬಳಿಕ ಅದು ಕೋಗಿಲೆಯಾಗುತ್ತದೆ. ನಾವು ಕಾಗೆಯ ಕಾರುಣ್ಯದ ಬಗ್ಗೆ ಬರೆಯಬೇಕೆ ಹೊರತು ಕೋಗಿಲೆಯ ಬಗ್ಗೆ ಅಲ್ಲ. ಕನ್ನಡಕ್ಕೆ ಅದಮ್ಯ ಸಂವೇದನಾ ಶಕ್ತಿ ಇದೆ. ಆಳಲು ಬಂದವರನ್ನು ಅರಗಿಸಿಕೊಳ್ಳುವ ಗುಣ ಕನ್ನಡಕ್ಕಿದೆ. ಹೀಗಾಗಿ ಕನ್ನಡ ಭಾಷೆಗೆ ಯಾವತ್ತೂ ನಶಿಸುವುದಿಲ್ಲ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಆರ್.ನಿರಂಜನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ. ಕಾ.ರಾಮೇಶ್ವರಪ್ಪ ಮಾತನಾಡಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಡಾ.ವಿಜಯಕುಮಾರ ಪರುತೆ, ಗೌರವ ಕೋಶಾಧ್ಯಕ್ಷ ದೌಲತರಾಯ ಮಾಲಿಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !