ಮಂಗಳವಾರ, ಜೂನ್ 15, 2021
21 °C
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ಕಾಯ್ದೆ ತಿದ್ದುಪಡಿಯಿಂದ ರೈತ ಸಂಕುಲಕ್ಕೆ ಅಪಾಯ :ಕೋಡಿಹಳ್ಳಿ ಚಂದ್ರಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೃಷಿ ಹಾಗೂ ಭೂಮಿಗೆ ಸಂಬಂಧಿಸಿದ ಮಹತ್ವದ ಕಾಯ್ದೆಗಳಿಗೆ ತಿದ್ದುಪಡಿ ಮಾಡಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಚರ್ಚಿಸದೆ ಜಾರಿಗೊಳಿಸುತ್ತಿದ್ದು, ಇದು ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುವ ಅಪಾಯಕ್ಕೆ ದಾರಿ ಮಾಡಿಕೊಡಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು.

‘ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಕಾಯ್ದೆ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಸರ್ಕಾರಗಳು ವಾಪಸ್ ಪಡೆಯಬೇಕು. ಈ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟ ರೂಪಿಸಬೇಕಾಗುತ್ತಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

ಕೋವಿಡ್–19 ಸೋಂಕಿನ ಹೆಸರಿನಲ್ಲಿ ಜನರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೀತಿಯನ್ನುಂಟು ಮಾಡಿವೆ. ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ, ಮನೆಯಲ್ಲಿಯೇ ಇರಿ ಎಂದು ಹೇಳಿ ಜನರನ್ನು ಮನೆಯಲ್ಲಿ ಕೂಡಿ ಹಾಕಿ ದೊಡ್ಡ ಸಮಸ್ಯೆಯನ್ನೇ ನಿರ್ಮಾಣ ಮಾಡಿವೆ. ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿ ಅನ್ನದ ಅಕ್ಷಯ ಬಟ್ಟಲು ಕೃಷಿ ಭೂವಿಯನ್ನು ಕಾರ್ಪೊರೇಟ್‍ಗಳ ಕೈಗೆ ನೀಡಲು ಸರ್ಕಾರಗಳು ಹೊರಟಿದ್ದು, ರೈತರ ಬಾಯಿಗೆ ಮಣ್ಣು ಹಾಕುತ್ತಿವೆ ಎಂದು ಟೀಕಿಸಿದರು. 

ಎಪಿಎಂಪಿ ಕಾಯ್ದೆಗೆ ತರಾತುರಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಕೃಷಿ ಮಾರುಕಟ್ಟೆ ರೈತರಿಂದ ಕೈತಪ್ಪಿ ಹೋಗಲಿದೆ. ಇಲ್ಲೂ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಹೊರಟಿದೆ. ಈ ಹಿಂದೆ ಡಾ.ಮನಮೋಹನ್ ಸಿಂಗ್ ಸರ್ಕಾರ ರೈತರು ಮತ್ತು ಜನರ ಭಯದಿಂದ ಎಪಿಎಂಪಿ ಕಾಯ್ದೆಯನ್ನು ಮುಟ್ಟಿರಲಿಲ್ಲ. ಆದರೆ, ರೈತರನ್ನೂ ಲೆಕ್ಕಿಸದೆ ಮೋದಿ ಸರ್ಕಾರ ಎಪಿಎಂಪಿ ತಿದ್ದುಪಡಿ ಕಾಯ್ದೆ ಜಾರಿ ಮಾಡುತ್ತಿದೆ. ಇದರಿಂದ ಎಂಪಿಎಂಸಿಗಳೇ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಹರಿಹಾಯ್ದರು. 

ವಿದ್ಯುತ್ ಕಾಯ್ದೆಗೂ ತಿದ್ದುಪಡಿ ತರುವುದರ ಮೂಲಕ ವಿದ್ಯುತ್ ಖಾಸಗೀಕರಣ ಮಾಡಲು ಹೊರಟಿದೆ. ರೈಲು, ಜೀವ ವಿಮೆ, ತೈಲ ಕಂಪನಿಗಳು ಸೇರಿ ಹಲವು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರ ಕೈಗಿಡಲಾಗುತ್ತಿದೆ. ಯಾವುದೇ ಕಾಯ್ದೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸಂಸತ್ತು ಹಾಗೂ ವಿಧಾನ ಸಭೆಗಳಲ್ಲಿ ಚರ್ಚೆಯಾಗಬೇಕಾದ ವಿಷಯಯನ್ನೂ ಮಂಡಿಸಿದೆ ಸರ್ವಾಧಿಕಾರಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಮಸ್ಯೆ ಸಿಲುಕಿರುವ ಜನರು, ರೈತರ ನೆರವಿಗೆ ಸರ್ಕಾರ ತಕ್ಷಣವೇ ಧಾವಿಸಬೇಕು. ಬೆಳೆಹಾನಿಯಾದ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು‌ ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.