ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅರಣ್ಯ ಹೆಚ್ಚಳಕ್ಕೆ ಶ್ರಮಿಸಿ: ಸಚಿವ ಈಶ್ವರ ಖಂಡ್ರೆ

Published 18 ಫೆಬ್ರುವರಿ 2024, 16:12 IST
Last Updated 18 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅರಣ್ಯ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ. ಅಧಿಕಾರಿಗಳು ಅರಣ್ಯ ಹೆಚ್ಚಳಕ್ಕೆ ಶ್ರಮಿಸಬೇಕು’ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಬಂಜಾರ ಭವನದಲ್ಲಿ ಭಾನುವಾರ ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ 2024ನೇ ಸಾಲಿನ ದಿನಚರಿ ಹಾಗೂ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಭಾಗದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಮಾತ್ರ ಅರಣ್ಯ ಪ್ರಮಾಣ ಶೇ 5ಕ್ಕಿಂತ ಹೆಚ್ಚಿದೆ. ಬೇಸಿಗೆ ಕಾಲದಲ್ಲಿ ಕಲಬುರಗಿ ಜಿಲ್ಲೆಯ ತಾಪಮಾನ 45–46 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. ಕೆಲವೇ ವರ್ಷಗಳಲ್ಲಿ ಅದು 50 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ. ಆದ್ದರಿಂದ ಹಸಿರು ಹೊದಿಕೆ ಹೆಚ್ಚಿಸಬೇಕು ಎಂದರು.

ನಾವು ಹವಾಮಾನ ಬದಲಾವಣೆಯ ಸವಾಲನ್ನು ಎದುರುಗೊಂಡಿದ್ದೇವೆ. ಪ್ರಕೃತಿ ಮೇಲೆ ಮನುಷ್ಯನಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಆಧುನಿಕ ಜೀವನಶೈಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ವಿಷ ಸೇವಿಸುವ ಕಾಲಕ್ಕೆ ಸಾಕ್ಷಿಯಾಗುವ ಕಾಲ ದೂರವಿಲ್ಲ. ಕೊರೊನಾ ವೇಳೆ ಆಮ್ಲಜನಕದ ಬೇಡಿಕೆ ಪ್ರಕೃತಿಯ ಮಹತ್ವವನ್ನು ಮನಗಾಣಿಸಿದೆ. ಆದರೂ ಪಾಠ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅರಣ್ಯ ಪ್ರಮಾಣ ಆಧರಿಸಿ ಹುದ್ದೆಗಳಿಗೆ ಮಂಜೂರಾತಿ ನೀಡುತ್ತಿರುವ ಕಾರಣ ಕಲ್ಯಾಣ ಕರ್ನಾಟಕ ಭಾಗದವರಿಗೆ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಅನ್ಯಾಯವಾಗುತ್ತಿದೆ. ಜನಸಂಖ್ಯೆ ಹಾಗೂ ಭೌಗೋಳಿಕ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆಯ ಹುದ್ದೆಗಳಿಗೆ ಮಂಜೂರಾತಿ ನೀಡಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅರಣ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಎ.ಬಿ.ಪಾಟೀಲ ಮಾತನಾಡಿ, ‘ಈಶ್ವರ ಖಂಡ್ರೆಯವರು ಮಂತ್ರಿಯಾದ ಮೇಲೆ ಈ ಭಾಗಕ್ಕೆ ಆದ್ಯತೆ ನೀಡುತ್ತಿದ್ದಾರೆ. ನೌಕರರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದಾರೆ’ ಎಂದು ಹೇಳಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. 2023ರಲ್ಲಿ ನಿವೃತ್ತರಾದ ಸಿಬ್ಬಂದಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಧಿಕ 64–ಎ ಪ್ರಕರಣ ಇತ್ಯರ್ಥಪಡಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಒತ್ತುವರಿ ತೆರವಿನಲ್ಲಿ ವಿಶೇಷ ಸಾಧನೆ ಮಾಡಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣುಕುಮಾರ ಮೋದಿ, ಕಲಬುರಗಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪಂವಾರ್, ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್‌ ಕುಮಾರ ಎಸ್‌.ಪಾಟೀಲ, ಯಾದಗಿರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಅಜಿತ್ ಪಾಟೀಲ, ಯಾದಗಿರಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್‌.ಕೆ.ಭಗಾಯತ್, ರಾಯಚೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಾಬು, ನಿವೃತ್ತ ಅರಣ್ಯ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಆರ್‌.ಯಾದವ, ಖಾಲೀದ್ ಪಟೇಲ್ ಉಪಸ್ಥಿತರಿದ್ದರು.

ಪ್ರಕೃತಿ ಮೇಲೆ ನಿರಂತರ ದೌರ್ಜನ್ಯ ಸಾಧನೆ ಮಾಡಿದ ಸಿಬ್ಬಂದಿಗೆ ಸನ್ಮಾನ ಹವಾಮಾನ ಬದಲಾವಣೆ ಸವಾಲು
‘ಕಲಬುರಗಿ ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿಗೆ ಅನುದಾನ’
ಕಲಬುರಗಿ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರೂ ಅನುದಾನದ ಭರವಸೆ ನೀಡಿದ್ದಾರೆ. ಅಧಿಕಾರಿಗಳು ಏನು ಬೇಕು ಎಂದು ತಿಳಿಸಿದರೆ ನೆರವು ನೀಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಆಶ್ವಾಸನೆ ನೀಡಿದರು. ಬೀದರ್‌ ಜಿಲ್ಲೆಯಲ್ಲಿ 15 ಲಕ್ಷ ಸಸಿ ನೆಡಲಾಗಿದೆ. ಈ ಬಾರಿ ರಾಜ್ಯದ ಎಲ್ಲ ಕಡೆ ಅದರ ಎರಡು ಪಟ್ಟು ಸಸಿಗಳನ್ನು ನೆಡಲಾಗುವುದು. ಕೃಷಿ ಅರಣ್ಯೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಬಜೆಟ್‌ನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅನುದಾನ ಒದಗಿಸಲಾಗಿದೆ. ಚಿಂಚೋಳಿಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT