ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC ಪರೀಕ್ಷೆ–2: ನೋಂದಣಿಗಿಲ್ಲ ಫೇಲಾದವರ ಆಸಕ್ತಿ!

‘ಫಲಿತಾಂಶ ಸುಧಾರಣೆ’ಗೆ ಜಿಲ್ಲೆಯ 905 ವಿದ್ಯಾರ್ಥಿಗಳು ನೋಂದಣಿ
Published 14 ಜೂನ್ 2024, 7:14 IST
Last Updated 14 ಜೂನ್ 2024, 7:14 IST
ಅಕ್ಷರ ಗಾತ್ರ

ಕಲಬುರಗಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಇದೇ ಮೊದಲ ಬಾರಿಗೆ ಪರಿಚಯಿಸಿರುವ ‘ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–2’ ಅವಕಾಶ ಸದ್ಬಳಕೆಗೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಮುಂದಾಗಿಲ್ಲ.

ಶಿಕ್ಷಣ ಇಲಾಖೆಯ ಸಕಲ ಯತ್ನಗಳ ಹೊರತಾಗಿಯೂ ಖಾಸಗಿ, ಹಳೇ ವಿದ್ಯಾರ್ಥಿಗಳು ಸೇರಿದಂತೆ 4,400ಕ್ಕೂ ಹೆಚ್ಚು ಮಂದಿ ಎಸ್‌ಎಸ್ಎಲ್‌ಸಿ ಪಾಸಾಗಲು ಇರುವ ಎರಡನೇ ಪ್ರಯತ್ನದಿಂದ ಹಿಂದೆ ಸರಿದಿದ್ದಾರೆ.

ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯ 1,705 ಖಾಸಗಿ, 2,448 ಹಳೇ ವಿದ್ಯಾರ್ಥಿಗಳು ಸೇರಿದಂತೆ 48,334 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 42,275 ಅಭ್ಯರ್ಥಿಗಳಷ್ಟೇ ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 6,065 ಮಂದಿ ಗೈರಾಗಿದ್ದರು. ಪರೀಕ್ಷೆ ಹಾಜರಾದವರ ಪೈಕಿ 23,861 ವಿದ್ಯಾರ್ಥಿಗಳು ಪಾಸ್‌ ಆಗಿದ್ದರು. 18,414 ಅಭ್ಯರ್ಥಿಗಳು ಅನುತ್ತೀರ್ಣರಾಗಿದ್ದರು.

ಪರೀಕ್ಷೆ ಬರೆದರೂ ಫೇಲಾದವರು, ಹೆಸರು ನೋಂದಾಯಿಸಿಯೂ ಪರೀಕ್ಷೆಗೆ ಹಾಜರಾಗದವರ ಲೆಕ್ಕಹಾಕಿದರೆ ಒಟ್ಟು 24,400ಕ್ಕೂ ಅಧಿಕ ಮಂದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ಕ್ಕೆ ನೋಂದಾಯಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ಕ್ಕೆ ಒಟ್ಟಾರೆ 21,157 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಉತ್ತೀರ್ಣರಾಗಿ ಫಲಿತಾಂಶ ಸುಧಾರಣೆ ಬಯಸಿರುವ 905 ಅಭ್ಯರ್ಥಿಗಳೂ ಸೇರಿದ್ದಾರೆ.

ಖಾಸಗಿ ಅಭ್ಯರ್ಥಿಗಳ ನೋಂದಣಿ ಕುಸಿತ?: ಮಾರ್ಚ್‌ನಲ್ಲಿ ನಡೆದ ಪರೀಕ್ಷೆಗೆ 1,700ಕ್ಕೂ ಹೆಚ್ಚು ಖಾಸಗಿ ಹಾಗೂ 2,400ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಎರಡನೇ ಪರೀಕ್ಷೆಗೆ ಕೇವಲ 136 ಖಾಸಗಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಮತ್ತೊಂದೆಡೆ, ‘ಮಾರ್ಚ್‌–ಏಪ್ರಿಲ್‌ನಲ್ಲಿ ನಡೆದ ಪರೀಕ್ಷೆಯಂತೆಯೇ ಈ ಬಾರಿಯೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ ಹಾಗೂ ಮೂರನೇ ಪ್ರಯತ್ನಕ್ಕೆ ಇರುವ ಅವಕಾಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ಗೆ ಕೆಲವರು ಆಸಕ್ತಿ ತೋರಿದಂತಿಲ್ಲ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಅನುತ್ತೀರ್ಣರಾದ ರೆಗ್ಯುಲರ್‌ ವಿದ್ಯಾರ್ಥಿಗಳ ಪೈಕಿ ಬಹುತೇಕ ಮಂದಿ ಪರೀಕ್ಷೆ–2ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಹಲವು ಖಾಸಗಿ ಅಭ್ಯರ್ಥಿಗಳು ಹಳೇ ವಿದ್ಯಾರ್ಥಿಗಳು ನೋಂದಣಿಯಿಂದ ಹೊರಗುಳಿದಿರಬೇಕು.

-ಸಕ್ರೆಪ್ಪಗೌಡ ಬಿರಾದಾರ ಡಿಡಿಪಿಐ

‘ಸುಧಾರಣೆ’ಗಾಗಿ ಮತ್ತೆ ಪರೀಕ್ಷೆಗೆ ಅಣಿ ಇದೇ ಮೊದಲ ಬಾರಿಗೆ ಪರಿಚಯಿಸಿರುವ ಫಲಿತಾಂಶ ವೃದ್ಧಿಸಿಕೊಳ್ಳುವ ಅವಕಾಶಕ್ಕೆ ಜಿಲ್ಲೆಯ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–1ರಲ್ಲಿ ತೇರ್ಗಡೆಯಾಗಿರುವ ಜಿಲ್ಲೆಯ ವಿವಿಧ ಶೈಕ್ಷಣಿಕ ವಲಯಗಳ 905 ಮಕ್ಕಳು ಫಲಿತಾಂಶ ವೃದ್ಧಿಗಾಗಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ–2ಕ್ಕೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಳಂದ ವಲಯದಿಂದ ಗರಿಷ್ಠ 232 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಸೇಡಂ ಶೈಕ್ಷಣಿಕ ವಲಯದಿಂದ ಕನಿಷ್ಠ 70 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಎಸ್‌ಎಸ್ಎಲ್‌ಸಿ ಪರೀಕ್ಷೆ ಇಂದಿನಿಂದ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಶುಕ್ರವಾರ ಆರಂಭವಾಗಲಿದ್ದು ಜೂನ್‌ 22ರ ತನಕ ನಡೆಯಲಿವೆ. ಇದಕ್ಕಾಗಿ ಜಿಲ್ಲೆಯಲ್ಲಿ 60 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ ಏಳು ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಈ ಪರೀಕ್ಷೆಯೂ ವೆಬ್‌ಕಾಸ್ಟಿಂಗ್‌ ನಿಗಾದಲ್ಲಿಯೇ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT