ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

4 ತಿಂಗಳಿಂದ ಪಿಡಿಒಗೆ ಸಿಗದ ಸಹಿ ಅಧಿಕಾರ

ಲಾಡ್ಲಾಪುರ: ಪಿಡಿಒ ಹಣಕಾಸು ಅಧಿಕಾರಕ್ಕೆ ಅಧ್ಯಕ್ಷರಿಂದ ಅಡ್ಡಿ
Published 27 ಜೂನ್ 2024, 4:44 IST
Last Updated 27 ಜೂನ್ 2024, 4:44 IST
ಅಕ್ಷರ ಗಾತ್ರ

ವಾಡಿ: ಗ್ರಾಮ ಪಂಚಾಯಿತಿ ಅಧ್ಯಕ್ಷರೊಬ್ಬರು ಕಳೆದ 3 ತಿಂಗಳಿನಿಂದ ಅಭಿವೃದ್ಧಿ ಅಧಿಕಾರಿಗೆ ಹಣಕಾಸು ವ್ಯವಹಾರದ ಜಂಟಿ ಖಾತೆಗೆ ಸಹಿ ಅಧಿಕಾರ ನೀಡದೇ ಸತಾಯಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರೇಶ ಪೂಜಾರಿ ಹಾಗೂ ಪಿಡಿಒ ಕಲ್ಯಾಣರಾವ ಕೊಳ್ಳದ ಅವರ ನಡುವಿನ ಹಗ್ಗ ಜಗ್ಗಾಟದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಅಧಿಕಾರಿ ತಮ್ಮ ಮೂಲ ಕರ್ತವ್ಯ ಸ್ಥಳಕ್ಕೆ ತೆರಳಬೇಕು ಎನ್ನುವ ಸರ್ಕಾರದ ಸುತ್ತೋಲೆ ಪ್ರಕಾರ ಕಲ್ಯಾಣರಾವ್ ಕೊಳ್ಳದ ಅವರು ಲಾಡ್ಲಾಪುರ ಗ್ರಾಮ ಪಂಚಾಯಿತಿಗೆ ಮಾರ್ಚ್ 25ರಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಹಣಕಾಸು ವ್ಯವಹಾರಕ್ಕೆ ಸಹಿ ಬದಲಾವಣೆ ಮಾಡುವಂತೆ ಪಿಡಿಒ, ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ. ಆದರೆ ಜಂಟಿ ಖಾತೆಯಲ್ಲಿನ ಹಳೆಯ ಪಿಡಿಒ ಸಹಿ ಬದಲಾವಣೆಗೆ ಅಧ್ಯಕ್ಷ ವೀರೇಶ ಪೂಜಾರಿ ಕ್ಯಾತೆ ತೆಗೆದಿದ್ದಾರೆ.

3 ತಿಂಗಳಿಂದ ಪಂಚಾಯತಿ ಆರ್ಥಿಕ ವ್ಯವಹಾರಕ್ಕೆ ತಡೆ ಬಿದ್ದಿದೆ. ‘ನಮಗೆ ಹಳೆ ಪಿಡಿಒ ಬೇಕು ನೀವು ಬೇಡ’ ಎಂದು ಅಧ್ಯಕ್ಷ ಪಟ್ಟು ಹಿಡಿದು ಕುಳಿತಿದ್ದರಿಂದ ಪಿಡಿಒ ಅವರ ಅಧಿಕಾರಕ್ಕೆ ಕತ್ತರಿ ಬಿದ್ದಿದೆ. ಹಣಕಾಸು ಅಧಿಕಾರ ಇಲ್ಲದೇ ಪಂಚಾಯತಿ ಕಾರ್ಯಾಲಯಕ್ಕೆ ಪ್ರತಿದಿನ ಬಂದು– ಹೋಗಿ ಮಾಡುತ್ತಿದ್ದಾರೆ.

ಅಭಿವೃದ್ಧಿ ಕೆಲಸಗಳಿಗೆ ತೀವ್ರ ಹಿನ್ನಡೆ: ಪಿಡಿಒ ಹಾಗೂ ಅಧ್ಯಕ್ಷರ ಶೀತಲ ಸಮರದಿಂದ ಅಭಿವೃದ್ಧಿ ಕೆಲಸ ನಿಂತು ನೀರಾಗಿವೆ. 15ನೇ ಹಣಕಾಸು ಯೋಜನೆ ಅಡಿ ಹಲವು ಸದಸ್ಯರು ತಮ್ಮ ಕೈಯಿಂದ ದುಡ್ಡು ಹಾಕಿ ಕೆಲಸ ಮಾಡಿದ್ದು ಹಣ ಕೈಸೇರದೆ ಪರದಾಡುತ್ತಿದ್ದಾರೆ. ಮನೆ ಹಾಗೂ ನಿವೇಶನಗಳ ಖಾತೆ ವರ್ಗಾವಣೆ, ತೆರಿಗೆ ಸಂಗ್ರಹ, ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನ ಹಾಗೂ ಪಂಚಾಯತಿ ಮಟ್ಟದ ಕೆಲಸ ಕಾರ್ಯಗಳು ಸಹಿತ ಎಲ್ಲಾ ಕಾರ್ಯಗಳು ಸಂಪೂರ್ಣ ನಿಂತು ಹೋಗಿವೆ.

ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಾಗರಿಕ ಸೇವೆಗಳನ್ನು ಹೊಸದಾಗಿ ಅಭಿವೃದ್ಧಿ ಪಡಿಸಿದಂತಹ ಪಂಚತಂತ್ರ-2.2 ತಂತ್ರಾಂಶದ ಮೂಲಕವೇ ಗ್ರಾಮ ಪಂಚಾಯಿತಿ ನಡೆಸಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆದರೆ ಅಧ್ಯಕ್ಷ, ಪಿಡಿಒ ಜಟಾಪಟಿಯಿಂದ ಲಾಡ್ಲಾಪುರ ಗ್ರಾಮದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದಿದೆ.

ನಾಗೇಂದ್ರಪ್ಪ ಮುಕ್ತೇದಾರ
ನಾಗೇಂದ್ರಪ್ಪ ಮುಕ್ತೇದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT