ಶನಿವಾರ, ಸೆಪ್ಟೆಂಬರ್ 25, 2021
22 °C

ಬಾರದ ಮಳೆ; ಇಳುವರಿ ತಗ್ಗುವ ಭಯ

ಶಿವಾನಂದ ಹಸರಗುಂಡಗಿ Updated:

ಅಕ್ಷರ ಗಾತ್ರ : | |

Prajavani

 ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಮಳೆಯ ಕೊರತೆಯಿಂದ ಬಾಡುತ್ತಿದ್ದು, ರೈತರಲ್ಲಿ ಇಳುವರಿ ಕುಂಠಿತದ ಆತಂಕ ಮೂಡಿದೆ.

ಆರಂಭದಲ್ಲಿ ಉತ್ತಮ ಮಳೆಯಾಗಿ ಬಿತ್ತನೆಗೆ ಅನುಕೂಲವಾಗಿತ್ತು. ಹಲವು ಭಾಗಗಳಲ್ಲಿ ರೈತರು ಅಲ್ಪಾವಧಿ ಮತ್ತು ದೀರ್ಘಾವಧಿಯ ಬೆಳೆಗಳನ್ನು ಬೆಳೆದಿದ್ದರು. ಈಗ ಮಳೆ ಕ್ಷೀಣಿಸಿದ್ದರಿಂದ ಬೆಳೆಗಳು ಬಾಡುತ್ತಿವೆ. ಕೃಷಿಕರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಈ ಮುಂಗಾರು ಹಂಗಾಮಿನಲ್ಲಿ 2,315  ಹೆಕ್ಟೇರ್ ಏಕದಳ ಧಾನ್ಯ, 73,835 ಹೆಕ್ಟೇರ್ ಬೇಳೆಕಾಳು ಹಾಗೂ 23,557 ಹೆಕ್ಟೇರ್ ತೊಗರಿ ಬಿತ್ತನೆ ಯಾಗಿದೆ. 2,490 ಹೆಕ್ಟೇರ್ ಪೈಕಿ 132 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು ಬಿತ್ತನೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್. ಎಸ್.ಗಡಗಿಮನಿ ತಿಳಿಸಿದರು. 

ಸಕಾಲಕ್ಕೆ ಮಳೆಯಾಗದ ಕಾರಣ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಹವಾಮಾನ ಇಲಾಖೆ ಪ್ರಕಾರ ಆ.20ರ ಒಳಗೆ ಮಳೆ ಆಗಬಹುದು ಎಂದರು.

ಬಿತ್ತನೆಯಾದ ಸೂರ್ಯಕಾಂತಿ, ಹೆಸರು, ಮೆಕ್ಕೆಜೋಳ ಉತ್ತಮ ಬೆಳೆ ಬಂದಿದೆ. ಸದ್ಯಕ್ಕೆ ಹೆಸರು ಮತ್ತು ಉದ್ದು ಹೂವು ಕಾಯಿ ಕಟ್ಟುವ ಹಂತದಲ್ಲಿದ್ದು, ಸ್ವಲ್ಪ ಮಳೆಯಾದರೆ ಇಳುವರಿ ಹೆಚ್ಚಾಗಬಹುದು. ಒಂದುವರೆ ತಿಂಗಳು  ಕಳೆದರೂ ಮಳೆಯಾಗಿಲ್ಲ. ಬಹುತೇಕ ಬೆಳೆಗಳು ಬೆಳವಣಿಗೆ ಕುಂಠಿತವಾಗಿದೆ. ಎಕರೆವಾರು ಇಳುವರಿಯಲ್ಲಿ ಕಡಿಮೆಯಾಗಲಿದೆ. ಬೆಳೆಗಳಿಗೆ ಖರ್ಚು ಮಾಡಿದ ವೆಚ್ಚ ಸಹ ಬರುವುದಿಲ್ಲ’ ಎಂದು ರೈತರು ಅಲವತ್ತುಕೊಂಡರು.

ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕೆಲವೆಡೆ ಬೆಳೆಗೆ ತಕ್ಕ ಮಳೆಯಾಗಿದ್ದು ಬೆಳೆಗಳು ಚೆನ್ನಾಗಿವೆ. ಸೂರ್ಯಕಾಂತಿ ಬೆಳವಣಿಗೆ ಹಂತದಲ್ಲಿದೆ. ಮತ್ತೆ ಮಳೆ ಸುರಿದರೆ ಹೆಸರು ಮತ್ತು ಉದ್ದು ಬೆಳೆಗಳಿಗೆ ವರವಾಗಲಿದೆ. ಬೆಳೆಯಲ್ಲಿ ಕಳೆ ತೆಗೆದು ಎಡೆ ಹೊಡೆದು ಮಳೆಗಾಗಿ ಕಾಯುತ್ತಿದ್ದೇವೆ ಎಂದು ರೈತ ಸಿದ್ದರಾಮ ದಣ್ಣೂರ ತಿಳಿಸಿದರು.

15 ದಿನಗಳ ಹಿಂದೆ ಮಳೆಯಾಗಿದ್ದರೆ ಇಳುವರಿ ಚೆನ್ನಾಗಿ ಬರುತ್ತಿತ್ತು. ಆದರೆ ಸಕಾಲದಲ್ಲಿ ಮಳೆಯಾಗದ ಕಾರಣ ನಿರೀಕ್ಷಗೆ ತಕ್ಕಂತೆ ಸೂರ್ಯಕಾಂತಿ ಇಳುವರಿ ಬರುವುದಿಲ್ಲ ಎಂದು ರೈತ ಬಸವರಾಜ ಸೈಬಣ್ಣ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು