ಭಾನುವಾರ, ಡಿಸೆಂಬರ್ 8, 2019
25 °C
ಜೇವರ್ಗಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

ವಿದ್ಯಾರ್ಥಿನಿ ಹತ್ಯೆ: ಉನ್ನತ ತನಿಖೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ‘ಯಡ್ರಾಮಿ ತಾಲ್ಲೂಕಿನ ಕುರಳಗೇರಾ ಗ್ರಾಮದ ವಿದ್ಯಾರ್ಥಿನಿ ಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಇಲ್ಲಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಹರನಾಳ ಮಾತನಾಡಿ, ‘ಹತ್ಯೆ ಪ್ರಕರಣದಲ್ಲಿ ಸಂಶಯವಿದೆ. ಇದು ಮರ್ಯಾದಾ ಹತ್ಯೆ ಎಂಬ ಶಂಕೆ ಇರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಬೇಕು. ವಿದ್ಯಾರ್ಥಿನಿ ಮೃತದೇಹವನ್ನು ಹೊರಗೆ ತೆಗೆದು ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಒಂದು ವರ್ಷದ ಹಿಂದೆ ಜುಮ್ಮಣ್ಣ ಎಂಬ ಮನೆ ಮುಂದೆ ಬೈಕ್‌ನಲ್ಲಿ ಬರುವಾಗ ಅವರ ತಂದೆ ಮತ್ತು ಅಣ್ಣ ತಡೆದು ನಿಲ್ಲಿಸಿ ಜುಮ್ಮಣ್ಣನ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಚಂದ್ರಶೇಖರ ಹರನಾಳ ಹೇಳಿದರು.

‘ವಿದ್ಯಾರ್ಥಿನಿ ಸಾವಿನ ಕುರಿತು ತಾಲ್ಲೂಕು ಪಂಚಾಯಿತಿಯ  ಕುರಳಗೇರಾ ಕ್ಷೇತ್ರದ ಸದಸ್ಯ ಮಲ್ಲಣ್ಣಗೌಡ ಪಾಟೀಲ ನಾಗರಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ದಲಿತ ಸಮುದಾಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಗೂಂಡಾವರ್ತನೆ ತೋರಿದ್ದಾರೆ. ಆದ್ದರಿಂದ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಅವರನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಎಲ್ಲಾ ಹಳ್ಳಿಗಳ ದಲಿತರ ಕೇರಿಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು’ ಎಂದು ಆಗ್ರಹಪಡಿಸಿದರು.

ಮೆರವಣಿಗೆ: ಇದಕ್ಕೂ ಮುಂಚೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನಸೌಧವರೆಗೆ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಸಿದ್ದರಾಯ ಭೋಸಗಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ದೌಲಪ್ಪ ಮದನ, ಪುಂಡಲೀಕ ಗಾಯಕವಾಡ, ಶ್ರೀಹರಿ ಕರಕಿಹಳ್ಳಿ, ಶಿವಕುಮಾರ ಗೋಲಾ, ಮಹೇಶ ಕೋಕಿಲೆ, ಸಿದ್ರಾಮ ಕಟ್ಟಿ, ಶ್ರೀಮಂತ ಧನಕರ, ರವಿ ಕುರಳಗೇರಾ, ಗುರಣ್ಣ ಐನಾಪುರ, ಶ್ರೀಕುಮಾರ ಕಟ್ಟಿಮನಿ, ಶಾಂತಪ್ಪ ಕಟ್ಟಮನಿ, ಮಲ್ಲಿಕಾರ್ಜುನ ಕೆಲ್ಲೂರ, ರಾಜಶೇಖರ ಶಿಲ್ಪಿ, ಸಿದ್ದಪ್ಪ ಆಲೂರ ಇದ್ದರು.

ಪ್ರತಿಕ್ರಿಯಿಸಿ (+)