ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಎ: ತಾಂತ್ರಿಕ, ಸಾಂಸ್ಕೃತಿಕ ಉತ್ಸವ ನಾಳೆಯಿಂದ

Published 15 ಮೇ 2024, 5:06 IST
Last Updated 15 ಮೇ 2024, 5:06 IST
ಅಕ್ಷರ ಗಾತ್ರ

ಕಲಬುರಗಿ: ‘ಹೈದರಾಬಾದ್ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಎಂಜಿನಿಯರಿಂಗ್ ಕಾಲೇಜು ವತಿಯಿಂದ ‘ಸ್ಯಾಕ್ಸ್’ ಸಭಾಂಗಣದಲ್ಲಿ ಮೇ 16 ಮತ್ತು 17ರಂದು ಅಂತರ್‌ ಕಾಲೇಜು ತಾಂತ್ರಿಕ–ಸಾಂಸ್ಕೃತಿಕ ಉತ್ಸವ ನಿರ್ಮಾಣ–2024 ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ.ನಮೋಶಿ ತಿಳಿಸಿದರು.

‘ಅಂದು ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಧಾರಾವಾಹಿ ನಟ ಅಭಿಷೇಕ್ ಗೀತೆ ಉದ್ಘಾಟಿಸುವರು. ನಿಂಬ್ಲೆ ವಿಷನ್ ಪ್ರೈವೇಟ್ ಲಿಮಿಟೆಡ್‌ ಕಂಪನಿ ಸಿಇಒ ಚಿನ್ನಯ್ಯ ಮಠ್ ಹಾಗೂ ಮೇದಿನಿ ಟೆಕ್ನಾಲಜಿಸ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕಲ್ಲೂರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉತ್ಸವದ ಅಂಗವಾಗಿ ಮೇ 16ರ ಬೆಳಿಗ್ಗೆ 6ಕ್ಕೆ ಜಾಗತಿಕ ತಾಪಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸಲು ಮ್ಯಾರಾಥಾನ್ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಭಾಗವಹಿಸುವರು’ ಎಂದರು.

‘ಎರಡು ದಿನ ನಡೆಯುವ ತಾಂತ್ರಿಕ–ಸಾಂಸ್ಕೃತಿಕ ಉತ್ಸವದಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಶೈಕ್ಷಣಿಕ ಕಲಿಕಾ ವಿಷಯಗಳ ಜತೆಗೆ ಪ್ರತಿಭಾ ಕೌಶಲ ಮತ್ತು ನಿರ್ವಹಣಾ ನೈಪುಣ್ಯತೆಯ ಚಟುವಟಿಕೆಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಲಿದೆ. ಗಾಯನ, ನೃತ್ಯ, ಸಂಗೀತ ವಾದ್ಯಗಳು ನುಡಿಸುವುದು, ಮಿಮಿಕ್ರಿ, ಏಕ ಪಾತ್ರಾಭಿನಯ, ರ್‍ಯಾಂಪ್ ವಾಕ್ ಸೇರಿದಂತೆ ವಿವಿಧ ಕಲೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವರು’ ಎಂದು ಹೇಳಿದರು.

‘17ರಂದು ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಡಿ.ಜೆ. ಕಾರ್ಯಕ್ರಮವೂ ನಡೆಯಲಿದೆ’ ಎಂದರು.

‘ಟೆಕ್‌ನೋವಿಷನ್ 2024 ಅಡಿ ವಿದ್ಯಾರ್ಥಿಗಳೇ ತಯಾರಿಸಿದ ಎಐ, ಸೈಬರ್ ಸೆಕ್ಯೂರಿಟಿ, ವರ್ಚುವಲ್ ರಿಯಾಲಿಟಿ, ಕ್ಲೌಡ್ ಕಂಪ್ಯೂಟಿಂಗ್‌ ಸಿಗ್ನಲ್ ಪ್ರೊಸಸಿಂಗ್, 3ಡಿ ಪ್ರಿಂಟಿಂಗ್‌ ಸೇರಿದಂತೆ ಚಾಲ್ತಿಯಲ್ಲಿರುವ ತಂತ್ರಜ್ಞಾನಗಳ ಮಾದರಿಗಳನ್ನು ಪ್ರದರ್ಶಿಸಲಾಗುವುದು. ಅತ್ಯುತ್ತಮ ಮಾದರಿಗೆ ₹1 ಲಕ್ಷ ಬಹುಮಾನ ಇರಲಿದೆ’ ಎಂದು ಅವರು ಹೇಳಿದರು.

‘ಸಂಸ್ಥೆಯ ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ ಹಾಗೂ ವೃತ್ತಿಪರ ಕೌಶಲ ವೃದ್ಧಿಯ ತರಬೇತಿಗಾಗಿ ಬಜಾಜ್ ಆಟೊ ಲಿಮಿಟೆಡ್ ಹಾಗೂ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯದ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪದವೀಧರರಿಗೆ 6 ತಿಂಗಳು ಹಾಗೂ ಡಿಪ್ಲೊಮಾ ಎಂಜಿನಿಯರ್ ವಿದ್ಯಾರ್ಥಿಗಳಿಗೆ 4 ತಿಂಗಳ ಕೋರ್ಸ್ ಇರಲಿದೆ. ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ), ಕಲಬುರಗಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಹಾಗೂ ಟಾಟಾ ಟೆಕ್ನಾಲಜಿ ಜೊತೆಗೂ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಎಸ್‌.ಚಿಂಚೋಳಿ, ಸದಸ್ಯರಾದ ಅನಿಲ್‌ಕುಮಾರ ಎಸ್‌.ಮರಗೋಳ, ನಾಗಣ್ಣ ಎಸ್.ಘಂಟಿ, ನಿಶಾಂತ್ ಜಿ.ಯಾಲೆ, ಡಾ.ಶರಣಬಸಪ್ಪ ಡಾ.ಶರಣಬಸಪ್ಪ ಆರ್‌. ಹರವಾಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT