ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಈ ಊರಲ್ಲಿ ನಡೆದಿಲ್ಲ ಉದ್ಯೋಗ ಖಾತ್ರಿ

ದೊಡ್ಡ ಹೋಬಳಿ ಕೇಂದ್ರದಲ್ಲಿ ಸರ್ಕಾರಿ ಜಾಗವೇ ಇಲ್ಲ, ಬದು ನಿರ್ಮಾಣಕ್ಕೆ ಮಾತ್ರ ಗ್ರಾಮ ಪಂಚಾಯಿತಿ ಸೀಮಿತ
Last Updated 27 ಜುಲೈ 2021, 4:37 IST
ಅಕ್ಷರ ಗಾತ್ರ

ಕಲಬುರ್ಗಿ: ‘15 ವರ್ಷಗಳಿಂದ ಊರಿನಲ್ಲಿ ನರೇಗಾ ಕಾಮಗಾರಿಯೇ ನಡೆದಿಲ್ಲ. ನಾವೆಲ್ಲ ಜಾಬ್‌ಕಾರ್ಡ್‌ ಮಾಡಿಸಿದರೂ ಕೆಲಸ ನೀಡಿಲ್ಲ. ಮಳೆಗಾಲದಲ್ಲಿ ಹೇಗೋ ಕೃಷಿ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತೇವೆ. ಆದರೆ, ಬೇಸಿಗೆಯಲ್ಲಿ ಕೆಲಸವಿದಲ್ಲದೇ ಪರದಾಡುವಂತಾಗುತ್ತದೆ...’

ತಾಲ್ಲೂಕಿನ ಫಿರೋಜಾಬಾದ್‌ ಗ್ರಾಮದ ರತ್ನವ್ವ ಅವರು ‘ಪ್ರಜಾವಾಣಿ’ ಮುಂದೆ ತಮ್ಮ ಸಂಕಷ್ಟ ಹೇಳಿಕೊಂಡಿದ್ದು ಹೀಗೆ. ಅವರ ಪತಿ ಹಾಗೂ ಪುತ್ರ ಕಲಬುರ್ಗಿಯಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಗ್ರಾಮದಲ್ಲೇ ಕೆಲಸ ಸಿಕ್ಕರೆ ತಮ್ಮ ಕಷ್ಟ ದೂರವಾಗುತ್ತದೆ ಎನ್ನುವುದು ಅವರ ಬಯಕೆ.

ಈ ಊರಿನಲ್ಲಿ ಸರ್ಕಾರಿ ಜಾಗವೇ ಇಲ್ಲ. ಕೆರೆ, ಕಟ್ಟೆ, ನಾಲೆ ನಿರ್ಮಾಣ, ಟ್ರಂಚ್, ಸಸಿ ನಾಟಿ ಸೇರಿದಂತೆ ಯಾವುದೇ ಕೆಲಸ ನಡೆ ಸಲು ಅವಕಾಶವಿಲ್ಲ. ಒಂದೂವರೆ ದಶಕದಿಂದ ಹೊಲಗಳ ಬದು ನಿರ್ಮಾಣದಂಥ ಸಣ್ಣಪುಟ್ಟ ಕೆಲಸ ಬಿಟ್ಟರೆ ಉದ್ಯೋಗ ಖಾತ್ರಿ ಅಡಿ ಹೇಳಿಕೊಳ್ಳುವಂಥ ಕೆಲಸವೂ ಆಗಿಲ್ಲ.

ದೊಡ್ಡ ಹೋಬಳಿ ಕೇಂದ್ರವಾದ ಈ ಗ್ರಾಮ ಸದ್ಯ ಹಳೆಫೀರೋಜಾಭಾದ್‌, ಪೇಟೆಫಿರೋಜಾಬಾದ್‌, ಹೊಸಊರು ಸೇರಿ ಮೂರು ಭಾಗಗಳಾಗಿ ವಿಭಾಗವಾಗಿದೆ.ನಡುವಿನಹಲ್ಳಿ, ಸೋಮನಾಥಹಳ್ಳಿ ಕೂಡ ಇದೇ ಪಂಚಾಯಿತಿಗೆ ಬರುತ್ತವೆ. ಒಟ್ಟಾರೆ 9500ಕ್ಕೂ ಹೆಚ್ಚು ಜನಸಂಖ್ಯೆ ಇದೆ.

ಕಿರಿದಾದ ರಸ್ತೆ, ತುಂಬಿಕೊಂಡ ಚರಂಡಿ: ಹಳೆ ಊರಿನ ಬಹುಪಾಲು ರಸ್ತೆಗಳು ಮೂರರಿಂದ ಐದು ಅಡಿಯಷ್ಟು ಮಾತ್ರ ಅಗಲ ಇವೆ. ಅಲ್ಲಿ ಸಿಮೆಂಟ್‌ ರಸ್ತೆ ಹಾಕಲಾಗಿದೆ. ಆದರೆ, ಚರಂಡಿ ನೀರು ಹರಿಯಲು ಸಣ್ಣ ಸಂದಿ ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗಿಲ್ಲ. ತುಸು ಅಗಲವಾದ ರಸ್ತೆಗಳಲ್ಲಿ ಚರಂಡಿಗಳಿದ್ದರೂ ಹೂಳು ತುಂಬಿದ್ದರಿಂದ ಅಲ್ಲಲ್ಲಿ ತ್ಯಾಜ್ಯ ಕಟ್ಟಿಕೊಂಡಿದೆ. ಎತ್ತಿನಬಂಡಿ, ಆಟೊ, ಕಾರ್‌ ದಾಟಲಾಗದಂಥ ರಸ್ತೆಗಳೂ ಇಲ್ಲಿ ಹೆಚ್ಚಿವೆ.

ಕೆಲ ವರ್ಷಗಳ ಹಿಂದೆ ₹ 75 ಲಕ್ಷ ವೆಚ್ಚ ಮಾಡಿ ಎರಡು ರಸ್ತೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೂ ಭೀಮಾ ನೀರು ಸೇತುವೆಗಳ ಮೇಲೆ ಹರಿದು ಪದೇಪದೇ ಸಂಪರ್ಕ ಕಡಿತಗೊಳ್ಳುತ್ತದೆ. ಗ್ರಾಮಕ್ಕೆ ಮಂಜೂರಾಗಿದ್ದ ₹ 800 ಕೋಟಿ ವೆಚ್ಚದ ಭೀಮಾ ಏತನೀರಾವರಿ ಕೂಡ ನನಗೆದಿಗೆ ಬಿದ್ದಿದೆ.

ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತಾಗಿದೆ. ದಶಕದ ಹಿಂದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಪಾಳುಬಿದ್ದಿದೆ. ಇಷ್ಟು ದೊಡ್ಡ ಊರಿಗೆ ಆರೋಗ್ಯ ಕೇಂದ್ರವೇ ಇಲ್ಲ. ತುರ್ತು ಚಿಕಿತ್ಸೆ ಬೇಕಾದರೆ ಕಲಬುರ್ಗಿ, ಜೇವರ್ಗಿಗೇ ಹೋಗಬೇಕಾದ ಅನಿವಾರ್ಯವಿದೆ.

ತಾಂಡಾ ಜನರಿಗೆ ಬೇಕು ಸೌಕರ್ಯ
ಪೇಟ ಫಿರೋಜಾಬಾದ್‌ಗೆ ಹೊಂದಿಕೊಂಡ ತಾಂಡಾದಲ್ಲಿ ಸುಮಾರು 31 ಕುಟುಂಬಗಳು ವಾಸವಾಗಿವೆ. ಇಲ್ಲಿರುವ ಮೂರು ಸಣ್ಣ ರಸ್ತೆಗಳಿಗೆ ಚರಂಡಿಯೇ ಇಲ್ಲ. ದಶಕದ ಹಿಂದೆ ಮಾಡಿದ್ದ ಡಾಂಬರ್‌ ಕಿತ್ತುಹೋಗಿದೆ. ಕುಡಿಯುವ ನೀರಿನ ನಲ್ಲಿಗಳೂ ಚರಂಡಿ ಪಕ್ಕದಲ್ಲೇ ಇದ್ದು, ಮಲಿನ ನೀರು ಸೇರಿಕೊಳ್ಳುತ್ತಿದೆ ಎನ್ನುತ್ತಾರೆ ಮಂಜುಳಾ ಚವ್ಹಾಣ.

ಇಲ್ಲಿರುವ ಬಹುಪಾಲು ಮಂದಿಗೆ ಸ್ವಂತ ಜಮೀನು ಇಲ್ಲ. ಕೂಲಿಯನ್ನೇ ನಂಬಿಕೊಂಡಿದ್ದಾರೆ. ಸರ್ಕಾರದಿಂದ ಮಂಜೂರಾದ ಸಣ್ಣಸಣ್ಣ ಮನೆಗಳಲ್ಲಿ ಅವಿಭಕ್ತ ಕುಟುಂಬಗಳು ವಾಸಿಸುತ್ತಿವೆ. ಬೇಸಿಗೆಯಲ್ಲಿ ಉದ್ಯೋಗವಿಲ್ಲದೇ ಪರದಾಡುತ್ತಾರೆ. ಮಳೆಗಾಲದಲ್ಲಿ ಭೀಮಾ ನೀರು ತಾಂಡಾವರೆಗೂ ಬರುವುದರಿಂದ ಸಂಕಷ್ಟ ಅನುಭವಿಸುವುದು ಅನಿವಾರ್ಯವಾಗಿದೆ ಎನ್ನುವುದು ಸಂಗೀತಾ ಅವರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT