ಶನಿವಾರ, ಜುಲೈ 31, 2021
27 °C

ಕಲಬುರ್ಗಿ ಜಿಲ್ಲೆಯಲ್ಲಿ ಭಾರೀ ಮಳೆ ಸಂಭವ: 15ರ ವರೆಗೆ ಹೈಅಲರ್ಟ್ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ಇದೇ 15ರ ವರೆಗೆ ಭಾರೀ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾ ಆಡಳಿತ 15ರ ವರೆಗೆ ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಘೋಷಿಸಿದೆ.

ಪ್ರವಾಹ ಪರಿಸ್ಥಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್‌ ತಂಡಗಳನ್ನು ರಚಿಸಬೇಕು. ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದೆ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿ ನಿಭಾಯಿಸಬೇಕು ಎಂದು ಸೂಚಿಸಿದರು.

ಪ್ರವಾಹಕ್ಕೀಡಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿ, ಸರಿಯಾದ ಪ್ರಮಾಣದಲ್ಲಿ ಊಟ, ವಸತಿ, ವಿದ್ಯುತ್, ನೀರಿನ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಹಾಲು ಹಾಗೂ ಬಿಸ್ಕೆಟ್ ನೀಡಬೇಕು. ಹಾಲು ಪೂರೈಕೆಯಲ್ಲಿ ವಿಳಂಬವಾದರೆ ಹಾಲಿನ ಪೌಡರ್ ವ್ಯವಸ್ಥೆ ಸಹ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ಗರ್ಭಿಣಿಯರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗಳಲ್ಲಿ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಬೇಕು ಎಂದರು.

ಗ್ರಾಮಗಳಲ್ಲಿರುವ ಸಣ್ಣ-ಪುಟ್ಟ ನಾಲೆಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಬ್ಯಾರೇಜ್‍ಗಳ ಎಲ್ಲಾ ಗೇಟ್ ಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಮಾಹಿತಿ ಅರಿಯಬೇಕು. ಪ್ರತಿ ತಾಲ್ಲೂಕಿನಲ್ಲಿಯೂ ಒಂದೊಂದು ಜೆಸಿಬಿ ಯಂತ್ರ ಸನ್ನದ್ಧವಾಗಿರಿಸಬೇಕು. ಒಂದು ವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್, ವಿದ್ಯುತ್ ಸೇರಿದಂತೆ ಅತ್ಯಾವಶ್ಯಕ ಸೌಕರ್ಯಗಳನ್ನು ತಕ್ಷಣಕ್ಕೆ ಕಲ್ಪಿಸುವಂತಾಗಬೇಕು ಎಂದು ಹೇಳಿದರು.

ಉಪ ವಿಭಾಗಾಧಿಕಾರಿ, ತಹಶೀಲ್ದಾರರು, ಜೆಸ್ಕಾಂ, ಪೊಲೀಸ್‌, ಅಗ್ನಿಶಾಮಕ ಮುಂತಾದ ಇಲಾಖೆಗಳವರು ಪರಿಸ್ಥಿತಿಗೆ ಅನುಗುಣವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪ ವಿಭಾಗಾಧಿಕಾರಿಗಳಾದ ರಾಮಚಂದ್ರ ಗಡಾದೆ, ರಮೇಶ್ ಕೊಲ್ಹಾರ, ತಹಶೀಲ್ದಾರರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.  

ತುರ್ತು ಸ್ಪಂದನೆಗೆ ಸಹಾಯವಾಣಿ 

ಪ್ರವಾಹ ಸಂದರ್ಭದಲ್ಲಿ  ಜಿಲ್ಲೆಯ ಸಾರ್ವಜನಿಕರು ಹಾಗೂ ಬಾಧಿತ ವ್ಯಕ್ತಿಗಳು ತುರ್ತಾಗಿ ಸಹಾಯವಾಣಿ ಕೇಂದ್ರಗಳ ಮೊಬೈಲ್‌  7411896431, 7411896432 ಹಾಗೂ 7411896433 ಸಂಖ್ಯೆಗಳಿಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ನೀರಿನ ಒಳ ಹರಿವಿನ ರಭಸದಿಂದ ಭೀಮಾ ನದಿಯ ತೀರದ ಹಾಗೂ ಸನ್ನತಿ ಗ್ರಾಮದ ಬ್ರಿಡ್ಜ್-ಕಂ-ಬ್ಯಾರೇಜ್, ಬೆಣ್ಣೆತೊರಾ ಜಲಾಶಯ ಮತ್ತು ಕೆಳದಂಡೆ ಮುಲ್ಲಾಮಾರಿ ಜಲಾಶಯದ ಅಕ್ಕಪಕ್ಕದ ಗ್ರಾಮಗಳ ಜನರು ಹಾಗೂ ಜಾನುವಾರುಗಳ ಜೀವಕ್ಕೆ ಧಕ್ಕೆಯಾಗುವ ಸಾಧ್ಯತೆ ಇರುತ್ತದೆ. ಈ ನದಿ ದಡದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ಹಳ್ಳ, ನಾಲೆ, ನದಿ ಕಡೆ ಹೋಗದಂತೆ ಹಾಗೂ ಜಾನುವಾರುಗಳನ್ನು ನದಿ ತೀರದಲ್ಲಿ ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು