ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರನ್ನೇ ಗುರಿಯಾಗಿಸಿದ ರಾಜ್ಯ ಸರ್ಕಾರ: ಆಕ್ರೋಶ

ಬಹಮನಿ ಕೋಟೆ ನಿವೇಶನಗಳ ತೆರವು: ಪ್ರತಿವಾದಿಗಳ ಅಹವಾಲು ಆಲಿಸದ ಹೈಕೋರ್ಟ್‌ ಆದೇಶ ಮರು ಪರಿಶೀಲನೆಗೆ ಆಗ್ರಹ
Last Updated 22 ಫೆಬ್ರುವರಿ 2020, 11:20 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮುಸ್ಲಿಮರು ವಾಸವಾಗಿರುವ ಸ್ಥಳಗಳನ್ನು ಮಾತ್ರ ಒಕ್ಕಲೆಬ್ಬಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ’ ಎಂದು ಇಲ್ಲಿನ ಐತಿಹಾಸಿಕಬಹಮನಿ ಕೋಟೆ ರಕ್ಷಣಾ ಸಮಿತಿ ಸದಸ್ಯರುಆಕ್ರೋಶ ಹೊರಹಾಕಿದರು.

ಬಹಮನಿ ಕೋಟೆಯಲ್ಲಿಯಅತಿಕ್ರಮಣ ತೆರವುಗೊಳಿಸಬೇಕು ಎಂಬ ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿರುವುದನ್ನುಖಂಡಿಸಿ ನಗರದ ಮುಸ್ಲಿಂ ಚೌಕ್‌ನಲ್ಲಿ ಶುಕ್ರವಾರ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ‘ಪುನರ್ವಸತಿ ಕಲ್ಪಿಸದೇ ಒಕ್ಕಲೆಬ್ಬಿಸಬೇಡಿ...’ ಎಂಬ ಘೋಷಣೆಗಳನ್ನು ಕೂಗಿದರು.

‘ರಾಜ್ಯದಲ್ಲಿರುವ ಎಲ್ಲ ಐತಿಹಾಸಿಕ ಕೋಟೆ, ಮಠ, ದೇವಸ್ಥಾನಗಳ ಆವರಣದಲ್ಲೂ ಜನ ವಾಸವಾಗಿದ್ದಾರೆ. ಹಂಪಿ, ಹಳೆಬೀಡು, ಬೀದರ್‌, ಬಾಗಲಕೋಟೆ, ವಿಜಯಪುರ ಸೇರಿದಂತೆ ಎಲ್ಲ ಐತಿಹಾಸಿಕ ಸ್ಥಳಗಳಲ್ಲೂ ಜನ ವಾಸವಾಗಿದ್ದಾರೆ. ವಿಜಯಪುರದಲ್ಲಂತೂ ಇಡೀ ಅರ್ಧ ಊರೇ ಕೋಟೆಯ ಒಳಗೆ ಇದೆ. ಮೈಸೂರು, ಬೆಳಗಾವಿಯಲ್ಲಿ ಕೋಟೆಯ ಒಳಗೇ ಸರ್ಕಾರಿ ಕಚೇರಿಗಳನ್ನು ಮಾಡಿಕೊಳ್ಳಲಾಗಿದೆ. ಅದೆಲ್ಲವನ್ನೂ ಬಿಟ್ಟು ಕೇವಲಕಲಬುರ್ಗಿಯ ಬಹಮನಿ ಕೋಟೆಯಲ್ಲಿರುವವರನ್ನು ಮಾತ್ರ ತೆರವುಗೊಳಿಸಲು ರಾಜ್ಯ ಸರ್ಕಾರ ಪಟ್ಟುಹಿಡಿದಿದೆ. ಇಲ್ಲಿ ಮುಸ್ಲಿಂ ಸಮುದಾಯದವರು ಮಾತ್ರ ಇದ್ದಾರೆ ಎಂಬುದೇ ಇದಕ್ಕೆ ಕಾರಣ’ ಎಂದು ಸಂಘಟಕ ಮೊಹಮದ್‌ ಅಯಾಜುದ್ದೀನ್‌ ಪಟೇಲ್‌ ದೂರಿದರು.

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಡೆದಾಳುವ ನೀತಿ ಅನುಸರಿಸುತ್ತಿವೆ. ಹಿಂದೂಗಳು ವಾಸವಾಗಿರುವ ಕೋಟೆ, ಕೊತ್ತಲುಗಳಲ್ಲಿ ಸಕಲ ಸೌಕರ್ಯಗಳನ್ನೂ ನೀಡಲಾಗುತ್ತಿದೆ. ವಿಜಯಪುರ ಹಾಗೂ ಹಂಪಿಯಂಥ ಸ್ಥಳಗಳಲ್ಲಿ ಸುಸಜ್ಜಿತ ರಸ್ತೆ, ಕಟ್ಟಡ, ವಾಣಿಜ್ಯ ಮಳಿಗೆ, ನೀರು, ವಿದ್ಯುತ್‌ ಒದಗಿಸಲಾಗಿದೆ. ಬೀದರ್‌ ಹಾಗೂ ವಿಜಯಪುರ ಕೋಟೆಗಳ ಸುತ್ತ ಹಿಂದೂ, ಮುಸ್ಲಿಮರು ಕೂಡ ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದಾರೆ. ಆ ಕಾರಣಕ್ಕಾಗಿ ಅಲ್ಲಿರುವವರನ್ನು ತೆರವುಗೊಳಿಸಲು ಮುಂದಾಗಿಲ್ಲ. ಬಹಮನಿ ಕೋಟೆಯಲ್ಲಿರುವ ಮುಸ್ಲಿಂ ಕುಟುಂಬಗಳು ತಮ್ಮ ವೋಟ್‌ ಬ್ಯಾಂಕ್‌ ಅಲ್ಲ ಎಂಬ ಒಂದೇ ಕಾರಣಕ್ಕೆ ತೆರವುಗೊಳಿಸಲಾಗುತ್ತಿದೆ’ ಎಂದರೂ ಆಕ್ರೋಶ ಹೊರಹಾಕಿದರು.

‘1347ರಲ್ಲಿ ಬಹಮನಿ ಸುಲ್ತಾನರು ಕಟ್ಟಿದ ಈ ಕೋಟೆಯಲ್ಲಿ ಆಗಿನಿಂದಲೂ ಜನವಸತಿ ಇದೆ. ನಿಜಾಮರ ಕಾಲದಲ್ಲಿ ಪ್ರಧಾನಿ ಆಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ ಅವರು ಇಲ್ಲಿ ವಾಸವಾಗಲು ಹಕ್ಕುಪತ್ರ ನೀಡಿದ್ದಾರೆ. ಮಾತ್ರವಲ್ಲ; ನಗರ ಪಾಲಿಕೆಗೆ ನೀಡಿದ ವಿದ್ಯುತ್‌ ಬಿಲ್‌, ನೀರಿನ ಬಿಲ್‌ ಇವೆ. ಜಿಲ್ಲಾಡಳಿತ ಕೊಟ್ಟ ವೋಟರ್‌ ಕಾರ್ಡ್‌, ಆಧಾರ್‌ ನಂಬರ್‌ ಇವೆ. ನಾವೆಲ್ಲ ಬಹಮನಿ ಹಾಗೂ ನಿಜಾಮ್‌ ಶಾಹಿಯ ವಂಶಸ್ಥರೇ ಆಗಿದ್ದೇವೆ. ನಮ್ಮದು ಅತಿಕ್ರಮಣ ಎನ್ನಲು ಹೇಗೆ ಸಾಧ್ಯ’ ಎಂದು ಪ್ರೊ.ರೆಹಮಾನ್‌ ಪಟೇಲ್‌ ಪ್ರಶ್ನಿಸಿದರು.

ಬಹಮನಿ ಫೌಂಡೇಷನ್‌ ಅಧ್ಯಕ್ಷ ಖಾಜಿ ರಿಜ್ವಾನ್‌ ಉರ್‌ ರೆಹಮಾನ್‌ ಸಿದ್ದಿಖಿ ಮಸೂದ್‌, ಮೊಹಮದ್ ಅಸ್ಗರ ಚುಲ್‌ಬುಲ್‌, ಮಾರುತಿ ಮಾನ್ಪಡೆ, ನಾಸಿರ್‌ ಹುಸೇನ್‌ ಉಸ್ತಾದ್‌ ಮುಂತಾದವರು ಮಾತನಾಡಿದರು. ಇಸ್ಮಾಯಿಲ್‌ ಕಾರಿಗಾರ, ಇಲಿಯಾಸ್‌ ಬಾಗವಾನ್‌, ಹಫೀಜ್‌ ಆಸ್ಪಾಕ್‌, ಬಾಬಾ ನಜರ್‌ ಮಹಮದ್‌ಖಾನ್‌, ಅಬ್ದುಲ್‌ ರಹೀಂ ಮಿರ್ಜಿ ನೇತೃತ್ವ ವಹಿಸಿದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಮುಸ್ಲಿಂ ಚೌಕ್‌ನ ನಾಲ್ಕೂ ದಿಕ್ಕಿನಲ್ಲಿ ವಾಹನ ಸಂಚಾರವನ್ನು ಒಂದು ತಾಸು ಬಂದ್‌ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT