ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ತಡವಾಗಿ ವಿತರಣೆ: ಬಿಇಒಗೆ ದೂರು

Published 25 ಮಾರ್ಚ್ 2024, 12:40 IST
Last Updated 25 ಮಾರ್ಚ್ 2024, 12:40 IST
ಅಕ್ಷರ ಗಾತ್ರ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಚೌಡಾಪುರ ಗ್ರಾಮದ ವಿಎಲ್ ಭಟ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಪ್ರಥಮ ಭಾಷೆಯ ಪ್ರಶ್ನೆ ಪತ್ರಿಕೆಯನ್ನು 15 ನಿಮಿಷ ತಡವಾಗಿ ವಿತರಿಸಲಾಗಿದೆ.

ಬೆಳಿಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು, ಪ್ರಶ್ನೆ ಪತ್ರಿಕೆ ಓದಿಕೊಳ್ಳಲು 15 ನಿಮಿಷ ಮುಂಚಿತವಾಗಿ ನೀಡಬೇಕು. ಆದರೆ, ವಿಎಲ್ ಭಟ್ ಶಾಲೆಯ ಪರೀಕ್ಷಾ ಕೇಂದ್ರದ ಕೆಲವು ಕೋಣೆಗಳ ಮಕ್ಕಳಿಗೆ ತಡವಾಗಿ ಪ್ರಶ್ನೆ ಪತ್ರಿಕಗಳನ್ನು ವಿತರಣೆ ಮಾಡಲಾಗಿದೆ. ಪರೀಕ್ಷೆ ಮುಗಿಸಿಕೊಂಡು ಕಣ್ಣೀರು ಹಾಕುತ್ತಾ ಹೊರಬರುತ್ತಿದ್ದಂತೆ ಅವರ ಪೋಷಕರು ಆತಂಕ ವ್ಯಕ್ತಪಡಿಸಿದರು. ವಿಳಂಬಕ್ಕೆ ಕಾರಣ ನೀಡುವಂತೆ ಒತ್ತಾಯಿಸಿ ಸುಮಾರು 30 ಪೋಷಕರು ಕೇಂದ್ರದ ಮುಂದೆ ಜಮಾಯಿಸಿದರು.

‘ಮಕ್ಕಳು ಕಣ್ಣೀರು ಸುರಿಸುತ್ತಾ ಹೊರಬರುವುದನ್ನು ನೋಡಿ ಆತಂಕವಾಯಿತು. ಅವರನ್ನು ಸಮಾಧಾನಪಡಿಸಿದಾಗ ತಡವಾಗಿ ಪ್ರಶ್ನೆ ಪತ್ರಿಕೆ ಕೊಟ್ಟು, ನಿಗದಿತ ಅವಧಿಗೆ ವಾಪಸ್ ಪಡೆದಿರುವುದಾಗಿ ಅಳುತ್ತಾ ಹೇಳಿದರು’ ಎಂದು ಪೋಷಕ ನಾಗು ತಿಳಿಸಿದರು.

‘ಸಮಯ ಬೆಳಿಗ್ಗೆ 10.16 ದಾಟುತ್ತಿದ್ದರು ಪ್ರಶ್ನೆ ಪತ್ರಿಕೆಗಳು ಕೊಡಲಿಲ್ಲ. ಪ್ರಶ್ನೆ ಪತ್ರಿಕೆ ಕೇಳಿದ ಮಕ್ಕಳಿಗೆ, ‘ಏನು ಪ್ರಶ್ನೆಗಳನ್ನು ಓದುತ್ತೀರಾ? ಪ್ರಶ್ನೆ ಪತ್ರಿಕೆ ಕೊಟ್ಟ ಮೇಲೆ ಸುಮ್ಮನೆ ಉತ್ತರ ಬರೆಯಿರಿ’ ಎಂದ ರೂಂ ಸೂಪರ್‌ವೈಸರ್‌ ಪ್ರಶ್ನೆ ಪತ್ರಿಕೆ ಕೊಡಲಿಲ್ಲ. ಮಕ್ಕಳ ಒತ್ತಡ ಹೆಚ್ಚಾದ ಬಳಿಕ, ಕೊನೆಯಲ್ಲಿ ಹೆಚ್ಚುವರು ಸಮಯ ಕೊಡುವುದಾಗಿ ಭರವಸೆ ನೀಡಿದರು. ಆದರೆ, ಪರೀಕ್ಷೆ ಮುಕ್ತಾಯದ ಬೆಲ್‌ ಹೊಡೆಯುತ್ತಿದ್ದಂತೆ ಉತ್ತರ ಪತ್ರಿಕೆಗಳನ್ನು ಪಡೆದುಕೊಂಡು ಹೊರ ಕಳುಹಿಸಿದರು. ಹೆಚ್ಚುವರಿ ಸಮಯ ಕೊಡಲಿಲ್ಲ’ ಎಂದು ಆರೋಪಿಸಿದರು.

‘ಶಾಲಾ ಕಟ್ಟಡವು ನಾಲ್ಕು ಹಂತಸ್ತಿನಿಂದ ಕೂಡಿದ್ದು, ಮಕ್ಕಳಿಗೆ ಕುಡಿಯುವ ನೀರು ಪೂರೈಸಲು ಇಬ್ಬರನ್ನು ನಿಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಚೀಟಿ ಕೊಡುವ ಶಂಕೆಯಿಂದ ಆ ಇಬ್ಬರಿಗೂ ನೀರು ಪೂರೈಸಲು ಕೇಂದ್ರದ ಉಸ್ತುವಾರಿ ಹೊತ್ತವರು ಅನುಮತಿಸಲಿಲ್ಲ. ನೆಲ ಮಹಡಿಗೆ ಬಂದು ನೀರು ಕುಡಿಯಲು ಸಹ ಮಕ್ಕಳಿಗೆ ಅವಕಾಶ ಕೊಡಲಿಲ್ಲ ಎಂದು ಮನೆಗೆ ಬಂದ ಅಲವತ್ತುಕೊಂಡು ಹೇಳಿದ್ದಾರೆ’ ಎಂದು ಮತ್ತೊಬ್ಬ ಪೋಷಕರು ದೂರಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅಫಜಲಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಮೊಹಮದ್ ಅಲಿ ಖಾಸಿಂ, ‘ಪೋಷಕರಿಂದ ತಡವಾಗಿ ಪ್ರಶ್ನೆ ಪತ್ರಿಕೆ ವಿತರಣೆ ಮಾಡಲಾಗಿದೆ ಎಂಬ ದೂರು ಬರುತ್ತಿದ್ದಂತೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಾಗಿದೆ. ಕೇಂದ್ರದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಸತ್ಯಾಸತ್ಯತೆಯನ್ನು ಪತ್ತೆಹಚ್ಚಿ, ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT