ಕಲಬುರ್ಗಿ | ಈದ್ ಪ್ರಾರ್ಥನೆಗೆ ನೆರವು, ಎಲ್ಲ ಧರ್ಮೀಯರಿಗಾಗಿ ಪ್ರಾರ್ಥನೆ

ಕಲಬುರ್ಗಿ: ಈ ಬಾರಿಯ ಈದ್ ಉಲ್ ಫಿತ್ರ್‌ನ ವಿಶೇಷ ಪ್ರಾರ್ಥನೆಯನ್ನು ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ‘ಯೂಟ್ಯೂಬ್’ ಮೂಲಕ ಮಾರ್ಗದರ್ಶನ ನೀಡಲು, ಇಲ್ಲಿನ ಖಾಜಾ ಬಂದಾ ನವಾಜ್ ದರ್ಗಾಮುಖ್ಯಸ್ಥ ರಾದ ಡಾ.ಸಯ್ಯದ್ ಶಾ ಖುಸ್ರೊ ಹುಸೇನಿ ಸಾಹೇಬ್ ಸಜ್ಜಾದಾ ನಶೀನ್ ನಿರ್ಧರಿಸಿದ್ದಾರೆ.
ಮುಸ್ಲಿಮರು ತಿಂಗಳ ಉಪವಾಸ ಮುಗಿಸಲು ಇನ್ನೆರಡು ದಿನ ಮಾತ್ರ ಬಾಕಿ ಇದೆ. ಭಾಗಶಃ ಸೋಮವಾರ (ಮೇ 25) ಈದ್ ಉಲ್ ಫಿತ್ರ್ ಆಚರಿಸಲಾಗುತ್ತಿದೆ. ಪ್ರತಿ ಬಾರಿ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಸೇರಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಈ
ಬಾರಿ ಲಾಕ್‌ಡೌನ್ ಹಾಗೂ ನಿಷೇಧಾಜ್ಞೆ ಜಾರಿ ಇರುವ ಕಾರಣ, ಈದ್ಗಾ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಮಾತ್ರವಲ್ಲ; ಮಸೀದಿ, ದರ್ಗಾಗಳಲ್ಲೂ ಗುಂಪು ಗೂಡುವುದನ್ನು ನಿರ್ಬಂಧ ಗೊಳಿಸಲಾಗಿದೆ.
ಈದ್ ಸಂದರ್ಭದಲ್ಲಿ ಸಲ್ಲಿಸುವ ವಿಶೇಷ ಪ್ರಾರ್ಥನೆ ಬಗ್ಗೆ ಸಾಮಾನ್ಯ ಮುಸ್ಲಿಮರಿಗೆ ಮಾರ್ಗದರ್ಶನ ಅವಶ್ಯ. ಪ್ರತಿ ವರ್ಷ ಮೈದಾನದಲ್ಲೇ ಧರ್ಮಗುರುಗಳು ಬೋಧಿಸಿದ ಹಾಗೆ ಪ್ರಾರ್ಥನೆ ಸಲ್ಲಿಸಲಾಗುತಿತ್ತು. ಈ ಬಾರಿ ಅದು ಸಾಧ್ಯವಿಲ್ಲದ ಕಾರಣ, ಯು ಟೂಬ್ ಮೊರೆಹೋಗಲು ದರ್ಗಾದ ಮುಖಂಡರು ನಿರ್ಧರಿಸಿದ್ದಾರೆ.ಶನಿವಾರ (ಮೇ 23) ಸಂಜೆ ದರ್ಗಾದಲ್ಲಿ ಐವರು ಕೂತುಕೊಂಡು ಪ್ರಾರ್ಥನೆ ಪ್ರಾತ್ಯಕ್ಷಿಕೆ ನೀಡುತ್ತಾರೆ. ಇದು ಖಾಜಾ ಬಂದಾ ನವಾಜ್ ದರ್ಗಾದ ಯು ಟೂಬ್ ಚಾನೆಲ್‌ನಲ್ಲಿ ಸಿಗುತ್ತದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಾ.ಸಯ್ಯದ್ ಶಾ ಖುಸ್ರೊ ಹುಸೇನಿ ಅವರು, ‘ಕೊರೊನಾ ವೈರಾಣುವಿನಿಂದ ದೂರ ಉಳಿಯಲು ಈ ಬಾರಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದು ಬೇಡ. ಸುರಕ್ಷತೆ ಎಲ್ಲರಿಗೂ ಅಗತ್ಯ. ನಮ್ಮ ದೈಹಿಕ ಆರೋಗ್ಯ ಸುಧಾರಿಸಿ ಮತ್ತು ಮನಸ್ಸು ಏಕಚಿತ್ತದಿಂದ ದೇವರಲ್ಲಿ ವಿಲೀನಗೊಳ್ಳಲಿ ಎಂಬ ಉದ್ದೇಶದಿಂದ ರಂಜಾನ್ ಮಾಸದಲ್ಲಿ ಉಪವಾಸ ಮಾಡುವ ರೂಢಿ ಇದೆ’ ಎಂದರು.
‘ಸಾಮೂಹಿಕ ಪ್ರಾರ್ಥನೆಯ ಬದಲು ನಾವು ಆರೋಗ್ಯಕ್ಕೆ, ಕಾನೂನು ಪರಿಪಾಲನೆಗೆ ಗಮನವನ್ನು ಕೊಡೋಣ. ಯಾರಿಗೆ ಎಲ್ಲಿ ಪ್ರಾರ್ಥನೆ ಮಾಡಲು ಸಾಧ್ಯ ಇದೆಯೋ ಅಲ್ಲಿಂದಲೇ ಸಲ್ಲಿಸಬಹುದು. ಇದರ ವಿಧಾನ– ನಿಯಮಗಳನ್ನು ಯು ಟೂಬ್ ಮೂಲಕ ಹಾಗೂ ವಿವಿಧ ಚಾನಲ್‌ಗಳ ಮೂಲಕವೂ ಪ್ರಸಾರ ಮಾಡುತ್ತೇವೆ’ ಎಂದರು.
‘ಕೋವಿಡ್ ಸೋಂಕು ಯಾವುದೇ ಧರ್ಮ ನೋಡಿಕೊಂಡು ಬಂದಿದ್ದಲ್ಲ. ಅದು ಮನುಷ್ಯ ಇಡೀ ಸಂಕುಲಕ್ಕೆ ಅಂಟಿಕೊಂಡು ವಿಶ್ವದ ತುಂಬ ವ್ಯಾಪಿಸಿದೆ. ಧರ್ಮಭೇದ ಇಲ್ಲದೇ ಒಬ್ಬರಿ ಗೊಬ್ಬರು ಸಹಕರಿಸಿ, ಆರೋಗ್ಯ ಕಾಪಾಡಿಕೊಳ್ಳ ಬೇಕಿದೆ. ಒಬ್ಬರಿಂದ ಒಬ್ಬರು ದೂರ ಇದ್ದುಕೊಂಡೇ ಹೋರಾಟ ನಡೆಸಬೇಕಾದ ಸಂದಿಗ್ಧ ಸ್ಥಿತಿಯಲ್ಲಿ ನಾವಿದ್ದೇವೆ. ಹಿಂದೆಂದಿಗಿಂತ ಈಗ ನಮ್ಮ ಸಾಮರಸ್ಯ ಹೆಚ್ಚು ಅಗತ್ಯವಿದೆ’ ಎಂದು ಅವರು ತಿಳಿಸಿದ್ದಾರೆ.
ಎಲ್ಲರ ಆರೋಗ್ಯಕ್ಕಾಗಿ ನನ್ನ ಪ್ರಾರ್ಥನೆ
‘ಹಿಂದೂ, ಮುಸ್ಲಿಂ, ಕ್ರೌಸ್ತ, ಬೌದ್ಧ, ಸಿಖ್ ಜನರಿಗೆ ನಾನು ಹಬ್ಬದ ಶುಭಾಶಯ ಹೇಳುತ್ತೇನೆ. ಎಲ್ಲರ ಆರೋಗ್ಯಕ್ಕಾಗಿ ನಾನು ಪ್ರಾರ್ಥನೆ ಸಲ್ಲಿಸುತ್ತೇನೆ. ನೀವೂ ಮನೆಯಲ್ಲೇ ಪ್ರಾರ್ಥನೆ ಮಾಡಿ. ಕೊರೊನಾ ವೈರಸ್‌ನಿಂದ ಮನುಷ್ಯ ಕುಲವೇ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಈ ಶತ್ರುವಿನ ವಿರುದ್ಧ ಹೋರಾಡಬೇಕಿದೆ’ ಎಂದು ಖಾಜಾ ಬಂದಾ ನವಾಜ್ ದರ್ಗಾ ಮುಖ್ಯಸ್ಥ ಡಾ.ಸಯ್ಯದ್ ಶಾ ಖುಸ್ರೊ ಹುಸೇನಿ ಸಾಹೇಬ್ ಸಜ್ಜಾದಾ ನಶೀನ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.