ಬುಧವಾರ, ಆಗಸ್ಟ್ 4, 2021
26 °C
ರಾಜ್ಯಕ್ಕೆ 29ನೇ ಸ್ಥಾನ ಪ‍ಡೆದ ಜಿಲ್ಲೆ, ಶೇ 58.27ರಷ್ಟು ಫಲಿತಾಂಶ ಸಾಧನೆ

ಪಿಯು ಫಲಿತಾಂಶದಲ್ಲಿ ಅಲ್ಪ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಈ ಬಾರಿ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶದಲ್ಲಿ ಜಿಲ್ಲೆಗೆ ಶೇ 58.27ರಷ್ಟು ಫಲಿತಾಂಶ ಬಂದಿದ್ದು, ರಾಜ್ಯಕ್ಕೆ 29ನೇ ಸ್ಥಾನ ಪಡೆದಿದೆ. ವಿಜ್ಞಾನ, ಕಲೆ ಹಾಗೂ ವಾಣಿಜ್ಯ ವಿಭಾಗಗಳಲ್ಲಿಯೂ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರೇ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ.

2019ರ ಸಾಲಿನಲ್ಲಿ ಕೂಡ ಜಿಲ್ಲೆಯು ಶೇ 56.09 ಫಲಿತಾಂಶದೊಂದಿಗೆ ರಾಜ್ಯಕ್ಕೆ 29ನೇ ಸ್ಥಾನವನ್ನೇ ಪಡೆದಿತ್ತು. ಆದರೆ, ಈ ಬಾರಿಯ ಫಲಿತಾಂಶದಲ್ಲಿ ಶೇ 2.18ರಷ್ಟು ಸುಧಾರಣೆ ಕಂಡಿದೆ.

ಪ್ರಸಕ್ತ ರೆಗ್ಯುಲರ್‌ ಪರೀಕ್ಷೆ ಬರೆದ ಒಟ್ಟು 22,636 ವಿದ್ಯಾರ್ಥಿಗಳಲ್ಲಿ 13,191 ಮಂದಿ ಪಾಸಾಗಿದ್ದಾರೆ. ಖಾಸಗಿಯಾಗಿ ಪರೀಕ್ಷೆ ಎದುರಿಸಿದ 1,312 ವಿದ್ಯಾರ್ಥಿಗಳಲ್ಲಿ 276 ಮಂದಿ ಮಾತ್ರ ಪಾಸಾಗಿದ್ದಾರೆ. ಮರು ಪರೀಕ್ಷೆ ಬರೆದ 5346 ವಿದ್ಯಾರ್ಥಿಗಳಲ್ಲಿ 1389 ಮಂದಿ ಪಾಸಾಗಿದ್ದಾರೆ. ರೆಗ್ಯುಲರ್‌, ರಿಪೀಟರ್ಸ್‌ ಹಾಗೂ ಖಾಸಗಿ ಸೇರಿ 29,294 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 12,013 ವಿದ್ಯಾರ್ಥಿಗಳು ಹಾಗೂ 14,281 ವಿದ್ಯಾರ್ಥಿನಿಯರು ಇದ್ದಾರೆ.

ಫಲಿತಾಂಶದಲ್ಲಿ ಈ ಬಾರಿ ಕೂಡ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಒಟ್ಟಾರೆ ಫಲಿತಾಂಶದ ಶೇಕ 55.71ರಷ್ಟು ವಿದ್ಯಾರ್ಥಿನಿಯರು ಹಾಗೂ 45.96ರ ವಿದ್ಯಾರ್ಥಿಗಳ ಸಾಧನೆ ಇದೆ.

ನಗರ– ಗ್ರಾಮೀಣ ಫಲಿತಾಂಶದಲ್ಲಿ ಅಂತರ ಕಡಿಮೆ: ಜಿಲ್ಲೆಯ ನಗರ– ಪಟ್ಟಣ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹೆಚ್ಚೇನೂ ವ್ಯತ್ಯಾಸ ಕಂಡುಬಂದಿಲ್ಲ.

ಪಟ್ಟಣದಲ್ಲಿ ಒಟ್ಟು ಶೇ 58.72 ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ 55.32 ದಾಖಲಾಗಿದೆ. ಪರೀಕ್ಷೆ ಬರೆದ ಹಳ್ಳಿಗಾಡಿನ 2942 ಮಕ್ಕಳಲ್ಲಿ 1,628 ಮಂದಿ ಪಾಸಾಗಿದ್ದಾರೆ.

ಕನ್ನಡ ಮಾಧ್ಯಮ; ಕಳಪೆ ಪ್ರದರ್ಶನ

ಜಿಲ್ಲೆಯಲ್ಲಿ ಕನ್ನಡ ಹಾಗೂ ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ತೆಗೆದುಕೊಂಡವರ ಸಂಖ್ಯೆ ಹೆಚ್ಚೂ–ಕಡಿಮೆ ಸಮನಾಗಿಯೇ ಇದೆ. ಆದರೆ, ಫಲಿತಾಂಶದಲ್ಲಿ ಮಾತ್ರ ಅಜ–ಗಜಾಂತರ ಕಂಡುಬಂದಿದೆ.

ಒಟ್ಟು 14,371 ಮಕ್ಕಳು ಇಂಗ್ಲಿಷ್‌ ಹಾಗೂ 14,923 ಮಕ್ಕಳು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದಾರೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಶೇ 62.17ರಷ್ಟು ಪಾಸಾಗಿದ್ದರೆ; ಕನ್ನಡ ಮಾಧ್ಯಮದಲ್ಲಿ ಕೇವಲ ಶೇ 39.16ರಷ್ಟು ಮಾತ್ರ ಸಾಧನೆ ಕಂಡುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.