ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ |ಬಿಸಿಲು,ಬಿಸಿಗಾಳಿಗೆ ಜನ ಹೈರಾಣ-ಮಕ್ಕಳು, ವಯೋವೃದ್ಧರಿಗೆ ಆರೋಗ್ಯ ಸಮಸ್ಯೆ

Published 30 ಏಪ್ರಿಲ್ 2024, 5:43 IST
Last Updated 30 ಏಪ್ರಿಲ್ 2024, 5:43 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ವಾರ ಕೊಂಚ ಮಳೆಯಾಗಿ ನೆಮ್ಮದಿ ನೀಡಿದ್ದ ವಾತಾವರಣ, ಈಗ ಬಿಸಿಗಾಳಿ ಜನರನ್ನು ಕಂಗೆಡಿಸಿದೆ. ಬೆಳಿಗ್ಗೆ 8 ಗಂಟೆಗೆಯಾದರೆ ಸಾಕು ಪ್ರಖರ ಬಿಸಿಲಿಗೆ ಮನೆ ಮೇಲಿನ ಟ್ಯಾಂಕ್‌ ನೀರು ಕಾಯಲು ಆರಂಭಿಸುತ್ತವೆ. ಹೊರಗಡೆ ಬಂದರೆ ಝಳದ ಅನುಭವ ಆರಂಭವಾಗುತ್ತಿದೆ.

ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯಂತೆ ಏ.29ರಂದು ಜಿಲ್ಲೆಯಲ್ಲಿ 42.34 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಬಿಸಿಗಾಳಿಗೆ ಹೆದರಿ ಜನರು ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಗಾಳಿಯು ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡಿದೆ.

ಕಂದಮ್ಮಗಳ ಗೋಳು: ಜಿಲ್ಲೆಯಲ್ಲಿ ಬಿಸಿಗಾಳಿ ಚಿಕ್ಕಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಶಾಖ ತಡೆದುಕೊಳ್ಳದೇ ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ಆಸ್ಪತ್ರೆಯಲ್ಲಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಹಳ್ಳಿ ಹಾಗೂ ಜಮೀನು ಪ್ರದೇಶದಲ್ಲಿ ವಾಸವಾಗಿರುವ ಜನರು ಬಿಸಿಗಾಳಿಗೆ ತತ್ತರಿಸಿ ಹೋಗಿದ್ದಾರೆ.

ಬಿಸಿಗಾಳಿಯ ಹೊಡೆತಕ್ಕೆ ದೊಡ್ಡವರಲ್ಲೂ ಸಹ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಮನೆಯಲ್ಲಿ ಇದ್ದರೂ ದಗೆ, ಹೊರಗಡೆ ಬಂದರೆ ಝಳದಿಂದ ಜನರು ಸುಸ್ತಾಗಿದ್ದಾರೆ. ಫ್ಯಾನ್‌ ಹಾಗೂ ಕೂಲರ್‌ನಂತಹ ವಸ್ತುಗಳ ಬಳಕೆ ಮಾಡಬೇಕು ಎಂದರೆ ಸರಿಯಾಗಿ ವಿದ್ಯುತ್‌ ಪೂರೈಕೆ ಇರುವುದಿಲ್ಲ.‌ ಝಳಕ್ಕೆ ಆರ್‌ಸಿಸಿ ಮನೆಗಳ ಛತ್ತು, ಪತ್ರಾಸ್‌ ಶೀಟುಗಳು ಕಾದು ಹೆಂಚಿನಂತಾಗಿವೆ. ಹಳ್ಳಿಗಳ ಜಮೀನಿನಲ್ಲಿ ದಿನವಿಡಿ ಕೂಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಯಂತೂ ಕೇಳುವಂತೆ ಇಲ್ಲ.

‘ತುತ್ತಿನ ಚೀಲು ತುಂಬಿಕೊಳ್ಳಲು ಅನಿವಾರ್ಯವಾಗಿ ಕೂಲಿ ಮಾಡಲು ಮುಂದಾದರೆ ಈ ಬಿಸಿಲಿಗೆ ದುಡಿದ ಹಣವೆಲ್ಲ ಆಸ್ಪತ್ರೆಗೆ ಹಾಕುವಂತಾಗಿದೆ’ ಎನ್ನುತ್ತಾರೆ ಕೂಲಿಕಾರ ಮಹಿಳೆ ಲಕ್ಷ್ಮಿಬಾಯಿ.

ಜಾನುವಾರುಗಳಿಗೆ ಸಮಸ್ಯೆ: ಬರದಿಂದ ಮೊದಲೇ ನೀರಿನ ಸಮಸ್ಯೆ ಇದೆ. ಹಸಿ ಮೇವು ಸಹ ಸಿಗುತ್ತಿಲ್ಲ. ಜಮೀನು ಪ್ರದೇಶದಲ್ಲಿ ದನಕರುಗಳನ್ನು ಕಟ್ಟಿ ಹಾಕಿದರೆ ಬಿಸಿಗಾಳಿಯಿಂದ ಸಾವನ್ನಪ್ಪುತ್ತಿವೆ.

ಬಿಸಿಗಾಳಿ ಏಪ್ರಿಲ್‌ 27ರಂದು ಆರಂಭವಾಗಿದ್ದು ಮೇ 3ರವರೆಗೆ ಮುಂದುವರಿಯಲಿದೆ. ನಂತರ ಸ್ವಲ್ಪ ಮಳೆ ನಿರೀಕ್ಷೆ ಮಾಡಬಹುದು. ಮೇ 20ರವರೆಗೆ ಬಿಸಿಗಾಳಿ ಭೀತಿ ಇದೆ
-ಬಸವರಾಜ ಬಿರಾದಾರ ತಾಂತ್ರಿಕ ಅಧಿಕಾರಿ ಹವಾಮಾನ ಇಲಾಖೆ
ಮೇ 2ರವರೆಗೆ ಬಿಸಿಗಾಳಿ ಎಚ್ಚರಿಕೆ
ಜಿಲ್ಲೆಯಲ್ಲಿ ಮೇ 2ರವರೆಗೆ ಬಿಸಿಗಾಳಿ ಬೀಸುವ ಸಾಧ್ಯತೆ ಇದೆ. ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್‌ ತಾಪಮಾನ ಏರಿಕಯಾಗುವ ಸಾಧ್ಯತೆ ಇದ್ದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆರೇಂಜ್‌ ಅಲರ್ಟ್‌ ಘೋಷಣೆ ಮಾಡಿದೆ.

ಸೂರ್ಯಾಘಾತ ನಿರ್ವಹಣೆ ಹೇಗೆ

ಬಿಸಿಗಾಳಿಯಿಂದ ದೇಹದಲ್ಲಿರುವ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಾಘಾತ (ಸನ್‌ಸ್ಟ್ರೋಕ್‌) ಉಂಟಾಗುತ್ತದೆ. ಶ್ರಮದಾಯಕ ಕೆಲಸ ಮಾಡದೇ ಹೆಚ್ಚು ನೀರನ್ನು ಕುಡಿಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ತಿಳಿ ಬಣ್ಣದ ಬಟ್ಟೆ ಧರಿಸಬೇಕು. ಕೆಲಸ ಮಾಡುವಾಗ ಆಗಾಗ ವಿಶ್ರಾಂತಿ ಪಡೆಯಬೇಕು. ನೀರಿನ ಅಂಶಗಳು ಇರುವ ತರಕಾರಿಗಳನ್ನು ಸೇವನೆ ಮಾಡಬೇಕು. ಮಕ್ಕಳ ವಿಶೇಷ ಕಾಳಜಿ ಅಗತ್ಯ: ಮಕ್ಕಳಲ್ಲಿ ನಿರ್ಜಲೀಕರಣ ತಪ್ಪಿಸಲು ಪ್ರತಿದಿನ 2ರಿಂದ 3 ಲೀಟರ್‌ ನೀರು ಕಡಿಸಬೇಕು. ಮಕ್ಕಳಿಗೆ ಎರಡು ಬಾರಿ ಸ್ಥಾನ ಮಾಡಿಸುವುದು ಉತ್ತಮ. ತೆಳುವಾದ ಬಟ್ಟೆಯನ್ನು ಹಾಕಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT