ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳುವಾಗಿದ್ದ ಲಾರಿ ಹುಮನಾಬಾದ್‌ನಲ್ಲಿ ಪತ್ತೆ

Published 21 ಜುಲೈ 2023, 5:32 IST
Last Updated 21 ಜುಲೈ 2023, 5:32 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕೆ.ಕೆ. ನಗರದ ನಿವಾಸಿ ಹುಲಿರಾಜ ಕಾಜಳೆ ಎಂಬುವವರಿಗೆ ಸೇರಿದ್ದ ಮಹಾರಾಷ್ಟ್ರ ನೋಂದಣಿಯುಳ್ಳ ಲಾರಿ ಇತ್ತೀಚೆಗೆ ಕಳುವಾಗಿದ್ದು, ಅದನ್ನು ಉಪನಗರ ಠಾಣೆ ಪೊಲೀಸರು ಹುಮನಾಬಾದ್‌ನಲ್ಲಿ ಪತ್ತೆ ಹಚ್ಚಿ ಅದನ್ನು ವಾರಸುದಾರರಿಗೆ ನೀಡಿದ್ದಾರೆ.

ಕಲಬುರಗಿಯ ರಾಮನಗರದಲ್ಲಿ ಲಾರಿ ನಿಲ್ಲಿಸಿ ಹೋಗಿದ್ದರು. ವಾಪಸ್ ಬಂದು ನೋಡುವಷ್ಟರಲ್ಲಿ ಲಾರಿ ಇರಲಿಲ್ಲ. ಈ ಬಗ್ಗೆ ದೂರು ನೀಡಿದಾಗ ಕಾರ್ಯಪ್ರವೃತ್ತರಾದ ಉಪನಗರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ ಕಾಂಬಳೆ ನೇತೃತ್ವದ ಪೊಲೀಸರ ತಂಡ ಹುಮನಾಬಾದ್‌ನಲ್ಲಿ ಲಾರಿ ಪತ್ತೆ ಹಚ್ಚಿತು.

₹ 3.69 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕಲಬುರಗಿ: ಇಲ್ಲಿನ ಗುಬ್ಬಿ ಕಾಲೊನಿಯಲ್ಲಿ ಸಚಿನ್ ಕೊಂಗೆ ಎಂಬುವವರು ಬಾಡಿಗೆಗಿದ್ದ ಮನೆಯ ಕಿಟಕಿಯನ್ನು ಮುರಿದು ಪ್ರವೇಶ ಮಾಡಿದ ಕಳ್ಳರು 81 ಗ್ರಾಂ ಚಿನ್ನದ ಆಭರಣ ಹಾಗೂ 210 ಗ್ರಾಂ ಬೆಳ್ಳಿಯ ಆಭರಣ ಸೇರಿದಂತೆ ಒಟ್ಟು ₹ 3.69 ಲಕ್ಷದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಗುರುವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಮ್‌ನಲ್ಲಿ ಆಲ್ಮೇರಾದಲ್ಲಿ ಇಟ್ಟಿದ್ದ 24 ಗ್ರಾಂ ಚಿನ್ನದ ಚೈನ್, 12 ಗ್ರಾಂ ಚಿನ್ನದ ನೆಕ್ಲೇಸ್, 12 ಗ್ರಾಂ ಚಿನ್ನದ ಚೈನ್, 15 ಗ್ರಾಂ ಚಿನ್ನದ ಚೈನ್, 8 ಗ್ರಾಂ ಚಿನ್ನದ ಕಿವಿಯೋಲೆ, 10 ಗ್ರಾಂನ ನಾಲ್ಕು ಚಿನ್ನರ ಉಂಗುರಗಳು, 50 ಗ್ರಾಂ ಬೆಳ್ಳಿಯ ಲಕ್ಷ್ಮಿ ಮುಖ, 30 ಗ್ರಾಂ ಬೆಳ್ಳಿಯ ಉಡುದಾರ, 90 ಗ್ರಾಂ ಬೆಳ್ಳಿಯ ಓಲೆ, 40 ಗ್ರಾಂ ಬೆಳ್ಳಿಯ ಚೈನ್ ಹಾಗೂ ₹ 18 ಸಾವಿರ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಈ ಕುರಿತು ಸಚಿನ್ ಅವರು ಎಂ.ಬಿ. ನಗರ ಠಾಣೆಗೆ ದೂರು ನೀಡಿದ್ದಾರೆ.

ಇಸ್ಪೀಟ್ ಜೂಜಾಟ: ₹ 20,490 ವಶ

ಕಲಬುರಗಿ: ನಗರದ ಶಹಾಬಜಾರ್‌ನ ಲಾಲ ಹನುಮಾನ್ ಗುಡಿ ಬಳಿಯ ಖುಲ್ಲಾ ಜಾಗದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರನ್ನು ಬಂಧಿಸಿರುವ ಚೌಕ ಠಾಣೆ ಪೊಲೀಸರು ಅವರಿಂದ ₹ 20,490 ಹಣವನ್ನು ವಶಪಡಿಸಿಕೊಂಡಿದ್ದಾರೆ.

ಗಾಜಿಪುರದ ನಿವಾಸಿ ಅಖಿಲೇಶ ಭೋವಿ, ಶಹಾಬಜಾರ್ ಕಟಗರಪುರದ ಸುನಿಲ್ ವಿಷ್ಣುಸಿಂಗ್ ಠಾಕೂರ್, ಶಹಾಬಜಾರ್‌ನ ಮರಗಮ್ಮನಗುಡಿ ಬಳಿಯ ನಿವಾಸಿ ಪ್ರವೀಣ ಜಂತೆ, ಮಕ್ತಂಪೂರ ನಿವಾಸಿ ನಾಗರಾಜ ಶರಣಯ್ಯ ಹಿರೇಮಠ, ಶಹಾಬಜಾರ್‌ನ ಸಂತೋಷ ತಿವಾರಿ, ಸಿದ್ದಪ್ಪ ಮೆಂತೆ, ಮರಗಮ್ಮನ ಗುಡಿ ಹತ್ತಿರದ ನಿವಾಸಿ ಸಂತೋಷ ಜಮಾದಾರ ಎಂಬುವವರೇ ಬಂಧಿತರು.

ಇಬ್ಬರು ಮಟ್ಕಾ ಬುಕ್ಕಿಗಳ ಬಂಧನ

ಕಲಬುರಗಿ: ಉಪನಗರ ಠಾಣೆ ವ್ಯಾಪ್ತಿಯ ಕಾಕಡೆ ಚೌಕ್ ಬಳಿ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದ ಮಿಲ್ಲತ್ ನಗರದ ನಿವಾಸಿ ಮಸ್ತಾನ್ ಮೆಹಬೂಬ್‌ಸಾಬ್ ಹಾಗೂ ಗುರುನಾಥ ಬೂಗೆ ಎಂಬುವವರನ್ನು ಬಂಧಿಸಿದ್ದಾರೆ.

ಮಸ್ತಾನ್‌ ಬಳಿ ₹ 2070 ನಗದು ಸಿಕ್ಕಿದೆ. ಈತ ಮಟ್ಕಾ ಚೀಟಿಗಳನ್ನು ಗುರುನಾಥನಿಗೆ ತಲುಪಿಸುತ್ತಿದ್ದ ಎಂದು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ.

ವೇಶ್ಯಾವಾಟಿಕೆ: ಮೂವರ ಬಂಧನ

ಕಲಬುರಗಿ: ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದ ನಗರದ ರಾಮಮಂದಿರದ ವೃತ್ತದ ಬಳಿಯ ಅಶೀರ್ವಾದ ಲಾಡ್ಜ್‌ನ ವ್ಯವಸ್ಥಾಪಕ ರಾಜುಗೌಡ ಮಾಲಿಪಾಟೀಲ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ವಿದ್ಯಾರಾಜ ಚಾರಿ, ದೇವರಾಜ ಅರಳಿ ಎಂಬುವವರನ್ನು ವಶಕ್ಕೆ ‍ಪಡೆದಿರುವ ಸಿಸಿಬಿ ಘಟಕದ ಎಸಿಪಿ ಸಂತೋಷ ಬನ್ನಟ್ಟಿ ನೇತೃತ್ವದ ಪೊಲೀಸರ ತಂಡ ಇಬ್ಬರು ಮಹಿಳೆಯರನ್ನು ರಕ್ಷಿಸಿದೆ.

ಖಚಿತ ಮಾಹಿತಿ ಮೇರೆಗೆ ಬುಧವಾರ ಸಂಜೆ ದಾಳಿ ಮಾಡಿದಾಗ ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಗೊತ್ತಾಯಿತು.

ಸಂತ್ರಸ್ತ ಮಹಿಳೆಯರನ್ನು ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT