ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ರಂದು ಬಿಜೆಪಿ ಶಾಸಕರು, ಮುಖಂಡರ ಮನೆ ಮುಂದೆ ಧರಣಿ: ಪ್ರಣವಾನಂದ ಸ್ವಾಮೀಜಿ

27 ರಂದು ಬಸವಕಲ್ಯಾಣದ ಬೆಟ್ಟದ ಬಾಲ್ಗುಂದಿಯಿಂದ ಪಾದಯಾತ್ರೆ
Last Updated 7 ಜುಲೈ 2022, 11:31 IST
ಅಕ್ಷರ ಗಾತ್ರ

ಕಲಬುರಗಿ: ‘ಈಡಿಗ ಸಮುದಾಯಕ್ಕೆ ಪ್ರತ್ಯೇಕ ನಿಗಮ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸೇಂದಿ ಇಳಿಸಲು ಅವಕಾಶ ನೀಡಬೇಕು ಎಂಬ ಸಮಾಜದ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲರಾದ ಸ್ಥಳೀಯ ಬಿಜೆಪಿ ಶಾಸಕರು ಹಾಗೂ ಮುಖಂಡರ ಮನೆಯ ಎದುರು ಜುಲೈ 13ರಂದು ಧರಣಿ ನಡೆಸಲಾಗುವುದು’ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳದ ಅಧ್ಯಕ್ಷರಾದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜೂನ್‌ 25ರಂದು ಸಮುದಾಯವು ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಾಜದ ಬೇಡಿಕೆಯನ್ನುಜುಲೈ 5ರ ಒಳಗೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಬಿಜೆಪಿ ಶಾಸಕರಾದ ಸುಭಾಷ್‌ ಗುತ್ತೇದಾರ, ಬಸವರಾಜ ಮತ್ತೀಮೂಡು, ಬಿ.ಜಿ.ಪಾಟೀಲ, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ ಅವರು ಈಗ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ವಚನ ಭಷ್ಟ್ರರಾದ ಬಿಜೆಪಿಯ ಈ ಮುಖಂಡರ ಮನೆಯ ಮುಂದೆ ಅಂದು ಧರಣಿ ನಡೆಸಲಾಗುವುದು. ನಮ್ಮ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಸೇಡಂನ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮನೆ ಮುಂದೆಯೂ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.

ಸಮಾಜದ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜುಲೈ 27ರಂದು ಬಸವಕಲ್ಯಾಣದ ಹೆಂಡದ ಮಾರಯ್ಯ ತಪಸ್ಸು ಮಾಡಿದ ಬೆಟ್ಟದ ಬಾಲ್ಗುಂದಿಯಿಂದ ಪಾದಯಾತ್ರೆ ಆರಂಭಿಸಿ 31ರಂದು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಯಾತ್ರೆ ಅಂತ್ಯಗೊಳಿಸಿ, ಅಮರಣಾಂತ ಉಪವಾಸ ಕೂರಲಾಗುವುದು ಎಂದು ಹೇಳಿದರು.

ಶಾಲಾ ಪಠ್ಯಪುಸ್ತಕದಲ್ಲಿ ಕುವೆಂಪು ಅವರಿಗೆ ಆದ ಅವಮಾನವನ್ನು ಸರಿಪಡಿಸಿದರು. ಆದರೆ ನಾರಾಯಣಗುರುಗಳ ಕುರಿತು ಇರುವ ದೋಷವನ್ನು ಇನ್ನೂ ಸರಿಪಡಿಸಿಲ್ಲ. ಈಡಿಗ, ವಾಲ್ಮೀಕಿ, ಬೇಡ ಜಂಗಮ ಸಮಯದಾಯ ಸೇರಿದಂತೆ ಹಿಂದುಳಿದ ಸಮುದಾಯಗಳ ಹೋರಾಟಗಳನ್ನು ಹತ್ತಿಕ್ಕುತ್ತಿದೆ. ನಮ್ಮ ಸಮಾಜದ ಮುಖಂಡರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ನಮ್ಮ ಹೋರಾಟವನ್ನು ಮುಗಿಸುವ ಷಡ್ಯಂತ್ರ ನಡೆಯುತ್ತಿದೆ. ಹೋರಾಟದ ಮುಂಚೂಣಿಯಲ್ಲಿ ಇರುವವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಸಮುದಾಯವನ್ನು ಮುಗಿಸುವುದು ನಿಮ್ಮ ಉದ್ದೇಶವಾ ಎಂದು ಪ್ರಶ್ನಿಸಿದರು.

ಜೂನ್‌ 25ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ್ದ ಬಿಜೆಪಿಯ ಶಾಸಕರು, ಈಡಿಗ ಸಮುದಾಯದ ಬೇಡಿಕೆಯನ್ನು ಸರ್ಕಾರದ ಗಮನ ಸೆಳೆದು ಜುಲೈ 5 ರ ಒಳಗೆ ಈಡೇರಿಸುವುದಾಗಿ ಹೇಳಿದ್ದರು. ಆ ನಂತರ ಸ್ವಾಮೀಜಿ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT