ಚಿಂಚೋಳಿ: ಪಟ್ಟಣದ ಹಳೇ ತಾಲ್ಲೂಕು ಆಸ್ಪತ್ರೆ ಜಾಗದಲ್ಲಿ ನಿರ್ಮಿಸುತ್ತಿರುವ ರಂಗಮಂದಿರ ಕಟ್ಟಡ 7 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಆಮೆ ನಡಿಗೆಗೆ ಸಾಕ್ಷಿಯಾಗಿದೆ.
ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್)ದಿಂದ ಕೆಕೆಆರ್‌ಡಿಬಿ ನೆರವಿನಲ್ಲಿ 2017-18ನೇ ಸಾಲಿನಲ್ಲಿ ಕೈಗೆತ್ತಿಕೊಂಡ ರಂಗಮಂದಿರ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಈಗ ಶೌಚಗೃಹವಾಗಿ ಬಳಕೆಯಾಗುತ್ತಿದೆ.
ಕಾಲಂಹಾಕಿ ಅರ್ಧ ನಿರ್ಮಿಸಿದ ಕಟ್ಟಡದ ಸುತ್ತಲೂ ಗಿಡಗಂಟೆ ಬೆಳೆದಿವೆ. ಅಸ್ತಿಪಂಜರದಂತೆ ಗೋಚರಿಸುತ್ತಿರುವ ಈ ಕಟ್ಟಡ ಅರ್ಧಕ್ಕೆ ನಿಂತಿರುವುದು ರಂಗಾಸಕ್ತರಲ್ಲಿ ನಿರಾಸೆ ಮೂಡಿಸಿದೆ. ಪಟ್ಟಣದಲ್ಲಿ ಸಭೆ ಸಮಾರಂಭ ನಡೆಸಲು ಸುಸಜ್ಜಿತ ಸಭಾಭವನವಿಲ್ಲದಿರುವುದು ಅರಿತು ಆರೋಗ್ಯ ಇಲಾಖೆಯ ಜಾಗ 99 ವರ್ಷ ಲೀಸ್ ಪಡೆದು ಪುರಸಭೆಯ ಮಾರಾಟ ಮಳಿಗೆ (ವಾಣಿಜ್ಯ ಸಂಕಿರ್ಣ) ಮತ್ತು ರಂಗಮಂದಿರ ನಿರ್ಮಾಣ ಕೆಕೆಆರ್‌ಡಿಬಿ ನೆರವಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಈ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟ ಹಣ ಕೆಆರ್‌ಐಡಿಎಲ್‌ನ ಅಧಿಕಾರಿಗಳು ಬೇರೆ ತಾಲ್ಲೂಕಿನ ಕಾಮಗಾರಿಗಳಿಗೆ ಬಳಸಿದ್ದರಿಂದ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ. ಆದರೆ ಬೇರೆ ತಾಲ್ಲೂಕಿನ ಕಾಮಗಾರಿಗೆ ಮೀಸಲಿಟ್ಟ ಅನುದಾನ ಎಲ್ಲಿ ಹೋಯಿತು? ಅಧಿಕಾರಿಗಳ ಇಂತಹ ಹೇಳಿಕೆಗೆ ನಂಬಬಹುದೆ ಎಂಬ ಪ್ರಶ್ನೆ ಜನರನ್ನು ಕಾಡತೊಡಗಿದೆ.
ಕೆಡಿಪಿ ಸಭೆಯಲ್ಲಿ ಈ ಕಟ್ಟಡ ಅರ್ಧಕ್ಕೆ ನಿಂತಿರುವ ಬಗ್ಗೆ ಹಲವು ಬಾರಿ ಶಾಸಕ ಡಾ.ಅವಿನಾಶ ಜಾಧವ ಪ್ರಶ್ನಿಸಿದರೂ ಶೀಘ್ರವೇ ಪ್ರಾರಂಭಿಸುತ್ತೇವೆ ಎಂಬ ಅಧಿಕಾರಿಗಳ ಸುಳ್ಳು ಭರವಸೆಯೇ ಸಾಧನೆಯಾಗಿ ಪರಿಣಮಿಸಿದೆ.
ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ ಅವಳಿ ಪಟ್ಟಣಗಳಾದ ಚಿಂಚೋಳಿ, ಚಂದಾಪುರ ಹಾಗೂ ಸಿದ್ಧಸಿರಿ ಬಡಾವಣೆ ಮತ್ತು ಭೋಗಾನಿಂಗದಳ್ಳಿ ಆಶ್ರಯ ಕಾಲೊನಿಗಳಿವೆ. ಒಟ್ಟು 23 ವಾರ್ಡ್‌ಗಳಿರುವ ಇಲ್ಲಿ 35ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಜನರ ಮನರಂಜನಾ ಚಟುವಟಿಕೆ, ಮಹಾಪುರುಷರ ಜಯಂತಿ ಹಾಗೂ ರಂಗಭೂಮಿ ಚಟುವಟಿಕೆಗಳು, ಸಭೆ ಸಮಾರಂಭ ನಡೆಸಲು ಸರ್ಕಾರದ ಕಟ್ಟಡವೇ ಇಲ್ಲ. ಖಾಸಗಿ ಕಟ್ಟಡವಿದ್ದರೂ ಒಂದು ದಿನಕ್ಕೆ ₹50 ಸಾವಿರದಿಂದ ₹75 ಸಾವಿರದವರೆಗೆ ಬಾಡಿಗೆ ಪಾವತಿಸಬೇಕು. ಇಷ್ಟು ಹಣ ಪಾವತಿಸುವ ಶಕ್ತಿ ಇಲ್ಲಿನ ಜನರಿಗಿಲ್ಲ. ಸರ್ಕಾರ ಬೇಗ ರಂಗಮಂದಿರ ಕಟ್ಟಡ ಪೂರ್ಣಗೊಳಿಸಬೇಕು ಎಂದು ರಂಗಭೂಮಿ ಹಿರಿಯ ಕಲಾವಿದ ಶಾಮರಾವ್ ಕೊರವಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.