ಶನಿವಾರ, ಜನವರಿ 25, 2020
27 °C
ಆಳಂದ ಪೊಲೀಸರಿಂದ ನಾಲ್ವರು ವಶಕ್ಕೆ, ಶಾಲಾ ಕಾಲೇಜುಗಳಿಗೆ ರಜೆ

ಪೌರತ್ವ ಕಾಯ್ದೆ: ಪ್ರತಿಭಟನೆ ಶಾಂತಿಯುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಳಂದ: ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಆಳಂದದಲ್ಲಿ ಗುರುವಾರ ಸಂವಿಧಾನ ರಕ್ಷಣಾ ವೇದಿಕೆ ಹಾಗೂ ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಶಾಂತಿಯುತವಾಗಿ ಜರುಗಿತು.

ಪ್ರತಿಭಟನೆಗೆ ಕರೆ ನೀಡಿದ್ದರಿಂದ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳು ಬೆಳಿಗ್ಗೆಯೇ ರಜೆ ಘೋಷಿಸಿದವು. ಇದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲಿಲ್ಲ. ವಾರದ ಸಂತೆ ದಿನವಾದ್ದರಿಂದ ಪಟ್ಟಣಕ್ಕೆ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಪೊಲೀಸರು ಮುಖ್ಯರಸ್ತೆ, ಶ್ರೀರಾಮ ಮಾರುಕಟ್ಟೆ, ಗಣೇಶ ಚೌಕ್‌, ಬಸ್‌ ನಿಲ್ದಾಣ, ದರ್ಗಾ ಚೌಕ್‌ , ಸಿದ್ದಾರ್ಥ ಚೌಕ್‌ ಮತ್ತಿತರ ಕಡೆ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು.

ಮುಂಜಾಗ್ರತಾ ಕ್ರಮವಾಗಿ ಹೋರಾಟಗಾರ ಮೌಲಾ ಮುಲ್ಲಾ, ಅಫ್ಜಲ ಅನ್ಸಾರಿ, ಕೈಫ್ ಅನ್ಸಾರಿ, ಜಹೀರ್ ಅನ್ಸಾರಿ ಅವರನ್ನು ಪೊಲೀಸರು ಕಡಗಂಚಿ ಬಳಿ ವಶಕ್ಕೆ ಪಡೆದಿದ್ದರು. ಇದಾದ ನಂತರ ಪಟ್ಟಣದಲ್ಲಿ ಮಧ್ಯಾಹ್ನ ಸಂವಿಧಾನ ರಕ್ಷಣಾ ವೇದಿಕೆ ಮತ್ತು ಮುಸ್ಲಿಂ ಸಂಘಟನೆ ಮುಖಂಡರು ಜಮಾವಣೆಗೊಂಡು ಪೌರತ್ವ ಕಾಯ್ದೆ ಖಂಡಿಸಿ ದಿಕ್ಕಾರ ಕೂಗಿದರು.

ಬಸ್‌ ನಿಲ್ದಾಣದಲ್ಲಿ ಪ್ರತಿಭಟನಾಕಾರರರು ಜಮಾವಣೆಗೊಳ್ಳುತ್ತಿದಂತೆ ಎಚ್ಚರವಹಿಸಿದ ಪೊಲೀಸರು ನಿಷೇಧಾಜ್ಞೆ  ಕಾರಣ ಪ್ರತಿಭಟನೆ ನಡೆಸಲು ಅವಕಾಶ ನೀಡಲಿಲ್ಲ. ಸ್ಥಳಕ್ಕೆ ಬಂದ ಉಪ ತಹಶೀಲ್ದಾರ್‌ ಬಿ.ಜಿ.ಕುದುರಿ ಮನವಿಪತ್ರ ಸ್ವೀಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಲು ಪಟ್ಟುಹಿಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಸಂವಿಧಾನ ವಿರೋಧಿಯಾಗಿದೆ. ಜಾತ್ಯತೀತ ತತ್ವ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು. ಕೇಂದ್ರದ ಬಿಜೆಪಿ ಸರ್ಕಾರವು ಪೌರತ್ವ ಕಾಯ್ದೆ ಮೂಲಕ ಧಾರ್ಮಿಕ ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ‘ಪೌರತ್ವ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು’ ಎಂದು ಒತ್ತಾಯಿಸಲಾಗಿದೆ.

ಮುಖಂಡರಾದ ಅಸ್ಪಾಕ್ ಮುಲ್ಲಾ, ಅಹ್ಮದಲಿ ಚುಲಬುಲ್, ಅಮ್ಜದಲಿ ಕರ್ಜಗಿ, ಮೋಹಿಜ್ ಕಾರಬಾರಿ, ಸುಲೇಮಾನ ಮುಗುಟ, ರಫಿಕ್ ಮುಲ್ಲಾ, ಬಾಬಾ ಶೇಖ, ಅಜಗರಲಿ ಹವಾಲ್ದಾರ್‌ ಇದ್ದರು.

ಹೆಚ್ಚುವರಿ ಎಸ್‌ಪಿ ಪ್ರಸನ್ನಕುಮಾರ ದೇಸಾಯಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಶಿವಾನಂದ ಗಾಣಿಗೇರ, ಪಿಎಸ್ಐ ಗಳ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು