ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೆ 3ರಿಂದ ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ’

ಸಿದ್ದರಾಮಯ್ಯ ನೇತೃತ್ವದಲ್ಲಿ 112 ಕ್ಷೇತ್ರಗಳಲ್ಲಿ ಸಂಚಾರ: ರಾಯರಡ್ಡಿ
Last Updated 24 ಜನವರಿ 2023, 16:47 IST
ಅಕ್ಷರ ಗಾತ್ರ

ಕಲಬುರಗಿ: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಫೆಬ್ರುವರಿ 3ರಿಂದ ಬೀದರ್ ಜಿಲ್ಲೆ ಬಸವಕಲ್ಯಾಣದಿಂದ ಆರಂಭಗೊಳ್ಳುವ ಪ್ರಜಾಧ್ವನಿ ಯಾತ್ರೆ ಉತ್ತರ ಕರ್ನಾಟಕದ 112 ಕ್ಷೇತ್ರಗಳಲ್ಲಿ ಸಂಚರಿಸಲಿದೆ’ ಎಂದು ಪ್ರಜಾಧ್ವನಿ ಅಭಿಯಾನದ ಸಮನ್ವಯ ಸಮಿತಿ ಅಧ್ಯಕ್ಷ ಬಸವರಾಜ ರಾಯರಡ್ಡಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರ್ಚ್ 15ರಂದು ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ಬದಾಮಿಯಲ್ಲಿ ಯಾತ್ರೆ ಮುಕ್ತಾಯವಾಗಲಿದೆ. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ತಂಡವು ಪ್ರತಿ ದಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಸಾಮೂಹಿಕ ನಾಯಕತ್ವದಲ್ಲಿ ಈ ಅಭಿಯಾನ ನಡೆಯುತ್ತಿದೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ಪ್ರಜಾಧ್ವನಿ ಅಭಿಯಾನ ದಾವಣಗೆರೆ, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 6ರಂದು ಕಮಲಾಪುರದ ಮೂಲಕ ಯಾತ್ರೆ ಕಲಬುರಗಿ ಜಿಲ್ಲೆ ಪ್ರವೇಶಿಸಲಿದೆ. ಫೆಬ್ರುವರಿ 10ರೊಳಗೆ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ಪ್ರವಾಸ ಮುಕ್ತಾಯವಾಗಲಿದೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಫೆಬ್ರುವರಿಯಲ್ಲಿ 11ರಂದು ಯಾತ್ರೆ ತೆರಳಲಿದೆ’ ಎಂದು ತಿಳಿಸಿದರು.

‘ಮೊದಲ ಹಂತದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಕೆಲ ವಾರಗಳಲ್ಲಿ ಹೊರಬೀಳಲಿದೆ. ಅಭ್ಯರ್ಥಿಗಳ ವಿವರಗಳನ್ನು ಪರಿಶೀಲಿಸುವ ಕಾರ್ಯ ಮುಕ್ತಾಯವಾಗಿದೆ. ಅಭ್ಯರ್ಥಿಗಳ ಆಯ್ಕೆ ಸಮಿತಿಯು ಫೆಬ್ರುವರಿ 2ರಂದು ಸಭೆ ನಡೆಸಲಿದೆ. ಎಲ್ಲ ಪೂರ್ವಾಪರಗಳನ್ನು ಪರಿಶೀಲಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಿದೆ. ಕ್ರಿಮಿನಲ್ ಹಿನ್ನೆಲೆ ಹೊಂದಿದ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಟಿಕೆಟ್ ನೀಡುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಪಕ್ಷದ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷವು ಅಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದೆ. ಹಾಗಾಗಿ, ಎಲ್ಲರೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ’ ಎಂದರು.

‘ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಸಾಧಿಸಿ ಅಧಿಕಾರಕ್ಕೆ ಬರಲಿದೆ’ ಎಂದು ತಿಳಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT