ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಮತದಾನ ಅರಿವಿಗೆ ಜಾಗೃತಿ ವಾಹನ ಸಜ್ಜು

ಜಿಲ್ಲೆಯ ಅವಿಭಜಿತ ಎಂಟು ತಾಲ್ಲೂಕುಗಳಲ್ಲಿ ಸಂಚರಿಸಲಿರುವ ಜಾಗೃತಿ ವಾಹನ
ಬಷೀರಅಹ್ಮದ್ ನಗಾರಿ
Published 7 ಏಪ್ರಿಲ್ 2024, 6:26 IST
Last Updated 7 ಏಪ್ರಿಲ್ 2024, 6:26 IST
ಅಕ್ಷರ ಗಾತ್ರ

ಕಲಬುರಗಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಮುಂದಾಗಿರುವ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್‌(ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಸಮಿತಿ, ಜಿಲ್ಲೆಯ ಜನರಲ್ಲಿ ಮತದಾನ ಕುರಿತು ಅರಿವು ಮೂಡಿಸಲು ಚುನಾವಣಾ ಜಾಗೃತಿ ವಾಹನಗಳನ್ನು ಸಜ್ಜುಗೊಳಿಸಿದೆ.‌ ಅವುಗಳಿಗೆ ಶೀಘ್ರವೇ ಚಾಲನೆ ಸಿಗಲಿದೆ.

ಜಿಲ್ಲೆಯ ಅವಿಭಜಿತ ಎಂಟು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ತಲಾ ಒಂದೊಂದು ವಾಹನಗಳು ಸಂತೆ, ಜನರ ಗುಂಪು, ಜಾತ್ರೆಗಳಂಥ ಜನದಟ್ಟಣೆ ಇರುವ ಕಡೆಗೆ ಹೋಗಿ ಮತದಾನ ಕುರಿತು ಜಾಗೃತಿ ಮೂಡಿಸಲಿವೆ. ಇದರಿಂದ ಮತದಾನ ಜಾಗೃತಿ ಮೂಡಿ, ಪ್ರಸಕ್ತ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.

ಏನಿ ವಾಹನದ ವೈಶಿಷ್ಟ್ಯ?

ಕೃಷಿ ಇಲಾಖೆಯ ಕೃಷಿ ಸಂಜೀವಿನಿ ವಾಹನಗಳಿಗೆ ಹೊಸ ಸ್ಪರ್ಶ ನೀಡಿ, ಅವುಗಳನ್ನು ಮತದಾನ ಜಾಗೃತಿ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ವಾಹನದ ತುಂಬೆಲ್ಲ ಮತದಾನಕ್ಕೆ ಸಂಬಂಧಿಸಿದ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ವಾಹನದಲ್ಲಿ ಚುನಾವಣೆಗೆ ಸಂಬಂಧಿಸಿದ ವಿಡಿಯೊ ಸಹಿತ ಐದು ಹಾಡುಗಳು, ಚುನಾವಣೆ ಕುರಿತು ಗಣ್ಯರ ಅಭಿಪ್ರಾಯಗಳು ಬಿತ್ತರಗೊಳ್ಳಲಿವೆ.

ವಾಹನದ ಬಾನಟ್‌ ಮೇಲೆ ‘ಮೇ 07’ ಎಂದು ದೊಡ್ಡ ಅಕ್ಷರಗಳಲ್ಲಿದ್ದು, ಅದರ ಅಡಿಯಲ್ಲಿ ‘ನನ್ನ ಮತ, ನನ್ನ ಹಕ್ಕು, ನನ್ನ ಆಯ್ಕೆ’ ಎಂದು ಬರೆಸಲಾಗಿದೆ. ನಂಬರ್‌ ಪ್ಲೇಟ್‌ನ ಎರಡೂ ಬದಿಗೆ ‘ಮತದಾನ ದಿನ ಮಂಗಳವಾರ 07’ ಎಂಬ ಸ್ಟಿಕ್ಕರ್‌ ಅಂಟಿಸಲಾಗಿದೆ.

ಬಲಬದಿಗೆ ‌‌‘ಸಿ–ವಿಜಿಲ್‌’ ಆ್ಯಪ್‌ನಿಂದ ಯಾವೆಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಎಂಬ ಮಾಹಿತಿ ಇದೆ. ಅದರ ಪಕ್ಕದಲ್ಲಿ ಇವಿಎಂನಲ್ಲಿ ಮತ ಚಲಾಯಿಸುವುದು ಹೇಗೆ? ವಿವಿಪ್ಯಾಟ್‌ ಯಂತ್ರ ಹೇಗೆ ಬಳಸುವುದು ಎಂಬ ವಿಸ್ತೃತ ಮಾಹಿತಿಯ ಸ್ಟಿಕ್ಕರ್‌ ಅಂಟಿಸಲಾಗಿದೆ. ಪಕ್ಕದಲ್ಲೇ ಮತದಾನ ಮಹತ್ವ ಸಾರುವ ಸ್ಟಿಕ್ಕರ್‌, ಮತದಾನದ ವೇಳೆ ಮಹಿಳೆಯರು, ಅಂಗವಿಕಲರಿಗೆ ಇರುವ ಸೌಲಭ್ಯಗಳ ಮಾಹಿತಿ ಒದಗಿಸಲಾಗಿದೆ.

ಮತ್ತೊಂದು ಬದಿಗೆ ಆಡಿಯೊ–ವಿಡಿಯೊ ಪ್ರದರ್ಶನ ಫಲಕವಿದ್ದು, ಅದರ ಪಕ್ಕದಲ್ಲೇ ‘ವೋಟರ್‌ ಹೆಲ್ಪ್‌ಲೈನ್‌’ ಬಳಸಿ ಮತದಾರರ ಪಟ್ಟಿಯಲ್ಲಿ ಇಂದೇ ನಿಮ್ಮ ಹೆಸರು ಪರಿಶೀಲಿಸಿಕೊಳ್ಳಿ’, ‘ಮತದಾನಕ್ಕಿಂತ ಮಿಗಿಲಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ’ ಎಂದು ಬರೆಸಲಾಗಿದೆ.

‘ನೌಕರರ ವರ್ಗದಲ್ಲಿ ಜಾಗೃತಿಗಾಗಿ ಎಲ್ಲ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳ ಕಚೇರಿಯಲ್ಲಿ ಮತದಾರರ ಜಾಗೃತಿ ವೇದಿಕೆ ಸ್ಥಾಪಿಸಿ, ಮತದಾನದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ಗಳನ್ನು ಸ್ಥಾಪಿಸಿ ಯುವ ಜನರಿಗೆ ಮತದಾನ ಮಹತ್ವ ಮೂಡಿಸಲಾಗಿದೆ. ಇದರೊಂದಿಗೆ ನರೇಗಾ ಕೆಲಸ ಸ್ಥಳದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿ, ತಪ್ಪದೇ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ. ಶಾಲಾ–ಕಾಲೇಜು, ಸಾರ್ವಜನಿಕ ಸ್ಥಳಗಳು ಮತದಾನ ಜಾಗೃತಿ ಹಾಗೂ ಮತದಾನದ ದಿನಾಂಕದ ಭಿತ್ತಿಚಿತ್ರ ಅಂಟಿಸುವ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಅಬ್ದುಲ್‌ ಅಜೀಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರೇ ಮೇ 7 ಮರೆಯದಿರಿ’ ‘ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 63.04ರಷ್ಟು ಮತದಾನವಾಗಿತ್ತು. ಈ ಸಲ ಮತದಾನ ಪ್ರಮಾಣ ಶೇ75ಕ್ಕೆ ಹೆಚ್ಚಿಸುವ ಗುರಿಯಿದೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಿಲ್ಲೆಯಲ್ಲಿ 2328 ಮತಗಟ್ಟೆಗಳಿದ್ದು ಈ ಪೈಕಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ 180ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವಿಶೇಷ ಒತ್ತು ನೀಡಿ ಈ ಸಲ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಜೊತೆಗೆ ಸ್ಥಳೀಯ ಬಿಎಲ್‌ಒಗಳ ಸಹಾಯದಿಂದ ಕಳೆದ ಚುನಾವಣೆಯಲ್ಲಿ ಮತ ಹಾಕದವರ ಮನೆ–ಮನೆಗೆ ಭೇಟಿ ನೀಡಿ ಅವರಲ್ಲಿ ಮತದಾನದ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಅವರು ತಿಳಿಸಿದರು. ‘ಕಡಿಮೆ ಮತದಾನ ದಾಖಲಾದ ಮತಗಟ್ಟೆಗಳ ಪೈಕಿ ಬಹುತೇಕ ನಗರ–ಪಟ್ಟಣ ಪ್ರದೇಶಗಳಲ್ಲಿದ್ದು ವಿಶೇಷ ಒತ್ತು ನೀಡಿ ಅಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಜನರು ಮೇ 7ರಂದು ತಪ್ಪದೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸುವುದನ್ನು ಮರೆಯಬಾರದು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ನೆರವಾಗಬೇಕು’ ಎಂದು ಭಂವರ್‌ ಸಿಂಗ್ ಮೀನಾ ಕೋರಿದರು.

182 ಮತಗಟ್ಟೆಗಳಲ್ಲಿ ವಿಶೇಷ ಒತ್ತು ‌‘2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದಲ್ಲಿ ಸರಾಸರಿ ಶೇ 68.61ರಷ್ಟು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಸರಾಸರಿ ಶೇ 65.74ರಷ್ಟು ಮತದಾನವಾಗಿತ್ತು. ಜಿಲ್ಲೆಯಲ್ಲಿ ರಾಜ್ಯ ಸರಾಸರಿ ಪ್ರಮಾಣಕ್ಕಿಂತ ಶೇ20ರಷ್ಟು ಕಡಿಮೆ ಮತದಾನವಾದ 31 ಮತಗಟ್ಟೆಗಳು ಶೇ 15ರಷ್ಟು ಕಡಿಮೆ ಮತದಾನವಾದ 34 ಮತಗಟ್ಟೆಗಳು ಹಾಗೂ ಶೇ 10ರಷ್ಟು ಕಡಿಮೆ ಮತದಾನವಾದ 117 ಮತಗಟ್ಟೆಗಳು ಸೇರಿದಂತೆ ಒಟ್ಟು 182 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅಲ್ಲಿ ವಿಶೇಷವಾಗಿ ಒತ್ತು ನೀಡಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಅಬ್ದುಲ್‌ ಅಜೀಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT