ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಫಜಲಪುರ: ಪರಿಹಾರ ಹಂಚಿಕೆಯಲ್ಲಿ ತಾರತಮ್ಯ: ಪ್ರತಿಭಟನೆ

Published 20 ಮೇ 2024, 15:24 IST
Last Updated 20 ಮೇ 2024, 15:24 IST
ಅಕ್ಷರ ಗಾತ್ರ

ಅಫಜಲಪುರ: ‘ತಾಲ್ಲೂಕಿನಲ್ಲಿ ಭೀಮಾ ಮತ್ತು ಅಮರ್ಜಾ ಕಾಲುವೆಗಳು ಹಾಯ್ದಿರುವ ಜಮೀನಿನ ಮತ್ತು ಇನ್ನುಳಿದ ರೈತರಿಗೂ ಬೆಳೆ ಪರಿಹಾರ ನೀಡಬೇಕು. ಪರಿಹಾರ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಅದನ್ನು ಸರಿಪಡಿಸಬೇಕು’ ಎಂದು ಜಿಲ್ಲಾ ಮತ್ತು ತಾಲ್ಲೂಕು ಕಬ್ಬು ಬೆಳೆಗಾರ ಸಂಘ ಹಾಗೂ ರೈತರು ಸೋಮವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ ಹೂಗಾರ ಮಾತನಾಡಿ, ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಭೀಮಾನದಿ ಕಾಲುವೆ ಹೆಸರಿಗೆ ಮಾತ್ರ ಕಾಲುವೆಯಾಗಿದೆ. ನೀರು ಬರುವುದಿಲ್ಲ. ದಾಖಲೆಗಳಲ್ಲಿ ಮಾತ್ರ ಕಾಲುವೆಯಿದ್ದು, ನೀರು ಹರಿದು, ರೈತರು ಬೆಳೆ ಬೆಳೆಯುತ್ತಿದ್ದಾರೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ.ಇದು ತಮ್ಮ ಅನುಕೂಲಕ್ಕಾಗಿ ಮತ್ತು ನೌಕರಿ ಉಳಿಸಿಕೊಳ್ಳುವುದಕ್ಕಾಗಿ ತಪ್ಪಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡುತ್ತಾರೆ. ಒಂದು ದಿನವೂ ಕಾಲುವೆಯಿಂದ ರೈತರ ಹೊಲಗಳಿಗೆ ನೀರು ಹರಿದಿಲ್ಲ. ಹೀಗಾಗಿ ರೈತರ ಕಬ್ಬು, ತೊಗರಿ, ಹತ್ತಿ ಎಲ್ಲವೂ ಹಾಳಾಗಿ ಹೋಗಿದೆ. ಅದಕ್ಕಾಗಿ ಕಾಲುವೆಗಳ ಸೌಲಭ್ಯ ಪಡೆದ ರೈತರಿಗೂ ಬೆಳೆ ಪರಿಹಾರ ನೀಡಬೇಕು. ಬೇಕಾದರೆ ರಾಜ್ಯದ ಉನ್ನತ ಅಧಿಕಾರಿಗಳು ಕಾಲುವೆಗೆ ಬಂದು ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಮೀನಿನ ಶೇ 10ರಿಂದ 15 ರಷ್ಟು ಪ್ರದೇಶದಲ್ಲಿ ಮಾತ್ರ ಕಾಲುವೆ ಸೌಲಭ್ಯವಿದೆ. ಇನ್ನುಳಿದ ಶೇ 85ರಷ್ಟು ಪ್ರದೇಶದ ಸಾಗುವಳಿ ಭೂಮಿಗೆ ಬರ ಪರಿಹಾರ ನೀಡಿಲ್ಲ. ಅಧಿಕಾರಿಗಳು ಇದನ್ನು ಸರಿಪರಿಡಿಸಿ ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಕೆಲ ಪ್ರಭಾವಿ ವ್ಯಕ್ತಿಗಳ ಜಮೀನಿನಲ್ಲಿ ಕಾಲುವೆಗಳು ಹಾಯ್ದಿವೆ. ಅವರಿಗೆ ಸಂಪೂರ್ಣ ಪರಿಹಾರ ಬಂದಿದೆ. ಆದರೆ ಸಾಮಾನ್ಯರ ಬದುಕಿನ ಜತೆಗೆ ಆಟವಾಡುತ್ತಿದ್ದಾರೆ. ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳ ಲೋಪಗಳಿಂದ ಹಣ ಹಂಚಿಕೆಯಲ್ಲಿ ತಾರತಮ್ಯವಾಗಿದ್ದು, ಎಲ್ಲ ರೈತರಿಗೂ ಸಮನಾಗಿ ಪರಿಹಾರ ಒದಗಿಸಬೇಕು. ರೈತರು ಜಮೀನಿನಲ್ಲಿ ಬೆಳೆಯ ಆಧಾರದ ಮೇಲೆ ಪರಿಹಾರದ ಹಣವನ್ನು ಮಂಜೂರು ಮಾಡಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ನ್ಯಾಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಲಕ್ಷ್ಮೀಪುತ್ರ ಡಾಂಗೆ, ಭಾಗಣ್ಣ ಕುಂಬಾರ, ಸುರೇಶ ತೇಲಿ, ಮಲ್ಲನಗೌಡ ಪಾಟೀಲ, ಮಳೇಂದ್ರ ಡಾಂಗೆ, ಬಸವರಾಜ ಮ್ಯಾಳೇಸಿ, ಅನ್ನಪೂರ್ಣ ಡಾಂಗೆ, ಗಂಗೂಬಾಯಿ ಅಳ್ಳಗಿ, ಈರಣ್ಣಾ ದೊಡ್ಡಮನಿ, ಶಿರಾಜ ಅಫಜಲ, ಮೈಲಾರಿ ದೊಡ್ಡಮನಿ, ಇಲಿಯಾಸ್ ಅಫಜಲ, ಶರಣಗೌಡ ಮಾಲಿ ಪಾಟೀಲ, ಕಂಟೆಪ್ಪ ಹಂದಿಗನೂರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT