ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಗಳಿಗೆ ದಾರಿ ಯಾವುದಯ್ಯಾ?

‘ನಮ್ಮ ಹೊಲ ನಮ್ಮ ದಾರಿ’ ಕಾಮಗಾರಿಗೆ ರೈತರ ಒತ್ತಾಯ
Last Updated 24 ಜನವರಿ 2023, 5:12 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ಹಲವಾರು ಗ್ರಾಮಗಳ ಜಮೀನುಗಳಿಗೆ ರಸ್ತೆಗಳು ಇಲ್ಲ. ಮಳೆ ಬಂದರೆ ಜಮೀನುಗಳಿಗೆ ಹೋಗಲು ಕಷ್ಟ ಪಡಬೇಕಾಗಿದೆ. ನರೇಗಾ ಯೋಜನೆಯಡಿ ನಮ್ಮ ಹೊಲಗಳಿಗೆ ದಾರಿ ನಿರ್ಮಿಸಲು ಹೆಚ್ಚಿನ ಒತ್ತು ನೀಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ತಾಲ್ಲೂಕಿನ 16 ಗ್ರಾಮ ಪಂಚಾಯಿತಿ, ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 164 ಗ್ರಾಮಗಳಲ್ಲಿ ನಮ್ಮ ಹೊಲ ನಮ್ಮ ದಾರಿಗೆ ಹೆಚ್ಚಿನ ಒತ್ತು ನೀಡದ ಕಾರಣ ಜಮೀನಿಗೆ ತೆರಳುವ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಸುಂಬಡ, ಯತ್ನಾಳ, ಕಡಕೋಳ, ಮಾಣಶಿವಣಗಿ, ಕೋಣಸಿರಸಗಿ, ಕುಕನೂರ, ಇಜೇರಿ, ಆಲೂರ, ಹಂಗರಗಾ(ಕೆ), ಯಾಳವಾರ, ಸೋಮನಾಥಹಳ್ಳಿ, ಸಾಥಖೇಡ, ಕರಕಿಹಳ್ಳಿ, ಯಲಗೋಡ, ದುಮ್ಮದ್ರಿ, ಮಳ್ಳಿ ನಾಗರಹಳ್ಳಿ, ಕುರಳಗೇರಾ, ಹಂಗರಗಾ(ಬಿ), ಮಂಗಳೂರ, ಶಿವಪುರ, ಬಳಬಟ್ಟಿ ಸೇರಿದಂತೆ ಬಹುತೇಕ ಗ್ರಾಮಗಳ ಜಮೀನಿನ ರಸ್ತೆ ಹದಗೆಟ್ಟಿವೆ.

ಇಲ್ಲಿನ ಜನರು ಗ್ರಾಮ ಪಂಚಾಯಿತಿಗಳಿಗೆ ಮನವಿ ಕೊಟ್ಟು ಹೈರಾಣಾಗಿದ್ದಾರೆ. ಇನ್ನೂ ಕೆಲವರು ಶಾಸಕರ ಗಮನಕ್ಕೂ ತಂದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸುಂಬಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಖಂಡಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರೆ ಹಣ ಸೇರಿಸಿ, ಸುಮಾರು ₹1.50 ಲಕ್ಷ ಖರ್ಚು ಮಾಡಿ, ಟ್ರ್ಯಾಕ್ಟರ್‌ ಮೂಲಕ 300 ಟ್ರಿಪ್ ಮರಮ್ ಹಾಕಿ ಜಮೀನಿನ ರಸ್ತೆ ಅಭಿವೃದ್ಧಿಪಡಿಸಿದ್ದಾರೆ.

ನಾವು ಇನ್ನು ಎಷ್ಟು ದಿನ ಈ ಕಂಟಿ, ತಗ್ಗು, ಗುಂಡಿ ರಸ್ತೆಯಲ್ಲೇ ಓಡಾಡಬೇಕು? ಕೆಲವು ಬಾರಿ ಜಮಿನೀಗೆ ಟ್ರ್ಯಾಕ್ಟರ್, ಎತ್ತಿನಗಾಡಿ ಹೋಗದೇ ಇರುವಾಗ ತೊಗರಿ, ಹತ್ತಿ, ಇನ್ನಿತರ ಬೆಳೆಗಳ ಚೀಲಗಳು ಮನೆಗೆ ತರಲು ಕಿ.ಮೀ.ಗಟ್ಟಲೆ ಹೊತ್ತು ನಡೆದಿದ್ದೇವೆ. ಈ ವರ್ಷ ಮಳೆ ಹೆಚ್ಚಾಗಿದ್ದರಿಂದ ಮುಳ್ಳು ಕಂಟಿಗಳು, ತಗ್ಗುಗುಂಡಿಗಳು ಹೆಚ್ಚಾಗಿಯೇ ನಿರ್ಮಾಣವಾಗಿವೆ.

ಗ್ರಾಮ ಪಂಚಾಯಿತಿಗಳಲ್ಲಿ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ರಸ್ತೆ ಅಭಿವೃದ್ಧಿ ಪಡಿಸುವ ಅವಕಾಶ ಇದ್ದರೂ, ಅಭಿವೃದ್ಧಿ ಕಾಣುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನರು ಪರದಾಡುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT