ಚಿಂಚೋಳಿ: ‘ಶಾಸಕ ಡಾ.ಅವಿನಾಶ ಜಾಧವ ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ಮೊದಲು ಅವರು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಂಚೋಳಿ ಕ್ಷೇತ್ರದ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮತ್ತು ಕಾಂಗ್ರೆಸ್ ಪಕ್ಷದ ಸಹಕಾರ ಸದಾ ಇರಲಿದೆ. ಆದರೆ ಶಾಸಕರು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಲಾಗದೇ ಬೇರೊಬ್ಬರ ಮೇಲೆ ಆರೋಪ ಮಾಡುವುದು ಎಷ್ಟು ಸರಿ? ಇಂತಹ ಹೇಳಿಕೆ ಬಾಲಿಶತನದಿಂದ ಕೂಡಿದೆ ಎಂದರು. ‘ಅಧಿಕಾರಿಗಳು ನಿಮ್ಮ ಮಾತು ಕೇಳದಿದ್ದರೆ ಅದು ನಿಮ್ಮ ವೈಫಲ್ಯ. ವಿನಾಕಾರಣ ಜಿಲ್ಲಾ ಉಸ್ತುವಾರಿ ಸಚಿವರನ್ನು ಎಳೆದು ತರುವುದು ಸರಿಯಲ್ಲ’ ಎಂದರು.
ಇಂದು ಪ್ರತಿಭಟನೆ: ರಾಜ್ಯಪಾಲರ ನಡೆ ವಿರೋಧಿಸಿ ಆ.19ರಂದು ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಅನಿಲಕುಮಾರ ಜಮಾದಾರ, ಸಂತೋಷ ಗುತ್ತೇದಾರ, ಲಕ್ಷ್ಮಣ ಆವುಂಟಿ, ಅಬ್ದುಲ್ ಬಾಷಿತ್, ಜಗನ್ನಾಥ ಕಟ್ಟಿ, ಸುರೇಶ ಬಂಟಾ, ಆನಂದ ಟೈಗರ್, ರಾಮಶೆಟ್ಟಿ ಪವಾರ ಮತ್ತು ತುಕಾರಾಮ ಪವಾರ, ಆರ್.ಗಣಪತರಾವ್ ಮೊದಲಾದವರು ಹಾಜರಿದ್ದರು.