ವಾಡಿ: ಕರದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣ್ಣಿಕೇರಾ ಗ್ರಾಮದ ಸುಮಾರು 100ಕ್ಕೂ ಅಧಿಕ ರೈತರ ಜಮೀನುಗಳ ಓಡಾಟಕ್ಕೆ ಕಾಲುದಾರಿಯೇ ಗತಿಯಾಗಿದೆ.
ಕಾಲುದಾರಿಯ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಣಾದಿ ರಸ್ತೆ ನಿರ್ಮಿಸಿ ಸಮಸ್ಯೆಗೆ ಮುಕ್ತಿ ನೀಡಬೇಕು ಎಂದು ಒತ್ತಾಯಿಸುತ್ತಲೇ ಬರುತ್ತಿದ್ದು ಸಮಸ್ಯೆ ಮಾತ್ರ ಜೀವಂತ ಉಳಿದಿದೆ. ಬೇಡಿಕೆಗೆ ಮನ್ನಣೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಹಣ್ಣಿಕೇರಾ ಕರದಾಳ ನಡುವಿನ ಡಾಂಬಾರು ರಸ್ತೆಯಿಂದ ಸುಮಾರು 100ಕ್ಕೂ ಅಧಿಕ ಜನರ ಜಮೀನುಗಳಿಗೆ ತೆರಳಲು ಕಾಲುದಾರಿಯೇ ಆಸರೆಯಾಗಿದೆ. ಮಳೆ ಬಂದಾಗ ಕಾಲುದಾರಿ ಕೆಸರು ನೀರಿನಿಂದ ತುಂಬಿಕೊಳ್ಳುತ್ತದೆ. ಕಾಲುದಾರಿ ತುಂಬಾ ಮುಳ್ಳು ಕಂಟಿಗಳು ಹಾಗೂ ಅನಾವಶ್ಯಕ ಗಿಡಗಂಟಿಗಳು ಬೆಳೆದಿದ್ದು ವಿಷಜಂತುಗಳು ಓಡಾಡುತ್ತವೆ. ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಜಮೀನುಗಳಿಗೆ ತೆರಳುವ ರೈತರು ಜೀವ ಕೈಯಲ್ಲಿಡಿದುಕೊಂಡು ತೆರಳುವ ಪರಿಸ್ಥಿತಿ ಇಲ್ಲಿದೆ. ಮಹಿಳೆಯರು, ಮಕ್ಕಳು ತಮ್ಮ ಜಮೀನುಗಳಿಗೆ ಹೋಗಲು ದಾರಿ ಇಲ್ಲದ ಕಾರಣ ತೀವ್ರ ಪರದಾಡುತ್ತಾರೆ. ಜಮೀನುಗಳಿಗೆ ತೆರಳುವಾಗ ಹಲವು ಸಲ ಎತ್ತಿನ ಬಂಡಿಗಳು ಮಗುಚಿ ಬಿದ್ದು ರೈತರು ಗಾಯಗೊಂಡಿದ್ದಾರೆ. ರಸ್ತೆ ಇಲ್ಲದ ಕಾರಣ ರಾಶಿ ಮಾಡಿದ ಬೆಳೆಗಳನ್ನು ಮನೆಗೆ ತರಲು ಪರದಾಡುವ ಸ್ಥಿತಿ ಇದೆ.
‘ಕಾಲುದಾರಿಯಲ್ಲಿನ ತಗ್ಗುಗಳಿಗೆ ಹಾಗೂ ಕೆಸರು ನೀರು ನಿಲ್ಲುವ ಸ್ಥಳದಲ್ಲಿ ಸ್ಥಳೀಯ ರೈತರೇ ಹಲವು ಸಲ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲು, ಮಣ್ಣು ತಂದು ಹಾಕಿಕೊಂಡಿದ್ದಾರೆ. ಆದರೂ ರಸ್ತೆಯ ರೂಪ ಬಾರದೇ ಪ್ರತಿನಿತ್ಯ ಸಂಕಷ್ಟ ಪಡುವಂತಾಗಿದೆ’ ಎಂದು ರೈತರಾದ ತಿಮ್ಮಣ್ಣ ರಾಂಪುರು, ಬಸವರಾಜ ಗಂಜಿ, ಬಸವರಾಜ ಬಳಗಾರ, ಚಂದ್ರಶೇಖರ ಸಜ್ಜನಶೆಟ್ಟಿ, ಶರಣಪ್ಪ ಅಂಗಡಿ, ಶರಣಪ್ಪ ನಾಲವಾರ, ದೇವಿಂದ್ರ ಮಳಕರ, ನರಸಪ್ಪ ರಾಂಪುರು ಅಳಲು ತೋಡಿಕೊಂಡರು.
ಹಣಾದಿ ರಸ್ತೆ ನಿರ್ಮಿಸಿ ಎಂದು ಹಲವು ಸಲ ಸ್ಥಳೀಯ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ. ಆದರೂ ಸ್ಪಂದನೆ ಮಾಡಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಗತ್ಯವಿಲ್ಲದ ಕಡೆ ಕೆಲಸ ಮಾಡಲಾಗುತ್ತಿದೆ. ಅದರ ಬದಲು ಕಾಲುದಾರಿಗಳ ದುರಸ್ತಿ ಮಾಡುವತ್ತ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ಹಣಾದಿ ರಸ್ತೆ ನಿರ್ಮಾಣಕ್ಕಾಗಿ ರೈತರು ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಸಿದರೆ ಕ್ರಿಯಾಯೋಜನೆ ರೂಪಿಸಿ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಅವಕಾಶವಿದೆ. ರೈತರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬೇಕು
-ಪಂಡಿತ್ ಶಿಂಧೆ ನರೇಗಾ ಸಹಾಯಕ ನಿರ್ದೇಶಕರು ಚಿತ್ತಾಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.