ಬುಧವಾರ, ನವೆಂಬರ್ 30, 2022
16 °C
102 ಆರ್‌ಎಸ್‌ಐ, ಸ್ಪೆಷಲ್ ಆರ್‌ಎಸ್‌ಐಗಳ ಬುನಾದಿ ತರಬೇತಿ ಮುಕ್ತಾಯ

ನುರಿತ ಅಧಿಕಾರಿಗಳಿಂದ ಇಲಾಖೆ ಸಾಮರ್ಥ್ಯ ವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಹೊಸದಾಗಿ ಆರ್‌ಎಸ್‌ಐ, ಸ್ಪೆಶಲ್ ಆರ್‌ಎಸ್‌ಐ ಹುದ್ದೆಗಳಿಗೆ ನೇಮಕವಾಗಿ ಬುನಾದಿ ತರಬೇತಿ ಮುಗಿಸಿದವರು ಎಂ.ಟೆಕ್, ಎಂ.ಎಸ್ಸಿ, ಬಿ.ಇ, ಬಿ.ಎಸ್ಸಿ, ಎಲ್‌ಎಲ್‌ಬಿ ಪದವಿಯನ್ನು ಪೂರೈಸಿದ್ದು, ಇದರಿಂದ ಇಲಾಖೆಯ ಸಾಮರ್ಥ್ಯ ವೃದ್ಧಿ ಆಗಲಿದೆ. ಅವರ ಪ್ರತಿಭೆಯನ್ನು ಸಮರ್ಪಕವಾಗ ಬಳಸಿಕೊಳ್ಳಲಾಗುವುದು ಎಂದು ಪೊಲೀಸ್ ತರವೇತಿ ವಿಭಾಗದ ಡಿಜಿಪಿ ಡಾ.ಪಿ. ರವೀಂದ್ರನಾಥ್ ತಿಳಿಸಿದರು.

ನಗರದ ಹೊರವಲಯದ ನಾಗನಹಳ್ಳಿಯಲ್ಲಿ ಇರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಶುಕ್ರವಾರ 7ನೇ ತಂಡದ ಆರ್‌ಎಸ್‌ಐ, ಸ್ಪೆಷಲ್ ಆರ್‌ಎಸ್‌ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘102 ಪ್ರಶಿಕ್ಷಣಾರ್ಥಿಗಳ ಪೈಕಿ 43 ಜನ ಬಿ.ಇ,‌ ಐವರು ಬಿಎಸ್ಸಿ, ಒಬ್ಬರು ಎಂ.ಎಸ್ಸಿ ಹಾಗೂ ಎಂ.ಎಸ್ಸಿ ಪದವೀಧರರಿದ್ದಾರೆ. ಉನ್ನತ ವಿದ್ಯಾರ್ಹತೆ ಹೊಂದಿದವರು ಇಲಾಖೆ ಸೇರಿದ್ದರಿಂದ ಪೊಲೀಸ್ ಇಲಾಖೆಯ ವರ್ಚಸ್ಸು ವೃದ್ಧಿ ಆಗುವುದು. ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆಂತರಿಕ ಭದ್ರತಾ ವಿಭಾಗ, ನಕ್ಸಲ್ ನಿಗ್ರಹ ಪಡೆ, ಭಯೋತ್ಪಾದನೆ ನಿಗ್ರಹ ಪಡೆಯಲ್ಲೂ ಸೇವೆ ಸಲ್ಲಿಸಲು ಅವಕಾಶವಿದೆ’ ಎಂದರು.

‘ಇಲಾಖೆಯ ವತಿಯಿಂದ ಬಂದೋಬಸ್ತ್ ಸಂದರ್ಭದಲ್ಲಿ ಡ್ರೋಣ್‌ಗಳನ್ನು ಬಳಸಲಾಗುತ್ತಿದೆ. ಎಲ್ಲ ಎಫ್‌ಐಆರ್ ಪ್ರತಿಗಳನ್ನು ಕಂಪ್ಯೂಟರ್ ಮೂಲಕವೇ ನೀಡಲಾಗುತ್ತಿದೆ. ಇದಕ್ಕೆ ನುರಿತ ಸಿಬ್ಬಂದಿ ಅಗತ್ಯವಿದೆ’ ಎಂದು ಹೇಳಿದರು.

ಪೊಲೀಸ್ ತರಬೇತಿ ಮಹಾವಿದ್ಯಾಲಯದ ಪ್ರಾಂಶುಪಾಲ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ‘ನಾಗನಹಳ್ಳಿಯಲ್ಲಿರುವ ಪೊಲೀಸ್ ತರಬೇತಿ ಶಾಲೆಯು 2003ರಲ್ಲಿ ಆರಂಭಗೊಂಡಿದ್ದು, 94 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿಯವರೆಗೆ 2327 ಸಿವಿಲ್ ಪಿಎಸ್‌ಐ, ಅಬಕಾರಿ ‍ಇಎಸ್‌ಐ, ಆರ್‌ಎಸ್‌ಐ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಬುನಾದಿ ತರಬೇತಿ ನೀಡಲಾಗಿದೆ. 4796 ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಅತ್ಯುತ್ತಮ ಪರಿಸರ, ಹವಾಗುಣವನ್ನು ಹೊಂದಿರುವ ಈ ಮಹಾವಿದ್ಯಾಲಯದ ಆವರಣದಲ್ಲಿ 11 ತಿಂಗಳವರೆಗೆ ಪ್ರಶಿಕ್ಷಣಾರ್ಥಿಗಳು ಉತ್ತಮ ತರಬೇತಿಯನ್ನು ಪೂರೈಸಿದ್ದಾರೆ’ ಎಂದರು.

ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಎಸ್ಪಿ ಇಶಾ ಪಂತ್, ಎಸಿಪಿ ದೀಪನ್ ಎಂ.ಎನ್., ಹಿರಿಯ ಪೊಲೀಸ್ ಅಧಿಕಾರಿಗಳು, ತರಬೇತಿ ಮುಗಿಸಿದ ಅಧಿಕಾರಿಗಳ ಕುಟುಂಬ ಸದಸ್ಯರು ಭಾಗವಹಿಸಿದ್ದರು.

ಆಕರ್ಷಕ ಪಥಸಂಚಲನ

ಕಾರ್ಯಕ್ರಮದ ಆರಂಭದಲ್ಲಿ 102 ಆರ್‌ಎಸ್‌ಐ, ಸ್ಪೆಷಲ್ ಆರ್‌ಎಸ್‌ಐ ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳು ಮೈದಾನದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಬೀರನಹೊಳಿ ಗ್ರಾಮದ ನಾಗರಾಜ ಮಾಲದಾನಿ ಪರೇಡ್ ಕಮಾಂಡರ್ ಆಗಿ ಪಥಸಂಚಲನ ಮುನ್ನಡೆಸಿದರು.

ಬೆಂಗಳೂರಿನ ಆಡುಗೋಡಿಯ ಉಮಾ ಆರ್. ಅವರು ಎರಡನೇ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. 1ನೇ ತುಕಡಿಯನ್ನು ಸುರೇಶ ನಾರಾಯಣಪ್ಪ, ಎರಡನೇ ತುಕಡಿಯನ್ನು ಮಲ್ಲನಗೌಡ ಶಿವಣ್ಣ, ಮೂರನೇ ತುಕಡಿಯನ್ನು ಸಂತೋಷ ಲಮಾಣಿ, ನಾಲ್ಕನೇ ತುಕಡಿಯನ್ನು ಭೈರೇಶ್ ಕೆ.ಎಸ್. ಮುನ್ನಡೆಸಿದರು.

ಭೈರೇಶ್‌ಗೆ ಆಲ್‌ರೌಂಡರ್ ಪ್ರಶಸ್ತಿ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನವರಾದ ಭೈರೇಶ್ ಕೆ.ಎಸ್‌. ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಗೃಹಸಚಿವರ ಹೆಸರಿನಲ್ಲಿ ಖಡ್ಗ ನೀಡಲಾಯಿತು.

ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳದ ಸಂಗಮೇಶ ಶಿವಾನಂದ ಬೈಚಬಾಳ ಹಾಗೂ ಹಾಸನ ಜಿಲ್ಲೆ ಚಿನ್ನೇನಹಳ್ಳಿಯ ಪುನೀತ್ ಸಿ.ಎನ್. ಅವರಿಗೆ ಮೇಜರ್ ಸಂದೀಪ ಉನ್ನಿಕೃಷ್ಣನ್ ಪ್ರಶಸ್ತಿ ನೀಡಲಾಯಿತು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಬೀರನಹೊಳಿ ಗ್ರಾಮದ ನಾಗರಾಜ ಮಾಲದಾನಿ ಅವರಿಗೆ ಪ್ರಿನ್ಸಿಪಾಲ್ ಟ್ರೋಫಿ ಹಾಗೂ ಡಿಜಿಪಿ (ತರಬೇತಿ) ಟ್ರೋಫಿ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಪಳಗಿ ಹನುಮಪ್ಪ ಅವರಿಗೆ ಮಧುಕರಶೆಟ್ಟಿ ಟ್ರೋಫಿ, ತುಮಕೂರಿನ ಸಂಜಯ್ ಎಸ್., ಬೆಳಗಾವಿಯ ಮಹೇಶ ಪಾಟೀಲ ಅವರಿಗೆ ಡಿಜಿ ಮತ್ತು ಐಜಿಪಿ ಟ್ರೋಫಿ ನೀಡಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು