ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ತಾಪುರ: ಬಾರದ ಬಸ್: ವಿದ್ಯಾರ್ಥಿಗಳ ಪ್ರತಿಭಟನೆ

ಮುಡಬೂಳ, ಭಾಗೋಡಿ, ಕದ್ದರಗಿ, ಜೀವಣಗಿ ಗ್ರಾಮಗಳಿಗೆ ಹೋಗಲು ವಿದ್ಯಾರ್ಥಿಗಳ ಪರದಾಟ
Published 22 ಡಿಸೆಂಬರ್ 2023, 15:54 IST
Last Updated 22 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ಚಿತ್ತಾಪುರ: ಪಟ್ಟಣದಲ್ಲಿರುವ ವಿವಿಧ ಶಾಲೆಗಳಿಗೆ ಬಂದು ಶಾಲಾ ಸಮಯದ ನಂತರ ಮರಳಿ ತಮ್ಮ ಗ್ರಾಮಗಳಿಗೆ ಹೋಗಲು ಬಸ್ ಸಮಯಕ್ಕೆ ಬಾರದೆ ಎರಡು ಗಂಟೆಗಳ ಕಾಲ ಬಸ್ಸಿಗಾಗಿ ಕಾದು ನಿಲ್ದಾಣದಲ್ಲಿ ಕುಳಿತ್ತಿದ್ದ ವಿದ್ಯಾರ್ಥಿಗಳು ನಿಲ್ದಾಣದ ಮುಂದೆ ರಸ್ತೆ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಮುಡಬೂಳ, ಭಾಗೋಡಿ, ಕದ್ದರಗಿ, ಜೀವಣಗಿ ಗ್ರಾಮದ ವಿದ್ಯಾರ್ಥಿಗಳು ಶಾಲೆ ಮುಗಿಸಿಕೊಂಡು ಸಂಜೆ 4.30ಕ್ಕೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. 5 ಗಂಟೆಗೆ ಅಗಮಿಸಬೇಕಾದ ಬಸ್ ಸಂಜೆ 7 ಗಂಟೆಯಾದರೂ ಬಾರದಿದ್ದಾಗ ನೂರಾರು ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬಸ್ ನಿಲ್ದಾಣದಲ್ಲಿಯೇ ಸಾರಿಗೆ ಅಧಿಕಾರಿ ವಿರುದ್ಧ ಘೋಷಣೆ ಕೂಗಿ, ಯಾವುದೇ ಬಸ್ ನಿಲ್ದಾಣದಿಂದ ಹೊರಗಡೆ ಹೋಗದಂತೆ ತಡೆದು ಆಕ್ರೋಶ ವ್ಯಕ್ತ ಮಾಡಿದರು.

ಸ್ಥಳೀಯ ಬಸ್ ಘಟಕದ ವ್ಯವಸ್ಥಾಪಕರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ನಿಲ್ದಾಣದ ಸಂಚಾರ ನಿಯಂತ್ರಕರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದರು.

ದಿನವೂ ಸಮಯಕ್ಕೆ ಸರಿಯಾಗಿ ಬಸ್ ಬರುವುದೇ ಇಲ್ಲ. ಒಂದೇ ಬಸ್ ಓಡಿಸುತ್ತಿದ್ದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಜೀವಣಗಿ ಗ್ರಾಮದ ವಿದ್ಯಾರ್ಥಿಗಳನ್ನು ಗ್ರಾಮದಿಂದ ಒಂದು ಕಿ.ಮೀ ದೂರದಲ್ಲೇ ಇಳಿಸುತ್ತಾರೆ. ರಾತ್ರಿಯಲ್ಲಿ ನಡೆದುಕೊಂಡು ಹೋಗಲು ತೊಂದರೆಯಾಗುತ್ತಿದೆ.  ನಮಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತ ಮಾಡಿದರು. 

ಸ್ಥಳಕ್ಕಾಗಮಿಸಿದ ಪಿಎಸ್ಐ ಶ್ರೀಶೈಲ್ ಅಂಬಾಟಿ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಮನವೊಲಿಸಿ ಸಂಚಾರ ಸಮಸ್ಯೆ ನಿವಾರಿಸಿದರು. ಸಾರಿಗೆ ಅಧಿಕಾರಿಗಳನ್ನು ಸಂಪರ್ಕಿಸಿ ಎರಡು ಬಸ್ಸಿನ ವ್ಯವಸ್ಥೆ ಮಾಡಿಸಿದರು. ವಿದ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟು ಗ್ರಾಮಗಳಿಗೆ ತೆರಳಿದರು. ದಿನಾಲೂ ಕದ್ದರಗಿ ಗ್ರಾಮಕ್ಕೆ ಹೊಗಿ ಬರುತ್ತಿದ್ದ ಬಸ್ ಇವತ್ತು ಕದ್ದರಗಿ ಗ್ರಾಮದಲ್ಲಿಯೆ ಕೆಟ್ಟು ನಿಂತಿದೆ. ಹೀಗಾಗಿ ಬಸ್ಸಿನ ಸಮಸ್ಯೆಯಾಗಿದೆ ಎಂದು ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು ಪಿಎಸ್ಐ ಅವರಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT